ಭಾನುವಾರ, ನವೆಂಬರ್ 29, 2020
19 °C
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ

'ಶಿರಾದಲ್ಲಿ ಕಾಂಗ್ರೆಸ್ ಸೋಲಿಸಲು ತಲೆಬಿಸಿ ಮಾಡಿಕೊಂಡಿದ್ದ ಡಿ.ಕೆ. ಶಿವಕುಮಾರ್'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಸಿದ್ದರಾಮಯ್ಯ ಶಿರಾ ಮತ್ತು ಡಿ.ಕೆ. ಶಿವಕುಮಾರ್ ಆರ್‌.ಆರ್‌. ನಗರ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿದ್ದರು. ಡಿ.ಕೆ.ಶಿವಕುಮಾರ್, ಶಿರಾದಲ್ಲಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವುದಕ್ಕಿಂತ ಸೋಲಿಸುವುದು ಹೇಗೆ ಎನ್ನುವ ಬಗ್ಗೆ ಹೆಚ್ಚು ತಲೆಬಿಸಿ ಮಾಡಿಕೊಂಡಿದ್ದರು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಆರ್‌.ಆರ್‌. ನಗರದಲ್ಲಿ ಕಾಂಗ್ರೆಸ್‌ ಅನ್ನು ಸೋಲಿಸುವುದು ಹೇಗೆ ಎನ್ನುವ ಬಗ್ಗೆ ಯೋಚಿಸುತ್ತಿದ್ದರು. ಹೀಗೆ ಕಾಂಗ್ರೆಸ್‌ನ ಒಳಜಗಳ ಸಹ ಬಿಜೆಪಿಗೆ ಈ ಉಪಚುನಾವಣೆಯಲ್ಲಿ ಅನುಕೂಲವಾಗಿದೆ. ‘ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್‌ನಲ್ಲಿ ಕಳೆದು ಹೋಗುವ ಭಯ ಇದೆ. ಈ ಉಪಚುನಾವಣೆಯ ಫಲಿತಾಂಶ ಕಾಂಗ್ರೆಸ್‌ನ ಬೀದಿ ಜಗಳವನ್ನು ಮತ್ತಷ್ಟು ಬೀದಿಗೆ ತರಲಿದೆ ಎಂದು ಹೇಳಿದರು. 

ಶಿರಾದಲ್ಲಿ 25 ಸಾವಿರಕ್ಕಿಂತ ಹೆಚ್ಚು ಮತಗಳು ಹಾಗೂ ಆರ್‌.ಆರ್‌.ನಗರದಲ್ಲಿ 40 ಸಾವಿರ ಮತಗಳಿಂದ ಬಿಜೆಪಿ ಗೆಲುವು ಸಾಧಿಸುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಸೋತಿದ್ದೇವೆ ಮತ್ತು ಸೋಲಿನ ಭಯ ಉಂಟಾದಾಗ ಕಾಂಗ್ರೆಸ್ ನಾಯಕರು ಇವಿಎಂ ಸರಿ ಇಲ್ಲ ಎಂದು ದೂರುವರು. ಅನುಮಾನ ವ್ಯಕ್ತಪಡಿಸುವರು. ನಮ್ಮ ಕೈಯಲ್ಲಿಯೇ ಇವಿಎಂ ಇದ್ದಿದ್ದರೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಗೆಲ್ಲಲು ಬಿಡುತ್ತಿದ್ದೇವಾ. ಕಾಂಗ್ರೆಸ್ ನಾಯಕರ ಈ ಆರೋಪ ಮತದಾರರಿಗೆ ಮಾಡುವ ಅವಮಾನ ಎಂದರು.  

ವ್ಯಕ್ತಿಪೂಜೆ: ನಗರದಲ್ಲಿ ನಡೆದ ವಿಭಾಗದ ಮಟ್ಟದ ವಿಷಯ ಪ್ರಮುಖರ ಪ್ರಶಿಕ್ಷಣ ವರ್ಗದ ಸಭೆಯಲ್ಲಿ ಮಾತನಾಡಿದ ಕಟೀಲ್, ‘ಸ್ವಾತಂತ್ರ್ಯದ ನಂತರ ರಾಷ್ಟ್ರಮಾತೆ ಪೂಜೆ ಮಾಡಬೇಕಾಗಿದ್ದ ‌ಕಾಂಗ್ರೆಸ್ ಇಂದಿರಾಗಾಂಧಿ, ಸೋನಿಯಾ ಗಾಂಧಿ ಎಂದು ವ್ಯಕ್ತಿ ಪೂಜೆ ಮಾಡಿತು. ಬಿಜೆಪಿ ಆಡಳಿತದಲ್ಲಿ ದೇಶ ರಾಮರಾಜ್ಯವಾಗುತ್ತಿದೆ. ಮಹಾತ್ಮಗಾಂಧಿ ಅವರು ಜಾತ್ಯತೀತ ಎನ್ನುವ ಪದವನ್ನೇ ಬಳಸಲಿಲ್ಲ. ಅವರು ಸಹ ರಾಮರಾಜ್ಯದ ಮಾತುಗಳನ್ನು ಆಡಿದ್ದರು. ರಾಮನ ಆದರ್ಶಗಳನ್ನು ಪ್ರತಿಯೊಬ್ಬರಲ್ಲೂ ಬಿಜೆಪಿ ಮೂಡಿಸಲಿದೆ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು