ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನೀರಾವರಿ ಯೋಜನೆಯಲ್ಲಿ ಹಣ ಲೂಟಿ: ಆಂಜನೇಯ ರೆಡ್ಡಿ

Published : 14 ಫೆಬ್ರುವರಿ 2024, 5:40 IST
Last Updated : 14 ಫೆಬ್ರುವರಿ 2024, 5:40 IST
ಫಾಲೋ ಮಾಡಿ
Comments

ತುಮಕೂರು: ಪ್ರಸ್ತುತ ನೀರಾವರಿ ಯೋಜನೆಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಲೂಟಿಯಾಗುತ್ತಿದೆ ಎಂದು ಬಯಲು ಸೀಮೆಯ ಶಾಶ್ವತ ನೀರಾವರಿ
ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ಆತಂಕ ವ್ಯಕ್ತಪಡಿಸಿದರು.

ತುಮಕೂರು ವಿಶ್ವವಿದ್ಯಾಲಯದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅಧ್ಯಯನ ಪೀಠ ಮತ್ತು ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗ ಮಂಗಳವಾರ ಆಯೋಜಿಸಿದ್ದ ‘ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ರೈತ ಹೋರಾಟಗಳು– ಸಮಕಾಲೀನ ಸವಾಲುಗಳು’ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೀಜಕ್ಕಾಗಿ ಬಹುರಾಷ್ಟ್ರೀಯ ಕಂಪನಿಗಳನ್ನು ರೈತರು ಅವಲಂಬಿಸಿದ್ದು, ಮುಂದೆ ಸಾಕಷ್ಟು ಅಪಾಯಗಳನ್ನು ತಂದೊಡ್ಡಲಿದೆ. ರಾಸಾಯನಿಕ ಸಿಂಪಡಿಸಿ ಭೂಮಿಯ ಫಲವತ್ತತೆ ನಾಶ ಮಾಡಿದ್ದೇವೆ. ಇದರಿಂದಾಗಿ ನಾವು ಸೇವಿಸುವ ತರಕಾರಿಗಳಲ್ಲಿ ಲೋಹದ ಅಂಶಗಳು ಪತ್ತೆಯಾಗುತ್ತಿವೆ. ಕುಡಿಯುವ ನೀರಿನಲ್ಲಿ ಯುರೇನಿಯಂ ಅಂಶ ಸೇರುತ್ತಿದೆ. ಇದರಿಂದಾಗಿ ಆರೋಗ್ಯದ ಸಮಸ್ಯೆ ಎದುರಾಗಲಿದೆ ಎಂದು ಎಚ್ಚರಿಸಿದರು.

ರೈತ ಸಂಘಟನೆಗಳು ಸರ್ಕಾರದ ಮುಂದೆ ತಾತ್ಕಾಲಿಕ ಬೇಡಿಕೆಗಳನ್ನು ಮಂಡಿಸುತ್ತಿವೆ. ಅಧ್ಯಯನಶೀಲ, ಸಂಶೋಧನಾತ್ಮಕ ಬೇಡಿಕೆಗಳು ಇಲ್ಲವಾಗಿವೆ. ವೈಜ್ಞಾನಿಕ ದೃಷ್ಟಿಯಿಂದ ಸಮಸ್ಯೆಗಳನ್ನು ಅವಲೋಕಿಸಿ ಪರಿಹಾರ ರೂಪಿಸದಿದ್ದರೆ ಮುಂದಿನ ದಿನಗಳಲ್ಲಿ ರೈತರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ ಎಂದು ಹೇಳಿದರು.

ಪ್ರೊ.ಎಂ.ಡಿ.ನಂಜುಂಡಸ್ವಾಮಿ 80ರ ದಶಕದಲ್ಲಿ ರೈತ ಸಂಘ ಸ್ಥಾಪಿಸಿ, ಸಾಕಷ್ಟು ಹೋರಾಟಗಳನ್ನು ನಡೆಸಿದರು. ರೈತರಿಗೆ ಘನತೆ, ಗೌರವ ತಂದುಕೊಟ್ಟರು. ಬೆಂಬಲ ಬೆಲೆ, ಕೃಷಿ ಸಾಲ ಮರುಪಾವತಿ, ನೀರಾವರಿ ಯೋಜನೆಗಳ ಅನುಷ್ಠಾನ, ಬೀಜ ವಿತರಣೆ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಧ್ವನಿಯಾಗಿದ್ದರು ಎಂದು ಸ್ಮರಿಸಿದರು.

ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದು, ನೂರಾರು ಎಕರೆಯ ಭೂ ಒಡೆಯರಾಗಿದ್ದರೂ ಅದೆಲ್ಲವನ್ನೂ ತ್ಯಜಿಸಿ ರೈತರ ಪರ ಹೋರಾಟಕ್ಕೆ ಇಳಿದರು. ವಿದೇಶದಲ್ಲಿ ಕಾನೂನು ಶಿಕ್ಷಣ ಮುಗಿಸಿ, ಪಿಎಚ್‍.ಡಿ ಅಧ್ಯಯನ ಮಾಡುವ ಸಂದರ್ಭದಲ್ಲಿ ವಿದೇಶದ ತಾತ್ವಿಕ ಪದ್ಧತಿಗಳನ್ನು ವಿರೋಧಿಸಿ, ಮರಳಿ ಭಾರತಕ್ಕೆ ಬಂದು ಮೈಸೂರಿನಲ್ಲಿ ಬೋಧನೆಯೊಂದಿಗೆ ಕೃಷಿಯಲ್ಲಿ ತೊಡಗಿಸಿಕೊಂಡರು. ರೈತ ಸಂಘ ಕಟ್ಟಿ ರಾಜ್ಯ ಪ್ರವಾಸ ಮಾಡಿ, ರೈತರನ್ನು ಸಂಘಟಿಸಿ, ಹೋರಾಟ ಮಾಡಿ ಅವರ ಹಕ್ಕುಗಳು ಸಿಗುವಂತೆ ಮಾಡಿದರು ಎಂದು ನೆನಪು ಮಾಡಿಕೊಂಡರು.

ನಂಜುಂಡಸ್ವಾಮಿ ಹೋರಾಟಗಳಿಂದಾಗಿ 80-90ರ ದಶಕದಲ್ಲಿ ರಾಜಕೀಯ ಸನ್ನಿವೇಶಗಳು ಬದಲಾದವು. ಸರ್ಕಾರ ಎಸಗುತ್ತಿದ್ದ ಅಮಾನವೀಯತೆ, ಶಾಶ್ವತ ನೀರಾವರಿಗಾಗಿ ಹೋರಾಟ ನಡೆಸಿದವರು ಎಂದು ತಿಳಿಸಿದರು.

ವಿ.ವಿ ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನ ಕುಮಾರ್, ನಂಜುಂಡಸ್ವಾಮಿ ಅಧ್ಯಯನ ಪೀಠದ ನಿರ್ದೇಶಕ ಎಂ.ಮುನಿರಾಜು, ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಜಯಶೀಲ, ಪ್ರಾಧ್ಯಾಪಕ ಬಿ.ರವೀಂದ್ರ ಕುಮಾರ್, ರೈತ ಹೋರಾಟಗಾರ ಬಸವರಾಜು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT