ಗುರುವಾರ , ಜೂನ್ 17, 2021
22 °C
ದುರ್ವಾಸನೆ ಸೇವಿಸಿ ಕೊಳಚೆ ನೀರಿನೊಂದಿಗೆ ಬದುಕು

ಮನೆಗೆ ನುಗ್ಗುವ ಕೊಳಚೆ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ನಗರದ 2ನೇ ವಾರ್ಡ್ ಶಿರಾಗೇಟ್ ಮಾರ್ಗದ ಸತ್ಯಮಂಗಲ, ದೇವರಾಯನದುರ್ಗ ರಸ್ತೆಯಲ್ಲಿ ಕೊಳಚೆ ನೀರು ಮನೆ, ರಸ್ತೆಗಳಿಗೆ ನುಗ್ಗುತ್ತಿದೆ. ಇದರಿಂದಾಗಿ ಈ ಭಾಗದ ಜನರು ದುರ್ವಾಸನೆ ಸೇವಿಸಿ ಕೊಳಚೆ ನೀರಿನೊಂದಿಗೆ ಬದುಕುವಂತಾಗಿದೆ.

ಕಳೆದ 15 ದಿನಗಳಿಂದ ಸಮಸ್ಯೆ ತೀವ್ರವಾಗಿದ್ದು, ಈ ಭಾಗದ ಜನರು ನರಕಯಾತನೆ ಅನುಭವಿಸುತ್ತಿದ್ದರೂ ಸರಿಪಡಿಸುವ ಪ್ರಯತ್ನವನ್ನು ಯಾವೊಬ್ಬ ಅಧಿಕಾರಿಯೂ ಮಾಡಿಲ್ಲ ಎಂದು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೇವರಾಯನದುರ್ಗ ರಸ್ತೆಯಲ್ಲಿರುವ ಎಚ್.ಕೆ.ಎಸ್.ಕಲ್ಯಾಣ ಮಂಟಪದ ಮುಂಭಾಗದಲ್ಲಿ ದೊಡ್ಡ ರಾಜ
ಗಾಲುವೆ ಹಾದುಹೋಗಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕಾಮಗಾರಿ ಕೈಗೊಂಡಿದ್ದ ಅಧಿಕಾರಿಗಳ ನಿರ್ಲಕ್ಷ್ಯ
ದಿಂದಾಗಿ ಜನರು ತೊಂದರೆ ಅನುಭವಿಸುವಂತಾಗಿದೆ. ರಾಜಗಾಲುವೆ ಮುಚ್ಚಿದ್ದು, ಚರಂಡಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಅವೈಜ್ಞಾನಿಕವಾಗಿ ಕಾಮಗಾರಿ ನಿರ್ವಹಿಸಿದ್ದು, ಚರಂಡಿ ನೀರು ಮನೆ, ರಸ್ತೆಗಳಿಗೆ ನುಗ್ಗುವಂತಾಗಿದೆ.

ಇಷ್ಟೆಲ್ಲ ಸಮಸ್ಯೆ ಎದುರಾಗಿದ್ದರೂ ಯಾರೊಬ್ಬರೂ ಪರಿಹರಿಸುವ ಪ್ರಯತ್ನ ಮಾಡಿಲ್ಲ. ಸ್ಮಾರ್ಟ್ ಸಿಟಿ ಅಧಿಕಾರಿಗಳನ್ನು ಕೇಳಿದರೆ ನಮಗೆ ಸಂಬಂಧಿಸಿದ್ದಲ್ಲ, ಜಲಮಂಡಳಿ ಅಧಿಕಾರಿಗಳನ್ನು ಕೇಳಿ ಎನ್ನುತ್ತಾರೆ. ಜಲಮಂಡಳಿಯವರನ್ನು ಕೇಳಿದರೆ ಮಹಾನಗರ ಪಾಲಿಕೆ ಕಡೆಗೆ ತೋರಿಸುತ್ತಾರೆ. ಜೆಟ್‌ಮಿಷನ್ ಸರಿ ಇಲ್ಲ. ಚರಂಡಿ ನೀರು ಸರಾಗವಾಗಿ ಹರಿಯುವಂತೆ ಮಾಡುತ್ತಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ಒಬ್ಬರ ಮೇಲೆ ಮತ್ತೊಬ್ಬರು ಕೈತೋರಿಸಿ ಕೈತೊಳೆದುಕೊಳ್ಳುತ್ತಿದ್ದಾರೆ.

ಪರ್ಯಾಯ ಯೋಜನೆ: ಸ್ಮಾರ್ಟ್‌ ಸಿಟಿ ಅಧಿಕಾರಿಗಳು ರಾಜಗಾಲುವೆ ಮುಚ್ಚುವ ಮುನ್ನ ಅದಕ್ಕೆ ಪರ್ಯಾಯವಾಗಿ ಯೋಜನೆ ರೂಪಿಸಿ ಚರಂಡಿಯ ಕೊಳಚೆ ನೀರು ಸರಾಗವಾಗಿ ಬೇರೆಡೆ ಹರಿದು ಹೋಗುವ ವ್ಯವಸ್ಥೆ ಮಾಡಿಲ್ಲ. ಹಾಗಾಗಿ ಮನೆಗಳಿಗೆ ನುಗ್ಗುತ್ತಿದೆ. ಕುಡಿಯುವ ನೀರಿನ ಜತೆಗೆ ಕಲುಷಿತ ನೀರು ಸೇರಿಕೊಳ್ಳುತ್ತಿದೆ. ಅದೇ ನೀರು ಕುಡಿದು ಬದುಕುವಂತಾಗಿದೆ. ತಕ್ಷಣ ಸರಿಪಡಿಸಬೇಕು ಎಂದು ವಾರ್ಡ್‌ನ ಮುಖಂಡರಾದ ಶ್ರೀನಿವಾಸ್, ಗಣೇಶ್, ಶಿವಣ್ಣ, ರಾಜಣ್ಣ, ಚಿಕ್ಕಸಿದ್ದಯ್ಯ, ನರಸೇಗೌಡ ಒತ್ತಾಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು