ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲು ಖರೀದಿ ದರ ₹2 ಕಡಿತಗೊಳಿಸಿದ ತುಮಕೂರು ಹಾಲು ಒಕ್ಕೂಟ

Last Updated 18 ಆಗಸ್ಟ್ 2020, 17:20 IST
ಅಕ್ಷರ ಗಾತ್ರ

ತುಮಕೂರು: ಹಾಲು ಪೂರೈಕೆಯಲ್ಲಿ ಏರಿಕೆ ಹಾಗೂ ಸಾಕಷ್ಟು ಪ್ರಮಾಣದಲ್ಲಿ ಹಾಲು ಉಳಿಯುತ್ತಿದ್ದು, ತುಮಕೂರು ಹಾಲು ಒಕ್ಕೂಟ (ತುಮುಲ್) ಇದೀಗ ಮತ್ತೆ ಹಾಲಿನ ಖರೀದಿ ದರವನ್ನು ಲೀಟರ್‌ಗೆ ₹2 ಇಳಿಸಿದೆ.

ಪ್ರಸ್ತುತ ಹಾಲಿನ ಸಹಕಾರ ಸಂಘಗಳಿಗೆ ಪ್ರತಿ ಲೀಟರ್‌ಗೆ ₹23.73 ಹಾಗೂ ರೈತರಿಗೆ ₹23 ನೀಡುತ್ತಿದೆ. ಇದು ಆ. 16ರಿಂದಲೇ ಜಾರಿಗೆ ಬಂದಿದೆ. ಜೂನ್‌ನಿಂದ ಈಚೆಗೆ 3 ಬಾರಿ ಹಾಲಿನ ಖರೀದಿ ದರ ಇಳಿಸಿದಂತಾಗಿದ್ದು, ಮಾರ್ಚ್‌ನಲ್ಲಿ ಪ್ರತಿ ಲೀಟರ್‌ಗೆ ₹28.50 ನೀಡಲಾಗುತ್ತಿತ್ತು.

ಜೂನ್‌ನಲ್ಲಿ ಪ್ರತಿ ಲೀಟರ್‌ ಖರೀದಿ ದರವನ್ನು ₹1.50 ಇಳಿಸಲಾಗಿತ್ತು. ನಂತರ ಜುಲೈನಲ್ಲಿ ಎರಡನೇ ಬಾರಿಗೆ ₹2 ಇಳಿಸಿ ಪ್ರತಿ ಲೀಟರ್‌ಗೆ ₹25 ನೀಡಲಾಗುತ್ತಿತ್ತು. ಆದರೆ, ಇದೀಗ ಮತ್ತೆ ₹2 ಕಡಿಮೆ ಮಾಡಿದ್ದು, ಲೀಟರ್‌ಗೆ ₹23 ನೀಡಲಾಗುತ್ತಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಲೀಟರ್‌ಗೆ ₹5.50 ಇಳಿಕೆ ಮಾಡಿದಂತಾಗಿದೆ.

ಪ್ರಸ್ತುತ ತುಮುಲ್‌ಗೆ ಪ್ರತಿದಿನ ₹8.70 ಲಕ್ಷ ಲೀಟರ್‌ ಹಾಲು ಪೂರೈಕೆಯಾಗುತ್ತಿದ್ದು, ಹೆಚ್ಚಿನ ಪ್ರಮಾಣದ ಹಾಲು ಉಳಿಯುತ್ತಿದೆ. ಹಾಲಿನ ಪೌಡರ್, ಬೆಣ್ಣೆ ತಯಾರಿಕೆಗೆ ಬಳಸಿಕೊಳ್ಳಲಾಗುತ್ತಿದ್ದು, ಇದರಿಂದ ನಷ್ಟ ಹೆಚ್ಚಾಗಿದೆ. ತುಮುಲ್‌ನಲ್ಲಿ 2,900 ಮೆಟ್ರಿಕ್ ಟನ್‌ ಪೌಡರ್, 900 ಮೆಟ್ರಿಕ್ ಟನ್‌ ಬೆಣ್ಣೆ ಶೇಖರಣೆಯಾಗಿದೆ.
ಇದರ ಅಂದಾಜು ಮೌಲ್ಯ ₹60 ಕೋಟಿ ಎಂದು ತುಮುಲ್‌ ವ್ಯವಸ್ಥಾಪಕ ನಿರ್ದೇಶಕ ಡಾ.ಸುಬ್ರಾಯಭಟ್ ತಿಳಿಸಿದರು.

ಏಪ್ರಿಲ್, ಮೇ, ಜೂನ್‌ನಲ್ಲಿ ₹23 ಕೋಟಿ ನಷ್ಟ ಉಂಟಾಗಿದೆ. ಆದರೂ ರೈತರಿಗೆ ಯಾವುದೇ ಬಟವಾಡೆ ನಿಲ್ಲಿಸಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT