ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ‘ಹಣ್ಣಿನ ರಾಜ’ ಬಲು ದುಬಾರಿ

ಮಾವಿನ ಹಣ್ಣಿನ ಇಳುವರಿ ಕುಸಿತ, ಎಲ್ಲೆಡೆ ಹೆಚ್ಚಿನ ಬೇಡಿಕೆ
Published 16 ಮೇ 2023, 19:35 IST
Last Updated 16 ಮೇ 2023, 19:35 IST
ಅಕ್ಷರ ಗಾತ್ರ

ತುಮಕೂರು: ‘ಹಣ್ಣಿನ ರಾಜ’ನಿಗೆ ಎಲ್ಲಿಲ್ಲದ ಬೇಡಿಕೆ. ಈಗ ಒಮ್ಮೆಯಾದರೂ ಮಾವಿನ ಹಣ್ಣಿನ ಸವಿಯನ್ನು ಸವಿಯಲೇ ಬೇಕು, ಬಾಯಿ ಚಪ್ಪರಿಸಿ ಆಸ್ವಾದಿಸಬೇಕು. ಈ ಸಮಯದಲ್ಲಿ ಹಣ್ಣು ತಿನ್ನದಿದ್ದರೆ ಮುಂದೆ ಬೇಕು ಎಂದರೂ ಸಿಗುವುದಿಲ್ಲ. ಹಾಗಾಗಿ ಮಾವಿನ ಕಡೆ ಎಲ್ಲರ ಚಿತ್ತ ಹರಿದಿದೆ.

ಈಗ ಮಾವಿನ ಹಣ್ಣಿನ ಸುಗ್ಗಿಯ ಕಾಲ ಆರಂಭವಾಗಿದ್ದು, ಬೆಲೆ ದುಬಾರಿಯಾಗಿರುವುದು ಜನರಿಗೆ ನಿರಾಸೆ ಮೂಡಿಸಿದೆ. ಈ ಸಮಯದಲ್ಲಿ ರುಚಿ ನೋಡಲೇ ಬೇಕು ಎಂದು ಮುಂದಾದವರಿಗೆ ಜೇಬು ನೋಡಿಕೊಳ್ಳುವಂತೆ ಮಾಡಿದೆ. ಹಿಂದೆ ಹೆಚ್ಚು ಖರೀದಿಸುತ್ತಿದ್ದವರು, ಈಗ ಅಗತ್ಯದಷ್ಟು ಖರೀದಿಗೆ ಸೀಮಿತಗೊಳಿಸಿದ್ದಾರೆ.

ಹಿಂದಿನ ಯಾವ ವರ್ಷಗಳಲ್ಲೂ ಇಷ್ಟೊಂದು ದುಬಾರಿ ಆಗಿರಲಿಲ್ಲ. ಕಳೆದ ವರ್ಷ ಬಾದಾಮಿ, ಮಲಗೂಬ ಹಣ್ಣಿನ ಬೆಲೆ ಕೆ.ಜಿ ₹100–120ರ ನಡುವೆ ಇತ್ತು. ಆದರೆ ಈಗ ಒಂದೂವರೆ, ಎರಡು ಪಟ್ಟು ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಸೇಂದೂರ, ಬೇನಿಷ ಹಣ್ಣು ಕೆ.ಜಿ ₹80–100 ಇದೆ. ಬಾದಾಮಿ ಹಣ್ಣು ಕೆ.ಜಿ ₹150– 180ರ ವರೆಗೂ ಮಾರಾಟವಾಗುತ್ತಿದೆ. ಮಾರುಕಟ್ಟೆ, ಪ್ರದೇಶ ಹಾಗೂ ಇತರೆ ಸ್ಥಳಗಳಲ್ಲಿ ಬೆಲೆ ವ್ಯತ್ಯಾಸ ಇದೆ. ಆದರೆ ಎಲ್ಲೂ ಕಡಿಮೆ ದರಕ್ಕೆ ಸಿಗುತ್ತಿಲ್ಲ.

ಇಳುವರಿ ಕುಸಿತ: ಈ ವರ್ಷ ಇಳುವರಿ ಕುಸಿದಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಹಿಂದಿನ ವರ್ಷ ಅತಿಯಾದ ಮಳೆಗೆ ಮಾವಿನ ಮರಗಳೂ ತತ್ತರಿಸಿದ್ದವು. ಮಾವಿನ ತೋಟಗಳಲ್ಲಿ ತಿಂಗಳುಗಟ್ಟಲೆ ನೀರು ನಿಂತು ತೇವಾಂಶ ಹೆಚ್ಚಾಗಿತ್ತು. ಜತೆಗೆ ಜನವರಿ ಆರಂಭದವರೆಗೂ ಮಳೆಯಾಗಿತ್ತು. ವಾತಾವರಣದಲ್ಲಿನ ವೈಪರೀತ್ಯದಿಂದಾಗಿ ಜನವರಿ ತಿಂಗಳು ಕಳೆದರೂ ಹೂವು ಬಿಟ್ಟಿರಲಿಲ್ಲ. ಇದೇ ಸಮಯಕ್ಕೆ ಮತ್ತೊಮ್ಮೆ ಚಿಗುರೊಡೆದಿತ್ತು. ಹೂವು ಬಿಡುವುದು ತಡವಾಗಿ, ಕಾಯಿ ಕಟ್ಟುವುದು ನಿಧಾನವಾಗಿತ್ತು. ಇಂತಹ ಏರುಪೇರಿನಿಂದಾಗಿ ಇಳುವರಿ ಮೇಲೆ ತೀವ್ರ ಪರಿಣಾಮ ಬೀರಿದ್ದು, ಮಾರುಕಟ್ಟೆಗೆ ಹಣ್ಣು ಬರುವುದು ತಡವಾಗಿದೆ. ಇಳುವರಿ ಕುಸಿತ, ಹೆಚ್ಚಿದ ಬೇಡಿಕೆಯಿಂದಾಗಿ ಬೆಲೆ ಧನಮುಖಿಯಾಗಿದೆ.

ವ್ಯಾಪಾರಸ್ಥರಿಗೆ ಲಾಭ: ಕಳೆದ ವರ್ಷ ಉತ್ತಮ ಇಳುವರಿ ಬಂದಿತ್ತು. ಕೋವಿಡ್‌ನಿಂದ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡವರು ತಕ್ಕಮಟ್ಟಿಗೆ ಖರೀದಿಸಿದ್ದರು. ಈ ಬಾರಿ ಬೇಡಿಕೆ ಇದ್ದರೂ ಅಗತ್ಯದಷ್ಟು ಹಣ್ಣು ಬರುತ್ತಿಲ್ಲ. ಸಾಮಾನ್ಯವಾಗಿ ರೈತರು ಮಾವಿನ ಕಾಯಿ ಕಿತ್ತು ಹಣ್ಣು ಮಾಗಿಸಿ ಮಾರಾಟ ಮಾಡುವುದು ಕಡಿಮೆ. ಮರದಲ್ಲಿ ಬಿಟ್ಟಿರುವ ಪೀಚಿನ ಆಧಾರದ ಮೇಲೆ ಮಾರಾಟ ಮಾಡುತ್ತಾರೆ. ಹೂವು ಬಿಟ್ಟು ಕಾಯಿ ಕಟ್ಟುವ ವೇಳೆಗೆ ವ್ಯಾಪಾರಸ್ಥರು ಬೆಲೆ ನಿಗದಿಪಡಿಸಿ ತೋಟವನ್ನು ಖರೀದಿಸುತ್ತಾರೆ. ಆರಂಭದಲ್ಲಿ ಒಂದಷ್ಟು ಹಣ ಕೊಟ್ಟಿರುತ್ತಾರೆ. ಕಾಯಿ ಕೀಳುವ ಸಮಯದಲ್ಲಿ ಪೂರ್ಣ ಹಣಕೊಟ್ಟು ಕಿತ್ತುಕೊಂಡು ಹೋಗುತ್ತಾರೆ. ಆರಂಭದಲ್ಲೇ ಮರಗಳನ್ನು ಮಾರಾಟ ಮಾಡಿರುವುದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಬಂದಿದ್ದರೂ ರೈತರಿಗೆ ಅದರ ಲಾಭ ಸಿಗುತ್ತಿಲ್ಲ. ಒಳ್ಳೆ ಧಾರಣೆ ಸಿಕ್ಕಿರುವುದರಿಂದ ಮರಗಳನ್ನು ಗುತ್ತಿಗೆ ಪಡೆದ ವ್ಯಾಪಾರಿಗಳಿಗೆ ಹೆಚ್ಚು ಲಾಭವಾಗುತ್ತಿದೆ.

ಅಕ್ಕಪಕ್ಕದ ರಾಜ್ಯಗಳಲ್ಲೂ ಇಳುವರಿ ಕುಸಿದಿದ್ದು, ಜಿಲ್ಲೆಯ ಮಾವಿಗೆ ಬೇಡಿಕೆ ಹೆಚ್ಚುತ್ತಲೇ ಸಾಗಿದೆ. ಮುಂಬೈ, ಪೂನಾ ಸೇರಿದಂತೆ ಇತರೆಡೆಗಳಿಂದ ಬಂದ ವ್ಯಾಪಾರಿಗಳು ಹೆಚ್ಚಿನ ಬೆಲೆ ಕೊಟ್ಟು ಕೊಳ್ಳುತ್ತಿದ್ದಾರೆ. ಹೊರಗಡೆಯಿಂದ ವ್ಯಾಪಾರಿಗಳು ಬರುತ್ತಿರುವುದರಿಂದ ಧಾರಣೆ ಹೆಚ್ಚುತ್ತಲೇ ಇದೆ. ಉತ್ತಮ ಗುಣಮಟ್ಟದ ಹಣ್ಣು ಹೊರಗಡೆಗೆ ಹೋಗುತ್ತಿದ್ದು, ಎರಡು– ಮೂರನೇ ದರ್ಜೆ ಹಣ್ಣು ಸ್ಥಳೀಯವಾಗಿ ಮಾರಾಟವಾಗುತ್ತಿದೆ. ಕೋಲಾರ ಜಿಲ್ಲೆ ಹಣ್ಣು ಮಾರುಕಟ್ಟೆಗೆ ಬಂದರೆ ಸ್ವಲ್ಪ ಮಟ್ಟಿಗೆ ಬೆಲೆ ನಿಯಂತ್ರಣಕ್ಕೆ ಬರಬಹುದು ಎಂದು ಹೇಳಲಾಗುತ್ತಿದೆ.

‘ಕಳೆದ ವರ್ಷಕ್ಕಿಂತ ಬೆಲೆ ದುಬಾರಿಯಾಗಿದೆ. ಬೇಡಿಕೆಯಷ್ಟು ಹಣ್ಣು ಮಾರುಕಟ್ಟೆಗೆ ಬರುತ್ತಿಲ್ಲ. ಹೊರಗಡೆಯಿಂದ ಬಂದ ವ್ಯಾಪಾರಿಗಳು ಹೆಚ್ಚು ಬೆಲೆ ಕೊಟ್ಟು ಗುಣಮಟ್ಟದ ಹಣ್ಣು ಖರೀದಿಸುತ್ತಿದ್ದಾರೆ. ನಮಗೆ ಸಾಧಾರಣ ಗುಣಮಟ್ಟದ ಹಣ್ಣು ಸಿಗುತ್ತಿದೆ’ ಎಂದು ವ್ಯಾಪಾರಿ ಗಿರೀಶ್ ಹೇಳುತ್ತಾರೆ.

ಇಳುವರಿ ಕುಸಿತ

ಈ ವರ್ಷ ಮಾವಿನ ಇಳುವರಿ ಸಾಧಾರಣ ಪ್ರಮಾಣದಲ್ಲಿ ಇದೆ. ಹಿಂದಿನ ವರ್ಷಗಳಷ್ಟು ಇಳುವರಿ ಕಂಡುಬಂದಿಲ್ಲ. ಬೇಡಿಕೆ ಹೆಚ್ಚಿರುವುದರಿಂದ ಬೆಲೆಯೂ ದುಬಾರಿಯಾಗಿದೆ. ರೈತರು ವ್ಯಾಪಾರಸ್ಥರು ಇಬ್ಬರಿಗೂ ಲಾಭವಾಗುತ್ತಿದೆ. ರಘು ಉಪನಿರ್ದೇಶಕ ತೋಟಗಾರಿಕೆ ಇಲಾಖೆ

ಹಣ್ಣಿನ ದರ (ಕೆ.ಜಿ ₹)

ರಸಪುರಿ;100–120

ಬಾದಾಮಿ;150–180

ಮಲಗೂಬ;150–180

ಮಲ್ಲಿಕಾ;120–150

ಸೇಂದೂರ;70–80

ಬೇನಿಷ;80–100

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT