ಗುರುವಾರ , ಏಪ್ರಿಲ್ 15, 2021
21 °C
1,200 ವರ್ಷಗಳ ಇತಿಹಾಸಕ್ಕೆ ಸಾಕ್ಷಿಯಾಗಿವೆ ಕುರುಹುಗಳು

ಕುಮುದ್ವತಿ ತಟದಲ್ಲಿ ಮಲ್ಲೇಶ್ವರಸ್ವಾಮಿ

ಗಂಗಾಧರ್ ವಿ. ರೆಡ್ಡಿಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಕೊಡಿಗೇನಹಳ್ಳಿ: ಹೋಬಳಿಯ ಶ್ರಾವಂಡನಹಳ್ಳಿ ಗ್ರಾಮವು ಕುಮುದ್ವತಿ ನದಿ ದಂಡೆಯಲಿದ್ದು, ವಿದುರಾಶ್ವತ್ಥದಿಂದ ಕೇವಲ 4 ಮೈಲಿ ಅಂತರದಲ್ಲಿರುವುದರಿಂದ ಐತಿಹಾಸಿಕ ಸ್ಥಳವಾಗಿಯೇ ಪ್ರಸಿದ್ಧಿ ಪಡೆದಿದೆ.

ಇಲ್ಲಿನ ಮಲ್ಲೇಶ್ವರಸ್ವಾಮಿ ದೇವಾಲಯ ನೊಳಂಬ ರಾಜರಿಂದ 1,200 ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟಿದೆ ಎಂಬ ಐತಿಹ್ಯವಿದೆ. ಗತವೈಭವದಿಂದ ಮೆರೆದಿದ್ದ ಈ ದೇಗುಲ ಇಂದಿಗೂ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ರಾಜ್ಯ ಮಾತ್ರವಲ್ಲದೆ ಆಂಧ್ರಪ್ರದೇಶದಿಂದಲೂ ಭಕ್ತರು ಭೇಟಿ ನೀಡುತ್ತಿದ್ದಾರೆ.

ಐತಿಹಾಸಿಕ ಹಿನ್ನೆಲೆ: ಕ್ರಿ.ಶ 800ರಲ್ಲಿ ನೊಳಂಬರು ಆಂಧ್ರಪ್ರದೇಶದ ಮಡಕಶಿರಾ ತಾಲ್ಲೂಕಿನ ಹೇಮಾವತಿ ಗ್ರಾಮವನ್ನು ರಾಜಧಾನಿಯನ್ನಾಗಿಸಿಕೊಂಡು ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕೆಲ ಭಾಗಗಳನ್ನು ಆಳುತ್ತಿದ್ದರು ಎನ್ನುವುದಕ್ಕೆ ವಿವಿಧ ಶಾಸನಗಳು ಪರಾವೆಯಾಗಿವೆ.
ಶ್ರಾವಂಡನಹಳ್ಳಿಯಲ್ಲಿ ದೊರೆಯುವ ಮಾಸ್ತಿಗಲ್ಲು, ವೀರಗಲ್ಲುಗಳು ಮತ್ತು ದೇವಾಲಯದಲ್ಲಿನ ವಾಸ್ತುವನ್ನು ಪರಿಶೀಲಿಸಿದಾಗ ಈ ಗ್ರಾಮ ನೊಳಂಬರ ಸಾಂಸ್ಕೃತಿಕ ಪರಂಪರೆಗೆ ಒಳಪಟ್ಟಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಮೈಸೂರು ಆರ್ಕಿಯಾಲಾಜಿಕಲ್ ವರದಿಯಲ್ಲಿ ಮತ್ತು ಪ್ರೊ.ಡಿ.ವಿ. ಪರಶಿವಮೂರ್ತಿ ಮತ್ತು ಡಿ.ಸಿದ್ದಲಿಂಗಯ್ಯ ಸಂಪಾದಕೀಯದಲ್ಲಿ ಪ್ರಕಟಗೊಂಡ ನೊಳಂಬರ ಶಾಸನಗಳು ಎಂಬ ಗ್ರಂಥದಲ್ಲಿ ಉಲ್ಲೇಖವಾಗಿರುವ ಅಂಶಗಳ ಬಗ್ಗೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ನಿವೃತ್ತ ಪ್ರಾಂತೀಯ ನಿರ್ದೇಶಕ ಡಾ.ಎಸ್.ವಿ.ವೆಂಕಟೇಶಯ್ಯ ಮಾಹಿತಿ ನೀಡಿದರು.
ನೊಳಂಬರ ಕಾಲದಲ್ಲಿ ಜೈನ ಧರ್ಮ ಪ್ರಮುಖವಾಗಿತ್ತು. ಅಂತೆಯೇ ಶ್ರಾವಂಡನಹಳ್ಳಿಯು ಅಂದಿನ ಶ್ರವಣರ ಹಳ್ಳಿಯಾಗಿತ್ತು. ಕಾಲಾನುಕ್ರಮದಲ್ಲಿ ಶ್ರವಣರಹಳ್ಳಿ ಇಂದು ಶ್ರಾವಂಡನಹಳ್ಳಿಯಾಗಿ ಕರೆಯಲ್ಪಟ್ಟಿದೆ ಎಂದು ಗ್ರಾಮದ ಹಿರಿಯರು, ಅರ್ಚಕರು ಮತ್ತು ನಿವೃತ್ತ ಮುಖ್ಯಶಿಕ್ಷಕ ಎಸ್.ಟಿ. ಶಿವರಾಮ್ ಮಾಹಿತಿ ನೀಡಿದರು.
ಗ್ರಾಮದ ಮಧ್ಯಭಾಗದ ಎತ್ತರದ ಪ್ರದೇಶದಲ್ಲಿರುವ ಸ್ಥಳವನ್ನು ಇಲ್ಲಿ ಕೋಟೆ ಎಂದು ಕರೆಯುತ್ತಾರೆ. ಇದು ಮಧುಗಿರಿಯ ಬಿಜವಾರದ ಪಾಳೇಗಾರರು ನಿರ್ಮಿಸಿದಂತೆ ಇಲ್ಲಿಯು ಉತ್ತರ ಮತ್ತು ದಕ್ಷಿಣ ಕಡೆಗಳಿಂದ ಪ್ರವೇಶದ್ವಾರವನ್ನು ಹೊಂದಿದೆ. ಕೋಟೆಯ ಸ್ಥಳದ ಕೆಳ ಭಾಗದಲ್ಲಿ ಪ್ರಾಚೀನ ಸಂಹಿತೆಯ ಅನುಸಾರ ಹಳ್ಳಿಯ ಇತರರ ಮನೆಗಳಿಂದ ಆವೃತವಾಗಿದೆ. ಗತವೈಭವವನ್ನು ಸಾರುವ ಈ ಶಿಲ್ಪಗಳ ರಕ್ಷಿಸಬೇಕಿದೆ. ಹೆಚ್ಚಿನ ಸಂಶೋದನೆಗಳ ಜತೆಗೆ ಐತಿಹಾಸಿಕ ಹಿನ್ನೆಲೆಯುಳ್ಳ ದೇವಸ್ಥಾನದ ಅಭಿವೃದ್ಧಿ ಆದ್ಯತೆಯಾಗಬೇಕು ಎನ್ನುವುದು ಗ್ರಾಮಸ್ಥರು ಹಾಗೂ ಭಕ್ತರ ಒತ್ತಾಯ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು