ಸೋಮವಾರ, ಆಗಸ್ಟ್ 2, 2021
28 °C
ಅಧಿಕಾರಿಗಳ ನಿರ್ಲಕ್ಷ್ಯ: ಸ್ಥಳೀಯರ ಆರೋಪ

ಪಾವಗಡದ ಹಳ್ಳಿಗಳಲ್ಲಿ ಹಬ್ಬುತ್ತಿದೆ ಕೊರೊನಾ ವೈರಸ್‌ ಸೋಂಕು

ಜಯಸಿಂಹ ಕೆ.ಆರ್ Updated:

ಅಕ್ಷರ ಗಾತ್ರ : | |

ಪಾವಗಡ: ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಿವಿಧ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಹಕಾರದಿಂದ ಕೋವಿಡ್ ನಿಯಂತ್ರಿಸುವತ್ತ ಕಾರ್ಯಪ್ರವೃತ್ತರಾಗಬೇಕು ಎಂಬ ಒತ್ತಾಯ ಕೇಳಿಬರುತ್ತಿವೆ.

ಕೆಂಚಗಾನಹಳ್ಳಿ, ಭೂಪೂರು, ವೈ.ಎನ್.ಹೊಸಕೋಟೆ, ಚಿತ್ತಗಾನಹಳ್ಳಿ, ಎಸ್.ಆರ್ ಪಾಳ್ಯ ಸೇರಿದಂತೆ ಹಳ್ಳಿಗಳಲ್ಲಿ ಸೊಂಕಿತರು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಸುತ್ತಲೂ ಆಂಧ್ರ ಪ್ರದೇಶದಿಂದ ತಾಲ್ಲೂಕು ಸುತ್ತುವರೆದಿದ್ದು ಅಲ್ಲಿನ ಪ್ರದೇಶಗಳ ಜನರುಯ ನಿಕಟಸಂಪರ್ಕ ಹೊಂದಿರುವುದು, ಕೆಲಸವಿಲ್ಲದೆ ಬೆಂಗಳೂರಿಗೆ ವಲಸೆ ಹೋಗಿದ್ದ ಜನರು ಗ್ರಾಮಗಳಿಗೆ ಮರಳುತ್ತಿರುವುದು ಸೋಂಕು ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಮಂಗಳವಾರ ಒಂದೇ ದಿನ 14 ಮಂದಿಗೆ ಸೋಂಕು ತಗುಲಿದೆ. ತುಮಕೂರು ನಗರದ ನಂತರ ಜಿಲ್ಲೆಯಲ್ಲಿ ಹೆಚ್ಚಿನ ಸೋಂಕಿತರು ತಾಲ್ಲೂಕಿನಲ್ಲಿದ್ದಾರೆ.  ಒಟ್ಟು 47 ಸೋಂಕಿತರಿದ್ದು, 9 ಜನರು ಗುಣಮುಖರಾಗಿದ್ದಾರೆ.

ಅಧಿಕಾರಿಗಳು ಕೇವಲ ತಾಲ್ಲೂಕು ಕೇಂದ್ರಕ್ಕೆ ಹೆಚ್ಚಿನ ಗಮನಹರಿಸುತ್ತಿದ್ದು, ಗ್ರಾಮಿಣ ಭಾಗದಲ್ಲಿನ ಸಮಸ್ಯೆಗಳತ್ತ ಗಮನಹರಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ತಾಲ್ಲೂಕಿನ ಚಿತ್ತಗಾನಹಳ್ಳಿಯ 38 ವರ್ಷದ ವ್ಯಕ್ತಿಗೆ ಮಂಗಳವಾರ ಸೊಂಕು ದೃಢಪಟ್ಟಿತ್ತು. ತುರ್ತು ವಾಹನದಲ್ಲಿ ಕರೆತರಬೇಕಿದ್ದ ವ್ಯಕ್ತಿಯನ್ನು ದೂರವಾಣಿ ಕರೆ ಮಾಡಿ ದ್ವಿಚಕ್ರ ವಾಹನದಲ್ಲಿ ಪಟ್ಟಣಕ್ಕೆ ಕರೆಸಿಕೊಳ್ಳಲಾಗಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರು ಕೂಲಿ ಕೆಲಸಕ್ಕೆ ಹೋಗಿದ್ದಾರೆ. ಗ್ರಾಮಕ್ಕೆ ಯಾವೊಬ್ಬ ಅಧಿಕಾರಿಯೂ ಭೇಟಿ ನೀಡಿಲ್ಲ, ಜನರಿಗೆ ಸಲಹೆ ಸೂಚನೆಗಳನ್ನು ನೀಡಿಲ್ಲ. ಗ್ರಾಮ ಪಂಚಾಯಿತಿಯಿಂದ ಔಷಧಿ ಸಿಂಪಡಣೆ ಮಾಡದೆ ತಾತ್ಸಾರ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿರುವ ಕೆಂಚಗಾನಹಳ್ಳಿಯಲ್ಲಿಯೂ ಇದೇ ರೀತಿ ದೂರುಗಳು ಕೇಳಿಬರುತ್ತಿವೆ. ಪ್ರಾಥಮಿಕ ಸಂಪರ್ಕದಲ್ಲಿರುವವರನ್ನು ಹೋಂ ಕ್ವಾರಂಟೈನ್ ಮಾಡಿದ್ದರೂ, ಅನಕ್ಷರರಸ್ಥರಾಗಿರುವುದರಿಂದ ಮನೆಗೆ ನೀರಿನ ವ್ಯವಸ್ಥೆ, ಶೌಚಾಲಯದ ಸೌಕರ್ಯ ಇಲ್ಲದ್ದರಿಂದ ಗ್ರಾಮದಲ್ಲಿ ಓಡಾಡುತ್ತಿದ್ದಾರೆ. ಗ್ರಾಮ ದೇವರಿಗೆ ಹರಿಕೆ ಹೊತ್ತಿದ್ದೆ ತೀರಿಸಬೇಕು ಎಂದು ದೇಗುಲಗಳಿಗೆ ಹೋಗುತ್ತಿದ್ದಾರೆ ಎಂಬ ಆರೋಪಗಳಿವೆ.

ಹೀಗಾಗಿ ಗ್ರಾಮದ ಸರ್ಕಾರಿ ಶಾಲೆಗಳು, ವಿದ್ಯಾರ್ಥಿ ನಿಲಯಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಿದಲ್ಲಿ ಸೋಂಕು ಹರಡುವುದನ್ನು ನಿಯಂತ್ರಿಸಬಹುದು ಎಂಬ ಸಲಹೆಗಳು ಕೇಳಿ ಬರುತ್ತಿವೆ.

ಸಿಬ್ಬಂದಿ ನಿಯೋಜಿಸಿಲ್ಲ

ಕುರುಬರಹಳ್ಳಿ ಬಳಿಯ ವಿದ್ಯಾರ್ಥಿ ನಿಲಯವನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ. ತಾಲ್ಲೂಕಿನ ಕೊರೊನಾ ಸೋಂಕಿತರಿಗೆ ಇಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಇವರ ಬಗ್ಗೆ ನಿಗಾ ವಹಿಸಲು ಹೆಚ್ಚಿನ ಸಿಬ್ಬಂದಿ ನಿಯೋಜಿಸದ ಕಾರಣ ಆಸ್ಪತ್ರೆಯಿಂದ ರೋಗಿಗಳು ಹೊರ ಬಂದು ಓಡಾಡುತ್ತಿದ್ದಾರೆ. ಆಸ್ಪತ್ರೆ ಬಳಿಯ ಕಟ್ಟೆ ಮೇಲೆ ಕುಳಿತು ಹರಟೆ ಹೊಡೆಯುತ್ತಿದ್ದಾರೆ ಎಂದು ಕುರುಬರಹಳ್ಳಿ, ಬಾಲಮ್ಮನಹಳ್ಳಿ ಜನರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು