ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಬ್ಬಿ: ಗುಂಡಿ ಬಿದ್ದ ರಸ್ತೆಯಲ್ಲಿ ಗಿಡ ನೆಟ್ಟು ಪ್ರತಿಭಟನೆ

Last Updated 15 ಜುಲೈ 2021, 8:19 IST
ಅಕ್ಷರ ಗಾತ್ರ

ಗುಬ್ಬಿ: ಕಡಬ ಹೋಬಳಿ ಬಾಡೇನಹಳ್ಳಿ ಹಾಗೂ ಗ್ರಾಮವನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಹಳ್ಳ, ಗುಂಡಿ ಬಿದ್ದು ಸಂಪೂರ್ಣ ಹಾಳಾಗಿವೆ.
ಮಳೆಗಾಲದಲ್ಲಿ ನೀರು ನಿಂತು ಕೆಸರಾಗಿದೆ. ಗ್ರಾಮಸ್ಥರು ರಸ್ತೆಯಲ್ಲಿ ತೆಂಗು, ಅಡಿಕೆ, ಬಾಳೆ ನೆಟ್ಟು ಪ್ರತಿಭಟನೆ ನಡೆಸಿದರು.

ಗ್ರಾಮದ ರಸ್ತೆ ದುರಸ್ತಿಗೆ ಸಂಸದರು, ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ, ರಸ್ತೆ ಸರಿಪಡಿಸಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.

ಈ ಗ್ರಾಮವು ಸಂಸದರ ಆದರ್ಶ ಪಂಚಾಯಿತಿ ಮಾರಶೆಟ್ಟಿಹಳ್ಳಿ ವ್ಯಾಪ್ತಿಯಲ್ಲಿದ್ದರೂ ಸಂಸದರು ಯಾವುದೇ ಅನುದಾನವನ್ನು ನೀಡದೆ ಗ್ರಾಮವನ್ನು ಕಡೆಗಣಿಸಿದ್ದಾರೆ. ಶಾಸಕರು ಇತ್ತ ತಿರುಗಿಯೂ ನೋಡುತ್ತಿಲ್ಲ. ಅಳಿಲುಘಟ್ಟ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯರು ಒಮ್ಮೆಯೂ ಭೇಟಿ ನೀಡಿಲ್ಲ ಎಂದು ದೂರಿದರು.

ಗ್ರಾಮದ ಪರಿಶಿಷ್ಟರ ಕೇರಿಗೆ ನಾಲ್ಕು ತಿಂಗಳಿಂದ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ಯಾವುದೇ ಅನುದಾನವಿಲ್ಲ ಎಂದು ಹೇಳುತ್ತಾರೆ. ಹೀಗಾದರೆ ಸಮಸ್ಯೆಗಳ ಬಗ್ಗೆ ಯಾರ ಬಳಿ ಹೇಳಬೇಕು ಎಂದು ಗ್ರಾಮದ ಕುಮಾರ್ ಪ್ರಶ್ನಿಸಿದರು.

ಗ್ರಾಮಕ್ಕೆ ಈವರೆಗೆ ಒಂದು ಸರ್ಕಾರಿ ಬಸ್‌ ಬರುತ್ತಿತ್ತು. ಲಾಕ್‌ಡೌನ್‌ ನೆಪದಲ್ಲಿ ಅದನ್ನು ನಿಲ್ಲಿಸಿದ್ದಾರೆ. ವಿದ್ಯಾರ್ಥಿಗಳಿಗೆ ಹಾಗೂ ಆಸ್ಪತ್ರೆಗೆ ಹೋಗುವ ರೋಗಿಗಳಿಗೆ ತೊಂದರೆಯಾಗುತಿದೆ. ಗ್ರಾಮಕ್ಕೆ ತಕ್ಷಣವೇ ಬಸ್‌ ವ್ಯವಸ್ಥೆ ಮಾಡಬೇಕು ಎಂದು ಗ್ರಾಮದ ಜಯಣ್ಣ ಆಗ್ರಹಿಸಿದರು.

ತಾಲ್ಲೂಕಿನ ಗಡಿಭಾಗದಲ್ಲಿರುವ ಈ ಗ್ರಾಮವನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಕಡೆಗಣಿಸುತ್ತಿದ್ದು, ಮುಂಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಬಹಿಷ್ಕರಿಸುವ ಬಗ್ಗೆ ಚಿಂತಿಸಿದ್ದೇವೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸಿ ಸೌಕರ್ಯ ಒದಗಿಸದಿದ್ದರೆ, ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದರು.

‘ಗ್ರಾಮ ಪಂಚಾಯಿತಿ ಸದಸ್ಯನಾಗಿ ಆಯ್ಕೆಯಾದ ನಂತರ ಸಾವಿರಾರು ರೂಪಾಯಿ ಸ್ವಂತ ಹಣ ಖರ್ಚು ಮಾಡಿ, ಕೆಲವು ಕಾಮಗಾರಿ ಮಾಡಿಸಿದ್ದೇನೆ. ಎಲ್ಲವನ್ನು ನಾನೇ ಮಾಡಲು ಸಾಧ್ಯವಾಗುವುದಿಲ್ಲ. ಗ್ರಾಮ ಪಂಚಾಯಿತಿಯ ಹದಿನಾಲ್ಕನೇ ಹಣಕಾಸು ಯೋಜನೆಯಲ್ಲಿ ಈ ಗ್ರಾಮಕ್ಕೆ ಜಲ್ಲಿ ರಸ್ತೆಗಾಗಿ ₹1 ಲಕ್ಷ ಮೀಸಲಿಡಲಾಗಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಮುನೇಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT