ಗುರುವಾರ , ಜೂನ್ 30, 2022
27 °C
915 ಹೆಕ್ಟೇರ್‌ನಲ್ಲಿ ಹೆಸರು ಬಿತ್ತನೆ

ತುರುವೇಕೆರೆ: 334 ಮಿ.ಮೀ ಮಳೆ, ಶೇ 70ರಷ್ಟು ಪೂರ್ವ ಮುಂಗಾರು ಬಿತ್ತನೆ

ಪಾಂಡುರಂಗಯ್ಯ ಎ.ಹೊಸಹಳ್ಳಿ Updated:

ಅಕ್ಷರ ಗಾತ್ರ : | |

Prajavani

ತುರುವೇಕೆರೆ: ತಾಲ್ಲೂಕಿನಲ್ಲಿ ಪೂರ್ವ ಮುಂಗಾರು ಮಳೆ ಉತ್ತಮವಾಗಿ ಸುರಿದಿದ್ದು, ರೈತರು ಬಿತ್ತನೆಯಲ್ಲಿ ಸಕ್ರಿಯವಾಗಿ ತೊಡಗಿದ್ದಾರೆ.

ಈ ಬಾರಿ ಪೂರ್ವ ಮುಂಗಾರು ಬಿತ್ತನೆಯ ಆರಂಭದಲ್ಲಿ ಕೇವಲ 64 ಮಿ.ಮೀಟರ್ ಮಳೆಯಾಗಿದ್ದರಿಂದ ಬಿತ್ತನೆಯು ನಿಧಾನಗತಿಯಲ್ಲಿತ್ತು. ಮೇ ತಿಂಗಳ ಎರಡನೇ ವಾರದ ನಂತರ ಮಳೆ ಹೆಚ್ಚು ಸುರಿದಿದ್ದು, 334 ಮಿ.ಮೀ ಮಳೆಯಾಗಿದೆ. ಆದರೆ ಜಿಟಿ ಮಳೆಯಿಂದಾಗಿ ರೈತರು ಭೂಮಿ ಹದ ಮಾಡಿಕೊಂಡಿದ್ದರೂ, ಬಿತ್ತನೆ ಮಾಡಲು ಸಾದ್ಯವಾಗಲಿಲ್ಲ. ಮೇ ತಿಂಗಳ ಅಂತ್ಯದಲ್ಲಿ ಬಿತ್ತನೆ ಚುರುಕುಗೊಳ್ಳುವ ನಿರೀಕ್ಷೆಯಿದೆ.

ಕಸಬಾ ಹೋಬಳಿಯಲ್ಲಿ 350 ಹೆಕ್ಟೇರ್‌ ಹೆಸರು ಬಿತ್ತನೆ ಗುರಿ ಇದೆ. ಆ ಪೈಕಿ 230 ಹೆಕ್ಟೇರ್‌ ಬಿತ್ತನೆಯಾಗಿದೆ. ಅಲಸಂದೆ 350ರಲ್ಲಿ 65ರಷ್ಟು ಮಾತ್ರ ಬಿತ್ತನೆಯಾಗಿದೆ. ದಂಡಿನಶಿವರ ಹೋಬಳಿಯಲ್ಲಿ ಹೆಸರು ಬಿತ್ತನೆಯ ಗುರಿ 300 ಹೆಕ್ಟೇರ್‌, ಭಿತ್ತನೆಯಾದದ್ದು 185 ಹೆಕ್ಟೇರ್‌. ಅಲಸಂದೆ ಗುರಿ 200, ಬಿತ್ತನೆ ಕೇವಲ 50 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಆಗಿದೆ. ದಬ್ಬೇಘಟ್ಟ ಹೋಬಳಿಯಲ್ಲಿ 250 ಹೆಕ್ಟೇರ್‌ನಲ್ಲಿ ಹೆಸರು, 73 ಹೆಕ್ಟೇರ್‌ನಲ್ಲಿ ಅಲಸಂದೆ ಬಿತ್ತನೆಯಾಗಿದೆ. ಮಾಯಸಂದ್ರ ಹೋಬಳಿಯಲ್ಲಿ 250 ಹೆಕ್ಟೇರ್‌ನಲ್ಲಿ ಹೆಸರು ಬಿತ್ತನೆಯಾಗಿದೆ. ಒಟ್ಟು 915 ಹೆಕ್ಟೇರ್‌ನಲ್ಲಿ ಹೆಸರು ಬಿತ್ತನೆಯಾಗಿದೆ. ಅಂದರೆ ಶೇ70ರಷ್ಟು ಬಿತ್ತನೆ ಮುಗಿದಿದೆ. ಅಲಸಂದೆ 270 ಹಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, ಶೇ 22ರಷ್ಟು ಮಾತ್ರ ಮುಗಿದಿದೆ. ನಾಲ್ಕೂ ಹೋಬಳಿಗಳಲ್ಲಿ ಉದ್ದು ತಾಕು ಗುರಿ ಹೊಂದಿದ್ದರೂ, ಶೂನ್ಯ ಭಿತ್ತನೆಯಾಗಿದೆ.

ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಹೆಸರು ಬಿತ್ತನೆ ಬೀಜದ ದಾಸ್ತಾನು 60 ಕ್ವಿಂಟಲ್‍ ಇದೆ. ಆ ಪೈಕಿ 33 ಕ್ವಿಂಟಲ್‍ ಮಾರಾಟವಾಗಿದೆ. ಅಲಸಂದೆ 25 ಕ್ವಿಂಟಲ್‍ನಲ್ಲಿ 18.35 ವಿತರಣೆಯಾಗಿದೆ. ತೊಗರಿ 19.200 ಕ್ವಿಂಟಲ್‍ ಇನ್ನೂ ವಿತರಣೆಯಾಗಿಲ್ಲ.

ಈಗಾಗಲೇ ಬಿತ್ತನೆಯಾಗಿರುವ ಹೆಸರು, ಅಲಸಂದೆ ತಾಕು ಎರಡು ಮೂರು ಎಲೆ ಬಿಟ್ಟಿದ್ದು, ಈಚೆಗೆ ಸುರಿದ ಹದ ಮಳೆಯಿಂದ ಕೆಲವು ತಗ್ಗಿನ ಪ್ರದೇಶಗಳಲ್ಲಿ ನೀರು ನಿಂತು ಕೊಳೆಯುವಂತಾಗಿದೆ ಎಂದು ರೈತ ಈಶ್ವರಯ್ಯ ಆತಂಕ ವ್ಯಕ್ತಪಡಿಸಿದರು.

ರೈತ ಶಕ್ತಿ ಯೋಜನೆ: ಸರ್ಕಾರ ರೈತರಿಗೆ ಒಂದು ಎಕರೆಗೆ ₹250ರಂತೆ ಗರಿಷ್ಠ 5 ಎಕರೆಗೆ ₹1,250 ಪ್ರೋತ್ಸಾಹ ಧನವನ್ನು ರೈತರ ಖಾತೆಗೆ ವರ್ಗಾವಣೆ ಮಾಡಲಿದ್ದು, ಅದಕ್ಕೆ ರೈತರು ತಮ್ಮ ಎಲ್ಲ ಸರ್ವೆ ನಂಬರ್‌ಗಳನ್ನು ಫ್ರೂಟ್ ತಂತ್ರಾಶದಲ್ಲಿ ಸೇರಿಸಲು ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಬೇಕು ಎಂದು ಕೃಷಿ ಸಹಾಯಕ ನಿರ್ದೇಶಕಿ ಬಿ.ಪೂಜಾ ರೈತರಿಗೆ ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು