ಭಾನುವಾರ, ಜುಲೈ 3, 2022
24 °C
ಕೋವಿಡ್‌ನಿಂದ ಮೃತಪಟ್ಟ ರೈತರಿಗೆ ₹1 ಲಕ್ಷ ಪರಿಹಾರ

ಹಾಲು ಖರೀದಿ: ₹2 ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಕೋವಿಡ್ ಲಾಕ್‌ಡೌನ್‌ನಿಂದಾಗಿ ಹಾಲು ಮಾರಾಟ ಕುಸಿದಿದ್ದು, ಜಿಲ್ಲೆಯಲ್ಲಿ ರೈತರಿಂದ ಖರೀದಿಸುವ ಲೀಟರ್ ಹಾಲಿನ ಬೆಲೆಯನ್ನು ₹2 ಇಳಿಸಲಾಗಿದ್ದು, ಇದು ಜೂನ್ 8ರಿಂದಲೇ ಜಾರಿಗೆ ಬಂದಿದೆ.

ಎಸ್‌ಎನ್‌ಎಫ್ ಗುಣಮಟ್ಟ ಶೇ 8.50 ಹಾಗೂ ಜಿಡ್ಡಿನ ಅಂಶ ಶೇ 4.1ರಷ್ಟು ಇರುವ ಹಾಲನ್ನು ಲೀಟರ್‌ಗೆ ₹26.99ಕ್ಕೆ ಖರೀದಿಸಲು ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ತುಮುಲ್) ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ಮೇ ತಿಂಗಳಲ್ಲಿ ಸರಾಸರಿ 8.19 ಲಕ್ಷ ಲೀಟರ್‌ ಹಾಲು ಶೇಖರಣೆಯಾಗುತ್ತಿದ್ದು, ಪ್ರಸ್ತುತ 8.65 ಲಕ್ಷ ಲೀಟರ್ ಹಾಲು ಸರಬರಾಜು ಆಗುತ್ತಿದೆ. ಪ್ರತಿ ನಿತ್ಯ 4.46 ಲಕ್ಷ ಲೀಟರ್ ಹಾಲನ್ನು ನೇರವಾಗಿ ಮಾರಾಟ ಮಾಡಲಾಗಿದ್ದು, 4.19 ಲಕ್ಷ ಲೀಟರ್ ಹಾಲನ್ನು ಹಾಲಿನ ಪುಡಿ, ಬೆಣ್ಣೆಯಾಗಿ ಪರಿವರ್ತನೆ ಮಾಡಲಾಗುತ್ತಿದೆ. ಇದರಿಂದಾಗಿ ಒಕ್ಕೂಟದ ನಷ್ಟದ ಪ್ರಮಾಣ ಹೆಚ್ಚಾಗಿದೆ.

ಲಾಕ್‌ಡೌನ್‌ನಿಂದಾಗಿ ಹಾಲು ಹಾಗೂ
ಹಾಲು ಉತ್ಪನ್ನಗಳ ಮಾರಾಟ ಕುಸಿದಿದೆ. ಪ್ರಸ್ತುತ ₹80 ಕೋಟಿ ಮೌಲ್ಯದ 2,200 ಮೆಟ್ರಿಕ್ ಟನ್ ಹಾಲಿನ ಪುಡಿ ಹಾಗೂ 1,500 ಮೆಟ್ರಿಕ್ ಟನ್ ಬೆಣ್ಣೆ ಮಾರಾಟವಾಗದೆ ಉಳಿದಿದೆ. ಏಪ್ರಿಲ್, ಮೇ ತಿಂಗಳಲ್ಲಿ ಒಕ್ಕೂಟಕ್ಕೆ ₹19 ಕೋಟಿ ನಷ್ಟ ಉಂಟಾಗಿದೆ. ಹಾಗಾಗಿ ಹಾಲು ಖರೀದಿ ದರವನ್ನು ಲೀಟರ್‌ಗೆ ₹2 ಇಳಿಕೆ ಮಾಡಲಾಗಿದೆ ಎಂದು ತುಮುಲ್ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ ತಿಳಿಸಿದ್ದಾರೆ.

ಒಕ್ಕೂಟದ ರೈತ ಕಲ್ಯಾಣ ಟ್ರಸ್ಟ್‌ನಿಂದ ಸಂಘದ ಸದಸ್ಯರು, ಸಿಬ್ಬಂದಿ ಸಹಜ ಮರಣ ಹೊಂದಿದರೆ ₹50 ಸಾವಿರ ಮರಣ ಪರಿಹಾರ ನೀಡಲಾಗುತ್ತಿದೆ. ಕೋವಿಡ್‌ನಿಂದ ಮರಣ ಹೊಂದಿದ ಸಂಘದ ಸದಸ್ಯರು, ಸಿಬ್ಬಂದಿಗೆ ₹1 ಲಕ್ಷ
ಮರಣ ಪರಿಹಾರ ಧನ ನೀಡಲು ತೀರ್ಮಾನಿಸಲಾಗಿದೆ.

ಒಕ್ಕೂಟದ 2,770 ಪ್ರಾಥಮಿಕ ಹಾಲು ಉತ್ಪಾದಕ ಸಹಕಾರ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಮಾಸ್ಕ್, ಫೇಸ್ ಶೀಲ್ಡ್, ಸ್ಯಾನಿಟೈಸರ್‌ಗಳನ್ನು ಉಚಿತವಾಗಿ ನೀಡಲಾಗಿದೆ ಎಂದು ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು