ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರುವೇಕೆರೆ: ಸೌಕರ್ಯ ವಂಚಿತ ಉಪ ಮಾರುಕಟ್ಟೆ

ಅವ್ಯವಸ್ಥೆ ಆಗರವಾದ ದಂಡಿನಶಿವರ ಮಾರುಕಟ್ಟೆ ಕೇಂದ್ರ: ರಸ್ತೆ ಬದಿಯಲ್ಲೇ ವ್ಯಾಪಾರ
Last Updated 7 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ತುರುವೇಕೆರೆ: ತಾಲ್ಲೂಕಿನ ದಂಡಿನಶಿವರ ಹೋಬಳಿ ಕೇಂದ್ರದ ಉಪಮಾರುಕಟ್ಟೆ ಸಮುಚ್ಚಯ ಸಮರ್ಪಕ ನಿರ್ವಹಣೆ ಇಲ್ಲದೆ ಭಿಕ್ಷುಕರ ಆವಾಸಸ್ಥಾನವಾಗಿದೆ. ಇದರಿಂದ ರಸ್ತೆ ಇಕ್ಕೆಲಗಳಲ್ಲಿ ಸಂತೆ ನಡೆಯುವಂತಾಗಿದೆ.

ಗ್ರಾಮೀಣ ಸಂತೆ ಅಭಿವೃದ್ಧಿ ಯೋಜನೆ ಹಾಗೂ ನಬಾರ್ಡ್ ನೆರವಿನಿಂದ ₹14 ಲಕ್ಷ ವೆಚ್ಚದಲ್ಲಿ ಮಾರಾಟ ಕೇಂದ್ರ ನಿರ್ಮಾಣ ಮಾಡಲಾಗಿದೆ.

ದಂಡಿನಶಿವರ ಗ್ರಾಮ ಪಂಚಾಯಿತಿ ಇದರ ನಿರ್ವಹಣೆ ಮಾಡುತ್ತಿದೆ. ವರ್ಷಕ್ಕೆ ₹30 ಸಾವಿರದಿಂದ ₹50 ಸಾವಿರದವರೆಗೆ ವ್ಯಾಪಾರಿಗಳಿಂದ ಸುಂಕ ವಸೂಲಿ ಮಾಡಲಾಗುತ್ತಿದೆ. ಆರಂಭದಲ್ಲಿ ಇಲ್ಲಿನ ಮಳಿಗೆ ಕೇಂದ್ರದಲ್ಲೇ ಸಂತೆ ವ್ಯಾಪಾರ ನಡೆಯುತ್ತಿತ್ತು.

‘ಸಂತೆಗೆ ಬರುವವರ ಸಂಖ್ಯೆ ಹೆಚ್ಚಾಯಿತು. ಆದರೆ, ಅದಕ್ಕೆ ಅನುಗುಣವಾಗಿ ಅಗತ್ಯ ಸೌಕರ್ಯ ಹಾಗೂ ಸೂಕ್ತ ನಿರ್ವಹಣೆ
ಇಲ್ಲವಾಯಿತು. ಈಗ ಮಳಿಗೆ ಕೇಂದ್ರದ ಸುತ್ತ ಲಂಟಾನಾ ಹಾಗೂ ಪಾರ್ಥೇನಿಯಂ ಗಿಡಗಳು ಬೆಳೆದಿದ್ದು ಭಿಕ್ಷುಕರು, ಅಲೆಮಾರಿಗಳ ಆವಾಸಸ್ಥಾನವಾಗಿದೆ. ಸ್ವಚ್ಛತೆ ಎಂಬುದು ಮಾಯವಾಗಿದೆ. ವಿಧಿಯಿಲ್ಲದೆ ಹೊನ್ನಾದೇವಿ ದೇವಸ್ಥಾನದ ಎದುರಿನ ರಸ್ತೆಯ ಬದಿ ವ್ಯಾಪಾರ ಆರಂಭಿಸಿದ್ದೇವೆ’ ಎಂದು ವ್ಯಾಪಾರಿಯೊಬ್ಬರು ಅಳಲು ತೋಡಿಕೊಂಡರು.

ಪ್ರತಿ ಶುಕ್ರವಾರ ಬೆಳಗಿನಿಂದ ಸಂಜೆವರೆಗೂ ಸಂತೆ ನಡೆಯುತ್ತದೆ. ತರಕಾರಿ, ಕೃಷಿ ಪರಿಕರ, ಧಾನ್ಯ, ಗೃಹ ಬಳಕೆಯ ಉಪಕರಣಗಳು, ವೀಳ್ಯದೆಲೆ, ಅಡಕೆ, ತಿಂಡಿ– ತಿನಿಸು ಹೀಗೆ ಅನೇಕ ಬಗೆಯ ವಸ್ತುಗಳ ವ್ಯಾಪಾರ ಜೋರಾಗಿಯೇ ನಡೆಯುತ್ತದೆ. ದಂಡಿನಶಿವರ ಆಸುಪಾಸಿನ ಹಾಗೂ ಇತರ ತಾಲ್ಲೂಕುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಸ್ಥರು ಸೇರುತ್ತಾರೆ.

ರಸ್ತೆ ಬದಿಯಲ್ಲೇ ಸಂತೆ ನಡೆಯುತ್ತಿರುವುದರಿಂದ ಬಸ್, ಇತರೆ ವಾಹನಗಳು, ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕೆಲವೊಮ್ಮೆ ಸಣ್ಣಪುಟ್ಟ ಅಪಘಾತಗಳು ಸಂಭವಿಸಿವೆ. ಬೆಸ್ಕಾಂ, ರೈತ ಸಂಪರ್ಕ ಕೇಂದ್ರ, ನಾಡ ಕಚೇರಿ, ಸಾರ್ವಜನಿಕ ಆಸ್ಪತ್ರೆ, ರೈಲು ನಿಲ್ಲಾಣ, ದೇವಸ್ಥಾನಗಳಿಗೆ ಹೋಗಲು ಜನರು ತೊಂದರೆ ಪಡುವಂತಾಗಿದೆ.

ಇಲ್ಲಿ ಏನಿಲ್ಲ: ಎಪಿಎಂಸಿಯಾಗಲಿ ಅಥವಾ ಸುಂಕ ವಸೂಲಿ ಮಾಡುವ ಪಂಚಾಯಿತಿಯಾಗಲಿ ಮಾರುಕಟ್ಟೆಗೆ ಬೇಕಾದ ಅಗತ್ಯ ಸೌಕರ್ಯಗಳನ್ನು ಸಕಾಲಕ್ಕೆ ಒದಗಿಸಿಕೊಟ್ಟಿಲ್ಲ. ವ್ಯಾಪಾರಿಗಳು ಮಳಿಗೆ ಪಕ್ಕದಲ್ಲೇ ಮಲ ಮೂತ್ರ ವಿಸರ್ಜನೆ ಮಾಡುವುದರಿಂದ ಗ್ರಾಹಕರಿಗೆ ಕಿರಿಕಿರಿ ಆಗಿದೆ. ಕುಡಿಯುವ ನೀರಿನ ಸೌಲಭ್ಯವಿಲ್ಲ. ಮಾರುಕಟ್ಟೆ ಕೇಂದ್ರ ಕಿರಿದಾಗಿದೆ. ಹೆಚ್ಚು ಜನ ಕುಳಿತು ವ್ಯಾಪಾರ ಮಾಡಲಾಗದು. ಒಂದೂ ದಾಸ್ತಾನು ಮಳಿಗೆ ಇಲ್ಲವೆಂದು ವ್ಯಾಪಾರಿಗಳು ಸಮಸ್ಯೆ ತೋಡಿಕೊಂಡರು.

ಶೌಚಾಲಯವಿಲ್ಲದೆ ದೂರದ ಬಯಲಿಗೆ ಹೋಗಬೇಕಾಗಿದೆ ಎಂದು ಮಹಿಳಾ ವ್ಯಾಪಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT