ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆರಡು ಆನೆಗಳ ಸೇರ್ಪಡೆ

ಪ್ರಗತಿ ಕಾಣದ ಚಿರತೆ ಸೆರೆ ಕಾರ್ಯಾಚರಣೆ; ನಾಡಿನತ್ತ ಮುಖಮಾಡುತ್ತಲೇ ಇವೆ ವನ್ಯಜೀವಿಗಳು
Last Updated 10 ಮಾರ್ಚ್ 2020, 10:43 IST
ಅಕ್ಷರ ಗಾತ್ರ

ತುಮಕೂರು: ನರಭಕ್ಷಕ ಚಿರತೆ ಸೆರೆಗೆ ಹೆಬ್ಬೂರು ಹೋಬಳಿ ಸುತ್ತಮುತ್ತ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ. ಈಗಾಗಲೇ ಎರಡು ಆನೆಗಳ ನೆರವಿನಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಎರಡು ಮೂರು ದಿನಗಳಲ್ಲಿ ಮತ್ತೆರಡು ಆನೆಗಳು ಈ ತಂಡಕ್ಕೆ ಸೇರುವ ಸಾಧ್ಯತೆ ಇದೆ.

ನಾಗರಹೊಳೆಯಿಂದ ಬಂದಿರುವ 10 ಸಿಬ್ಬಂದಿಯ ಜತೆಗೆ ಜಿಲ್ಲಾ ಅರಣ್ಯ ಇಲಾಖೆಯ ಸಿಬ್ಬಂದಿಯೂ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಹುಲಿಗಳ ಜಾಡು ಹಿಡಿಯುವಲ್ಲಿ ಪರಿಣತರಾಗಿರುವ ಚಾಮರಾಜನಗರ ತಾಲ್ಲೂಕಿನ ಅಟ್ಟಗುಳಿಪುರದ ಆಲುಮೇಗೌಡ, ಶಿವಣ್ಣೇಗೌಡ, ಪುಣಜೂರಿನ ಬೇದೇಗೌಡ, ಅಲಗೇಗೌಡ ಅವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಆದರೆ ಚಿರತೆ ಸೆರೆ ಸಾಧ್ಯವಾಗದ ಕಾರಣ ಅವರು ವಾಪಸ್ ತೆರಳಿದ್ದಾರೆ.

ಇಲ್ಲಿನ 12 ಕಿ.ಮೀ ವ್ಯಾಪ್ತಿಯಲ್ಲಿ ಅಳವಡಿಸಿರುವ 60 ಕ್ಯಾಮೆರಾಗಳಲ್ಲಿಯೂ ಇತ್ತೀಚೆಗೆ ಚಿರತೆಗಳ ಚಲನವಲನಗಳು ಸೆರೆಯಾಗಿಲ್ಲ. ಜನರಲ್ಲಿ ಊಹಾಪೋಹಗಳು ಸಹ ಹೆಚ್ಚುತ್ತಲೇ ಇವೆ.

ಯಾವ ಚಿರತೆ ಎನ್ನುವುದೇ ಪತ್ತೆ ಇಲ್ಲ

ಯಾವುದು ನರಭಕ್ಷಕ ಚಿರತೆ ಎನ್ನುವ ಪತ್ತೆಯೇ ಸವಾಲಾಗಿದೆ. ಈ ಹಿಂದೆ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ಚಿರತೆ, ಬೈಚೇನಹಳ್ಳಿಯಲ್ಲಿ ಚಂದನಾ ಮೇಲೆ ದಾಳಿ ನಡೆಸಿದ ಹಾಗೂ ಬನ್ನಿಕುಪ್ಪೆ, ಮಣಿಕುಪ್ಪೆ, ದೊಡ್ಡಮಳಲವಾಡಿಯಲ್ಲಿ ಮನುಷ್ಯರನ್ನು ಕೊಂದ ‌ಚಿರತೆ ಒಂದೇ ಆಗಿದೆಯೇ ಎನ್ನುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಲ್ಲಿಯೂ ಖಚಿತ ಉತ್ತರವಿಲ್ಲ.

ದಿನದಿಂದ ದಿನಕ್ಕೆ ಚಿರತೆ ಸೆರೆ ಅರಣ್ಯ ಇಲಾಖೆಗೆ ಸವಾಲಾಗಿದೆ. ಮತ್ತೊಂದು ಕಡೆ ಜನರಲ್ಲಿ ಭಯ ಹೆಚ್ಚುತ್ತಿದೆ. ಚಿರತೆ ಹಾವಳಿ ಹೆಚ್ಚಿರುವ ಗ್ರಾಮಗಳ ಸುತ್ತಮುತ್ತಲಿನ ಪೊದೆಗಳನ್ನು ತೆರವುಗೊಳಿಸುವಂತೆ ಗ್ರಾಮ ಪಂಚಾಯಿತಿಗಳಿಗೆ ಜಿಲ್ಲಾಧಿಕಾರಿ ಈಗಾಗಲೇ ಸೂಚಿಸಿದ್ದಾರೆ. ಚಿರತೆ ಹಾವಳಿ ಹೆಚ್ಚಿರುವ ಕಡೆಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯೂ ಪೊದೆಗಳನ್ನು ತೆರವುಗೊಳಿಸುತ್ತಿದ್ದಾರೆ.

‘ಕೂಬಿಂಗ್ ಕಾರ್ಯ ನಡೆಯುತ್ತಿದೆ. ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಸಾರ್ವಜನಿಕರಿಂದಲೂ ಮಾಹಿತಿ ಇಲ್ಲ. ಬೆಳಿಗ್ಗೆಯಿಂದ ಸಂಜೆಯವರೆಗೂ ಕಾರ್ಯಾಚರಣೆ ನಡೆಯುತ್ತಿದೆ’ ಎಂದು ಜಿಲ್ಲಾ ಅರಣ್ಯ ಉಪಸಂರಕ್ಷಣಾಧಿಕಾರಿ ಗಿರೀಶ್ ತಿಳಿಸಿದರು.

****

ಆನೆ ದಾಳಿ; ವೃದ್ಧರಿಗೆ ಗಾಯ

ತುಮಕೂರು ತಾಲ್ಲೂಕಿನ ಕೋಳಿಹಳ್ಳಿಯಲ್ಲಿ ಸೋಮವಾರ ಆನೆ ದಾಳಿಯಿಂದ ವೆಂಕಟಾಚಲಮೂರ್ತಿ (70) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ವೆಂಕಟಾಚಲಮೂರ್ತಿ ಅವರ ಕೈ, ಕಾಲಿನ ಮೂಳೆಗಳು ಮುರಿದಿವೆ. ಎದೆ, ಹೊಟ್ಟೆ, ಸೊಂಟದ ಭಾಗಕ್ಕೂ ಪೆಟ್ಟಾಗಿದೆ. ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

‘ದಾಳಿ ನಡೆಸಿದ ಪ್ರದೇಶ ಆನೆ ಕಾರಿಡಾರ್ ವ್ಯಾಪ್ತಿಯಲ್ಲಿ ಇದೆ. ಇಲ್ಲಿ ಅವುಗಳ ಚಲನವಲನವೂ ಇದೆ. ಸಂಜೆ ವೇಳೆಗೆ ನೆಲಮಂಗಲದತ್ತ ಆನೆ ಸಾಗಿತು’ ಎಂದು ಜಿಲ್ಲಾ ಅರಣ್ಯ ಉಪಸಂರಕ್ಷಣಾಧಿಕಾರಿ ಗಿರೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್‌ ಆಸ್ಪತ್ರೆಗೆ ಭೇಟಿ ನೀಡಿ ಆನೆ ದಾಳಿಗೆ ತುತ್ತಾದ ವೆಂಕಟಾಚಲಪತಿ ಅವರ ಆರೋಗ್ಯ ವಿಚಾರಿಸಿದರು. ಚಿಕಿತ್ಸೆ ವೆಚ್ಚ ಭರಿಸುವುದಾಗಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT