ಮಂಗಳವಾರ, ನವೆಂಬರ್ 30, 2021
21 °C
ಖಾಸಗಿ ಬಸ್– ಟೆಂಪೊ ನಡುವೆ ಮುಖಾಮುಖಿ

ಟೆಂಪೊದಲ್ಲಿ ಕಾದಿದ್ದ ಜವರಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಪ್ರತಿದಿನವೂ ಬಸ್‌ನಲ್ಲೇ ಬಂದು ಹೂವು ತೆಗೆದುಕೊಂಡು ಹೋಗಿ ಜೀವನ ನಡೆಸುತ್ತಿದ್ದರು. ಆದರೆ, ಭಾನುವಾರ ಟೆಂಪೊ ಹತ್ತಿ ಜೀವವನ್ನೇ ತ್ಯಜಿಸಿದರು. ಎಂದಿನಂತೆ ಬಸ್‌ನಲ್ಲಿ ಹೋಗಿದ್ದರೆ ಜೀವ ಉಳಿಯುತಿತ್ತು.

ನಗರ ಹೊರವಲಯದ ಗುಬ್ಬಿ ರಸ್ತೆಯ ಸಿದ್ಧಾರ್ಥನಗರ ಸಮೀಪ ಭಾನುವಾರ ಬೆಳಿಗ್ಗೆ ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಮಿನಿ ಟೆಂಪೊ ನಡುವಿನ ಅಪಘಾತದಲ್ಲಿ ಟೆಂಪೊ ಚಾಲಕ ಹಾಗೂ ಮೂವರು ವ್ಯಾಪಾರಿಗಳು ಸಾವನ್ನಪ್ಪಿದ್ದಾರೆ.

ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಟೆಂಪೊ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮುಂಭಾಗದಲ್ಲೇ ಕುಳಿತಿದ್ದ ನಾಲ್ವರ ಪ್ರಾಣಪಕ್ಷಿ ಹಾರಿಹೋಗಿದೆ. ಅಪಘಾತದ ರಭಸಕ್ಕೆ ನಜ್ಜುಗುಜ್ಜಾಗಿದ್ದ ಎರಡೂ ವಾಹನಗಳನ್ನು ಬೇರ್ಪಡಿಸಿ, ಸಿಲುಕಿದ್ದ ಶವಗಳನ್ನು ಹೊರ ತೆಗೆಯಲು ಅಗ್ನಿಶಾಮಕ, ಪೊಲೀಸ್ ಸಿಬ್ಬಂದಿ, ಸ್ಥಳೀಯರು ಹರಸಾಹಸ ಪಡಬೇಕಾಯಿತು.

ಎರಡನೇ ಬಾರಿ: ಮಿನಿ ಟೆಂಪೊ ಇತ್ತೀಚೆಗೆ ಅಪಘಾತಕ್ಕೆ ತುತ್ತಾಗಿದ್ದು, ದುರಸ್ತಿ ಮಾಡಿಸಲಾಗಿತ್ತು. ಈಗ ಮತ್ತೊಮ್ಮೆ ಅಪಘಾತಕ್ಕೆ ತುತ್ತಾಗಿದ್ದು, ನಾಲ್ವರ ಜೀವ ಬಲಿ ಪಡೆದಿದೆ.

ಚಿಕ್ಕನಾಯಕನಹಳ್ಳಿಯ ವ್ಯಾಪಾರಿ ಕವಿತಾ, ತನ್ನ ಮಗ ದರ್ಶನ್ ಚಾಲನೆ ಮಾಡುತ್ತಿದ್ದ ಟೆಂಪೊದಲ್ಲಿ ಬಂದಿದ್ದಾರೆ. ಟೆಂಪೊದಲ್ಲಿ ತರಕಾರಿಯನ್ನು ಮಾರುಕಟ್ಟೆಗೆ ತುಂಬಿಕೊಂಡು ಬಂದಿದ್ದು, ಅದೇ ವಾಹನದಲ್ಲಿ ಚಿಕ್ಕನಾಯಕನಹಳ್ಳಿಗೆ ವಾಪಸಾಗಲು ಮುಂದಾಗಿದ್ದಾರೆ. ತುರುವೇಕೆರೆಗೆ ಹೋಗಬೇಕಿದ್ದ ಕೃಷ್ಣಮೂರ್ತಿ, ದಿವಾಕರ್ ಸಹ ಕೆ.ಬಿ. ಕ್ರಾಸ್‌ವರೆಗೆ ಬರುವುದಾಗಿ ಹೇಳಿದ್ದಾರೆ. ಅಲ್ಲಿವರೆಗೂ ಕರೆದುಕೊಂಡು ಹೋದರೆ ನಾಲ್ಕು ಕಾಸು ಸಿಗುತ್ತದೆ ಎಂದು ಹತ್ತಿಸಿಕೊಂಡಿದ್ದಾರೆ. ವ್ಯಾಪಾರಿಗಳೂ  ಬೇಗ ಊರು ತಲುಪಬಹುದು ಎಂದು ಹೊರಟಿದ್ದಾರೆ. ಅಷ್ಟರಲ್ಲಿ ಅಪಘಾತ
ಸಂಭವಿಸಿದೆ.

ಮಂಜು ಮುಸುಕಿದ ವಾತಾವರಣ ಹಾಗೂ ವಾಹನಗಳ ಅತಿಯಾದ ವೇಗದಿಂದ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಇಲ್ಲಿ ರಸ್ತೆ ಇಳಿಜಾರಿನಲ್ಲಿ ಇರುವುದರಿಂದ ಪದೇ ಪದೇ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಇದು ಅಪಘಾತ ವಲಯವಾದರೂ ನಿಯಂತ್ರಣಕ್ಕೆ ಮುಂದಾಗಿಲ್ಲ ಎಂದು ಸ್ಥಳೀಯರಾದ ಬ್ರಹ್ಮಾನಂದ ಆರೋಪಿಸಿದರು.

ನಾಯಿ ಕಾಟ: ರಸ್ತೆಬದಿಗಳಲ್ಲಿ ಕೋಳಿ ಅಂಗಡಿಗಳ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದೆ. ಇದರಿಂದಾಗಿ ನಾಯಿಗಳ ಹಾವಳಿ ಹೆಚ್ಚಿದ್ದು, ರಸ್ತೆಯ ಎರಡೂ ಬದಿಗೆ ಸದಾ ಓಡಾಡುತ್ತಿರುತ್ತವೆ. ವಾಹನಗಳಿಗೆ ನಾಯಿಗಳು ಅಡ್ಡ ಬರುವುದರಿಂದ ತಪ್ಪಿಸಲು ಹೋಗಿ ಅಪಘಾತಗಳು ಸಂಭವಿಸುತ್ತಿವೆ. ಕೋಳಿ ತ್ಯಾಜ್ಯ ಹಾಕದಂತೆ ತಡೆಯಬೇಕು. ಈ ಪ್ರದೇಶವನ್ನು ಅಪಘಾತ ವಲಯವಾಗಿ ಘೋಷಿಸಿ, ವಾಹನಗಳ ವೇಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ಆನಂದ್ ಒತ್ತಾಯಿಸಿದ್ದರು.

ಸ್ಥಳೀಯರ ನೆರವು: ಅಪಘಾತ ನಡೆಯುತ್ತಿದ್ದಂತೆ ಮುಂಜಾನೆ ವೇಳೆ ವಾಯುವಿಹಾರಕ್ಕೆ ತೆರಳುತ್ತಿದ್ದ ಸಿದ್ಧಾರ್ಥನಗರ ನಿವಾಸಿಗಳಾದ ಆನಂದ್, ಮಂಜುನಾಥ್ ಇತರರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು, ಟೆಂಪೊದಲ್ಲಿ ಸಿಲುಕಿದ್ದ ಶವಗಳನ್ನು ಹೊರ ತೆಗೆಯಲು ನೆರವಾದರು. ಬಸ್‍ನಲ್ಲಿದ್ದ ಪ್ರಯಾಣಿಕರಿಗೆ ಬೇರೊಂದು ವಾಹನದ ವ್ಯವಸ್ಥೆ ಮಾಡಿ ತುಮಕೂರು ಬಸ್ ನಿಲ್ದಾಣಕ್ಕೆ ಕಳುಹಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪೂರವಾಡ್, ಗ್ರಾಮಾಂತರ ಸರ್ಕಲ್ ಇನ್ಸ್‌ಪೆಕ್ಟರ್ ರಾಮಕೃಷ್ಣಯ್ಯ, ಸಬ್‍ ಇನ್ಸ್‌ಪೆಕ್ಟರ್‌ಗಳಾದ ಹರೀಶ್, ಸಿಂಗಣ್ಣಚಾರ್ ಭೇಟಿ ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು