ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿ ಜೂಜು ಅಡ್ಡ, ಬೆಳಿಗ್ಗೆ ಕೃಷಿ ಕಣ

ಕೊರಟಗೆರೆ ತಾಲ್ಲೂಕಿನ ಕೋಡ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯ ಸ್ಥಿತಿ ಇದು
Last Updated 18 ಫೆಬ್ರುವರಿ 2021, 4:24 IST
ಅಕ್ಷರ ಗಾತ್ರ

ಕೊರಟಗೆರೆ: ಇದು ಹೆಸರಿಗಷ್ಟೆ ಪ್ರೌಢಶಾಲೆ. ಆದರೆ ರಾತ್ರಿಯಾದರೆ ಜೂಜು ಅಡ್ಡ, ಕುಡುಕರ, ಅನೈತಿಕ ಚಟುವಟಿಕೆಗಳ ತಾಣ. ಬೆಳಗಿನ ವೇಳೆ ಕೃಷಿ ಕಣ. ತಾಲ್ಲೂಕಿನ ಕೋಡ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯ ಸದ್ಯದ ಸ್ಥಿತಿ ಇದು.

2007ರಲ್ಲಿ ಪ್ರಾರಂಭವಾದ ಶಾಲೆಯಲ್ಲಿ ಪ್ರಾರಂಭದಲ್ಲಿ ಖಾಸಗಿ ಕಟ್ಟಡದಲ್ಲಿ ತರಗತಿ ನಡೆಸಲಾಯಿತು. ಆನಂತರ 2009ರಲ್ಲಿ ಮಾಳೇನಹಳ್ಳಿ ಕಟ್ಟೆಬಾರೆ ಬಳಿ ಪ್ರೌಢಶಾಲೆಗಾಗಿ 3.16 ಗುಂಟೆ ಜಾಗದಲ್ಲಿ ಶಾಲೆ ಪ್ರಾರಂಭಿಸಲಾಯಿತು. ಆದರೆ ಇದುವರೆಗೂ ಸರಿಯಾಗಿ ಮೂಲ
ಸೌಕರ್ಯಗಳಿಲ್ಲ. ಸದ್ಯ ಶಾಲೆಯಲ್ಲಿ 65 ವಿದ್ಯಾರ್ಥಿಗಳು, 11 ಶಿಕ್ಷಕರಿದ್ದಾರೆ. ಶಾಲಾ ಕಟ್ಟಡಕ್ಕೆ ಭದ್ರತೆಯಿಲ್ಲ. 12 ವರ್ಷ ಕಳೆದರೂ ತಡೆಗೋಡೆ ನಿರ್ಮಿಸಿಲ್ಲ. ಒಂದೇ ಒಂದು ಶೌಚಾಲಯವಿದ್ದು, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ
ಮರೀಚಿಕೆಯಾಗಿದೆ. ಜಿಲ್ಲಾ ಪಂಚಾಯಿತಿಯಿಂದ ನೂತನ ಶೌಚಾಲಯ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿ ಅರ್ಧಕ್ಕೆ ನಿಂತು ವರ್ಷಗಳೇ ಕಳೆದಿವೆ.

ಶಾಲೆಗಾಗಿ ಕೊಳವೆ ಬಾವಿ, ನೀರಿನ ಟ್ಯಾಂಕ್ ಅಳವಡಿಸಿಲಾಗಿದೆ. ಆದರೆ ಅದು ವಿದ್ಯಾರ್ಥಿಗಳು‌, ಸಿಬ್ಬಂದಿಗಿಂತ ಅಕ್ಕಪಕ್ಕದ ಸಾರ್ವಜನಿಕರೆ ಹೆಚ್ಚು ಬಳಸುತ್ತಿದ್ದಾರೆ. ಶಾಲಾ ಆವರಣದಲ್ಲೆ ಗ್ರಾಮಕ್ಕೆಂದು ಶುದ್ಧ ಕುಡಿಯುವ ನೀರಿನ ಘಟಕವನ್ನು ಯಾವುದೇ ಅನುಮತಿ ಪಡೆಯದೇ ಅಳವಡಿಸಲಾಗಿದೆ. ಆದರೆ ಅದು ಕಳಪೆ ಕಾಮಗಾರಿಯಿಂದಾಗಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ.

ಶಾಲೆಗೆ ತಡೆಗೋಡೆ ಇಲ್ಲದ ಕಾರಣಕ್ಕೆ ಶಾಲೆಯ ಆಟದ ಮೈದಾನವನ್ನೇ ಸಾರ್ವಜನಿಕರು ಒಕ್ಕಣೆ ಕಣವನ್ನಾಗಿ ಬಳಸುತ್ತಿದ್ದಾರೆ. ಶಾಲೆ ಮುಂಭಾಗದಲ್ಲೆ ಮೇವು, ಕಾಳನ್ನು ಒಣಹಾಕಲಾಗುತ್ತಿದೆ. ಆವರಣದಲ್ಲಿ ಶಾಲೆಗೆ ಅಡ್ಡಲಾಗಿ ಹುಲ್ಲಿನ ಬಣವೆ ಹಾಕಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳ ಆಟೋಟಕ್ಕೆ ಅಡ್ಡಿಯಾಗುತ್ತಿದೆ.

ಶಾಲೆಗೆಂದು 3.16 ಎಕರೆ ಪ್ರದೇಶ ಮುಂಜೂರಾಗಿದೆ. ಆದರೀಗ ಆ ಜಾಗ ಒತ್ತುವರಿಯಾಗುತ್ತಿದೆ. ಈ ಬಗ್ಗೆ ಇಲ್ಲಿನ ಮುಖ್ಯ ಶಿಕ್ಷಕರು, ಸಿಬ್ಬಂದಿ ಹಾಗೂ ಶಾಲಾಭಿವೃದ್ಧಿ ಸಮಿತಿಯಿಂದ ಸಂಬಂಧಪಟ್ಟ ಇಲಾಖೆಗಳಿಗೆ ದೂರು ನೀಡಿದ್ದರೂ ಈವರೆಗೆ ಕ್ರಮವಹಿಸಿಲ್ಲ ಎಂಬ ಆರೋಪವಿದೆ.

ಶಾಲೆಗೆ ಕಾಂಪೌಂಡ್ ಹಾಗೂ ಸೂಕ್ತ ಭದ್ರತೆ ಇಲ್ಲದ ಕಾರಣ ಈಗಾಗಲೇ 4 ಬಾರಿ ಕಳ್ಳತನವಾಗಿದೆ. ಅದರಲ್ಲಿ 2 ಬಾರಿ ದಾಸೋಹಕ್ಕಾಗಿ ಬಳಸುವ ಅಡುಗೆ ಸಿಲೆಂಡರ್ ಸೇರಿದಂತೆ 2 ಕಂಪ್ಯೂಟರ್, ದಾಸೋಹಕ್ಕೆ ಬಳಸುತ್ತಿದ್ದ ದವಸ ಧಾನ್ಯ, ಟೇಬಲ್, ತೂಕ ಮಾಡುವ ಸ್ಕೇಲ್ ಕಳ್ಳತನವಾಗಿದೆ.

ಈ ಹಿಂದೆ ಶಾಲೆ ತಡೆಗೋಡೆ ನಿರ್ಮಾಣಕ್ಕೆ ನರೇಗಾ ಯೋಜನೆಯಡಿ ಕ್ಯಾಮೇನಹಳ್ಳಿ ಗ್ರಾಮ ಪಂಚಾಯಿತಿಯಿಂದ ಜೆಸಿಬಿ ಯಂತ್ರದ ಮೂಲಕ ಪಾಯ ತೆರೆದು ಕೆಲಸ ಪ್ರಾರಂಭಿಸಲಾಯಿತು. ಈ ವೇಳೆ ನಿರ್ಮಾಣಕ್ಕೆ ಬೇಕಾದ ಕಚ್ಚಾ ಸಾಮಗ್ರಿಗಳನ್ನು ತಂದು ಹಾಕಲಾಗಿತ್ತು. ಆ ಕೆಲಸವನ್ನೂ ಅರ್ಧಕ್ಕೆ ನಿಲ್ಲಿಸಿ ಕೆಲ ದಿನಗಳ ನಂತರ ಕಚ್ಚಾ ಸಾಮಗ್ರಿಗಳನ್ನು ವಾಪಸ್ ತೆಗದುಕೊಂಡು ಹೋಗಲಾಯಿತು ಎನ್ನುತ್ತಾರೆ ಸ್ಥಳೀಯರು.

ಶಾಸಕ ಡಾ. ಜಿ. ಪರಮೇಶ್ವರ ಅವರು ಶಂಕುಸ್ಥಾಪನೆ ಮಾಡಿದ್ದ ನಾಮಫಲಕದ ಕಲ್ಲು ಕೂಡ ರಾತ್ರೋರಾತ್ರಿ ಕಣ್ಮರೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT