ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಎಂಕೆ ಜೊತೆ ಹೊಂದಾಣಿಕೆ: ಕಾವೇರಿ ನೀರಿನಲ್ಲಿ ಕಾಂಗ್ರೆಸ್‌ ಅನ್ಯಾಯ - ಎಚ್‌ಡಿಕೆ

Published 14 ಏಪ್ರಿಲ್ 2024, 14:02 IST
Last Updated 14 ಏಪ್ರಿಲ್ 2024, 14:02 IST
ಅಕ್ಷರ ಗಾತ್ರ

ಗುಬ್ಬಿ: ಬಿಜೆಪಿಯವರು ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಜನರಲ್ಲಿ ತಪ್ಪು ಕಲ್ಪನೆ ಮೂಡಿಸುತ್ತಿದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.

ಪಟ್ಟಣದಲ್ಲಿ ಶನಿವಾರ ನಡೆದ ಚುನಾವಣಾ ಪ್ರಚಾರ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್‌ನಿಂದಲೇ ದಲಿತರಿಗೆ ಹೆಚ್ಚು ಅನ್ಯಾಯವಾಗಿದೆ. ಗ್ಯಾರಂಟಿ ಸಾಕಾರಗೊಳಿಸಲು ದಲಿತರ ಅನುದಾನ ಬಳಸಿಕೊಳ್ಳುತ್ತಿದ್ದಾರೆ. ಕಾವೇರಿ ನೀರಾವರಿ ಯೋಜನೆ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಎಸಗುತ್ತಿರುವ ಡಿಎಂಕೆ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಕಾಂಗ್ರೆಸ್  ರಾಜ್ಯದ ರೈತರ ಪಾಲಿಗೆ ಮರಣ ಶಾಸನ ಬರೆಯಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಕ್ವಿಂಟಲ್‌ ಕೊಬ್ಬರಿಗೆ ₹15 ಸಾವಿರ ನೀಡುತ್ತೇವೆ ಎನ್ನುತ್ತಿದ್ದ ಕಾಂಗ್ರೆಸ್ ನಾಯಕರು ಈಗ ಆ ರೈತರ ಬಗ್ಗೆ ಚಕಾರ ಎತ್ತದಿರುವುದು ದುರಾದೃಷ್ಟಕರ ಎಂದರು.

ಒಕ್ಕಲಿಗ ಸಮುದಾಯದವರು ಜಾತಿ ವ್ಯಾಮೋಹಕ್ಕೆ ಒಳಗಾಗದೆ ಅಭಿವೃದ್ಧಿಯ ದೃಷ್ಟಿಯಿಂದ ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ಕೋರಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಬಿಜೆಪಿ ಮತ್ತು ಜೆಡಿಎಸ್ ಅಲ್ಪಸಂಖ್ಯಾತರ ವಿರೋಧಿಯಲ್ಲ. ತ್ರಿವಳಿ ತಲಾಕ್‌ ರದ್ದುಗೊಳಿಸಿ ಮುಸ್ಲಿಂ ಮಹಿಳೆಯರ ಹಕ್ಕನ್ನು ಎತ್ತಿ ಹಿಡಿದದ್ದು ಬಿಜೆಪಿ. ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಭರದಲ್ಲಿ ಎಲ್ಲ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. ಶಾಸಕರ ಅನುದಾನಕ್ಕೂ ಕತ್ತರಿ ಹಾಕಲಾಗಿದೆ ಎಂದು ಆಪಾದಿಸಿದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಜನಪ್ರಿಯತೆ ಕಳೆದುಕೊಂಡಿದೆ. ಜನರಿಗೆ ಬೆಲೆ ಹಾಗೂ ತೆರಿಗೆ ಏರಿಕೆಯ ಬರೆ ಎಳೆಯಲು ಮುಂದಾಗಿದೆ. ಕೆಲವೇ ತಿಂಗಳಲ್ಲಿ ನೌಕರರಿಗೆ ಸಂಬಳ ನೀಡಲು ಹಣವಿಲ್ಲದಂತಾಗುತ್ತದೆ ಎಂದರು.

ಅಭ್ಯರ್ಥಿ ವಿ. ಸೋಮಣ್ಣ ಮಾತನಾಡಿ, ಗುಬ್ಬಿ ಮತ್ತು ತುಮಕೂರು ನಗರಗಳನ್ನು ಅವಳಿ ನಗರಗಳನ್ನಾಗಿ ಅಭಿವೃದ್ಧಿಪಡಿಸಲು ಬದ್ಧ ಎಂದು ಭರವಸೆ ನೀಡಿದರು.

ಬಿಜೆಪಿ ಮುಖಂಡ ಎಸ್‌ಡಿ ದಿಲೀಪ್ ಕುಮಾರ್ ಹಾಗೂ ಬಿಎಸ್ ನಾಗರಾಜು ಮಾತನಾಡಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಹೆಬ್ಬಾಕ, ತಾಲ್ಲೂಕು ಘಟಕದ ಅಧ್ಯಕ್ಷ ಪಂಚಾಕ್ಷರಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ. ಅಂಜನಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಚಿಕ್ಕವೀರಯ್ಯ, ಚುನಾವಣಾ ಉಸ್ತುವಾರಿ ಗೋಪಾಲಯ್ಯ, ಸಂಸದ ಜಿಎಸ್ ಬಸವರಾಜು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಫೋಟೋ 03ಸುದ್ದಿ 02ಗುಬ್ಬಿ: ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜೆಡಿಎಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್ ಡಿ ಕುಮಾರಸ್ವಾಮಿ.
ಫೋಟೋ 03ಸುದ್ದಿ 02ಗುಬ್ಬಿ: ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜೆಡಿಎಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್ ಡಿ ಕುಮಾರಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT