ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾದ ಕೈಬಿಡಿ; ಸಾಮರಸ್ಯದಿಂದ ಬಾಳಿ

ತಮ್ಮಡಿಹಳ್ಳಿ ಮಠದ ಅಭಿನವಮಲ್ಲಿಕಾರ್ಜುನ ಸ್ವಾಮೀಜಿ ಮನವಿ
Last Updated 20 ನವೆಂಬರ್ 2019, 15:56 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ಹುಳಿಯಾರು ಕನಕ ವೃತ್ತಕ್ಕೆ ಸಂಬಂಧಿಸಿದ ವಿವಾದವನ್ನು ಇಲ್ಲಿಗೆ ಕೈ ಬಿಟ್ಟು, ಎರಡು ಸಮುದಾಯಗಳು ಸಹಬಾಳ್ವೆಯಿಂದ ಒಂದಾಗಿ ಬಾಳುವಂತೆ ತಮ್ಮಡಿಹಳ್ಳಿ ಮಠದ ಅಭಿನವಮಲ್ಲಿಕಾರ್ಜುನ ಸ್ವಾಮೀಜಿ ಮನವಿ ಮಾಡಿದರು.

ತಮ್ಮಡಿಹಳ್ಳಿಯ ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕನಕದಾಸರು, ಬಸವಣ್ಣನವರು ದಾರ್ಶನಿಕರು. ಶಿವಕುಮಾರಸ್ವಾಮಿ ನಮ್ಮ ನಡುವಿದ್ದ ನಡೆದಾಡುವ ದೇವರು. ಇವರ ಹೆಸರನ್ನು ಮುಂದಿಟ್ಟುಕೊಂಡು ಸಮಾಜದ ಸ್ವಾಸ್ಥ್ಯವನ್ನು ಕದಡುವುದು ಬೇಡ ಎಂದರು.

ಹೊಸದುರ್ಗ ಕಾಗಿನೆಲೆಯ ಈಶ್ವರಾನಂದಪುರಿ ಸ್ವಾಮೀಜಿಗಳು ತಮ್ಮ ಸಮುದಾಯದ ಭಕ್ತರ ಜೊತೆಯಲ್ಲಿ ಕುಳಿತು ಮಾತನಾಡಿ, ಈ ವಿಚಾರವನ್ನು ಇಲ್ಲಿಗೆ ಕೈಬಿಟ್ಟು ಎರಡೂ ಸಮಾಜಗಳು ಸಾಮರಸ್ಯದಿಂದ ಬಾಳಲು ಅವಕಾಶ ಮಾಡಿಕೊಡಬೇಕು ಹಾಗೂ ಸಮಾಜದ ಸ್ವಾಮೀಜಿಯವರು ಒಂದು ಸಮಾಜ ಪ್ರತಿಭಟಿಸುವಂತಹ, ಪ್ರಚೋದಿಸುವಂತಹ ಮಾತುಗಳನ್ನು ಆಡಬಾರದು ಎಂದು ಮನವಿ ಮಾಡಿದರು.

ಕನಕದಾಸರು ಕುಲಕುಲವೆಂದು ಹೊಡೆದಾಡದಿರಿ ಎಂದು ಸಮಾಜಕ್ಕೆ ಮಾರ್ಗದರ್ಶನ ಮಾಡಿದ್ದರು, ಅದೇ ರೀತಿ ಬಸವಣ್ಣನವರ ಆದರ್ಶಗಳನ್ನು ಇಟ್ಟುಕೊಂಡಿರುವ ಶಿವಕುಮಾರಸ್ವಾಮಿಜಿಗಳು ಅನ್ನದಾಸೋಹ, ಅಕ್ಷರದಾಸೋಹಕ್ಕೆ ಒತ್ತು ನೀಡಿ ತಮ್ಮ ಮಠದಲ್ಲಿ 12ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದು, ಇದರಲ್ಲಿ 6ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹುಳಿಯಾರಿನಲ್ಲಿ ಕನಕ ವೃತ್ತಕ್ಕೆ ಹೆಸರಿಡುವ ವಿಚಾರದಲ್ಲಿ ಎರಡು ಸಮಾಜ ತಲೆ ತಗ್ಗಿಸುವಂತೆ ಮಾಡಿದೆ, ಇದನ್ನೆ ಕೆಲವರು ಬಂಡವಾಳವನ್ನಾಗಿ ಉಪಯೋಗಿಸಿಕೊಂಡು ವಿಷಬೀಜ ಬಿತ್ತುತ್ತಿರುವುದು ಸರಿಯಲ್ಲ ಎಂದರು.

ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಶಾಂತಿಸಭೆಯಲ್ಲಿ ಕನಕ ವೃತ್ತಕ್ಕೆ ಕಾನೂನು ರೀತಿಯಲ್ಲಿ ಹೆಸರಿಡುವಂತೆ ಸಚಿವರು ಹೇಳಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಕೆಲವರು ಇದನ್ನೇ ತಿರುಚಿ ಜನರಲ್ಲಿ ದ್ವೇಷ ಬಿತ್ತುತ್ತಿರುವುದು ವಿಷಾದನೀಯ ಎಂದರು.

ಸಚಿವರು ಚಿ.ನಾ.ಹಳ್ಳಿ ಪಟ್ಟಣದಲ್ಲಿ ಯುಜಿಡಿ ಕಾಮಗಾರಿಗೆ ₹ 55 ಕೋಟಿಗೂ ಹೆಚ್ಚು ಅನುದಾನವನ್ನು ಬಿಡುಗಡೆ ಮಾಡಿಸಿದ್ದಾರೆ. ಪಟ್ಟಣದಲ್ಲಿ ವೀರಶೈವ ಸಮುದಾಯದವರು ಸ್ವಲ್ಪಜನರಿದ್ದಾರೆ. ಇತರೆ ಸಮುದಾಯದವೇ ಹೆಚ್ಚು ಹಾಗಾಗಿ ಅಭಿವೃದ್ಧಿಗೆ ಒತ್ತುನೀಡಿ ಪಟ್ಟಣಕ್ಕೆ ಅನುದಾನ ಬಿಡುಗಡೆ ಮಾಡಿಸಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT