ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಆಯುಷ್ಮತಿ ಕ್ಲಿನಿಕ್‌ಗೆ ವೈದ್ಯರ ಕೊರತೆ

ನಾಲ್ಕು ಕಡೆ ಕ್ಲಿನಿಕ್‌ ಆರಂಭ, ಸಿಗದ ತಜ್ಞ ವೈದ್ಯರು
Published 8 ಸೆಪ್ಟೆಂಬರ್ 2023, 5:35 IST
Last Updated 8 ಸೆಪ್ಟೆಂಬರ್ 2023, 5:35 IST
ಅಕ್ಷರ ಗಾತ್ರ

-ಮೈಲಾರಿ ಲಿಂಗಪ್ಪ

ತುಮಕೂರು: ಮಹಿಳೆಯರ ಆರೋಗ್ಯ ತಪಾಸಣೆಗಾಗಿ ಆರಂಭಿಸಿರುವ ‘ಆಯುಷ್ಮತಿ ಕ್ಲಿನಿಕ್‌’ಗಳಲ್ಲಿ ಕೆಲಸ ಮಾಡಲು ತಜ್ಞ ವೈದ್ಯರೇ ಸಿಗುತ್ತಿಲ್ಲ. ಕೇವಲ ನಾಮಕಾವಸ್ತೆ ಎಂಬಂತೆ ಕ್ಲಿನಿಕ್‌ಗಳು ಶುರುವಾಗಿವೆ.

ಮಹಿಳೆಯರಿಗೆ ಎಲ್ಲ ಆರೋಗ್ಯ ಸೇವೆಗಳು ಒಂದೇ ಕಡೆ ಸಿಗುವಂತೆ ಮಾಡುವ ಉದ್ದೇಶದಿಂದ ಕ್ಲಿನಿಕ್‌ ಆರಂಭಿಸಲಾಗಿದೆ. ಕಳೆದ ಸರ್ಕಾರದ ಅವಧಿಯಲ್ಲಿ ರಾಜ್ಯದಾದ್ಯಂತ ಈ ಕ್ಲಿನಿಕ್‌ಗಳಿಗೆ ಚಾಲನೆ ನೀಡಲಾಗಿತ್ತು. ಆದರೆ, ಈವರೆಗೆ ಅಗತ್ಯ ಸಿಬ್ಬಂದಿ, ತಜ್ಞ ವೈದ್ಯರ ನೇಮಕವೇ ಆಗಿಲ್ಲ.

ನಗರದ ಕೋತಿತೋಪಿನ ಪ್ರಾಥಮಿಕ ಆರೋಗ್ಯ ಕೇಂದ್ರ, ಅಗ್ರಹಾರ ಹಾಗೂ ಶಿರಾ, ತಿಪಟೂರು ಸೇರಿದಂತೆ ಒಟ್ಟು ನಾಲ್ಕು ಕಡೆಗಳಲ್ಲಿ ಆಯುಷ್ಮತಿ ಕ್ಲಿನಿಕ್‌ ತೆರೆಯಲಾಗಿದೆ. ಕೇವಲ ಹೆಸರಿಗೆ ಮಾತ್ರ ಕ್ಲಿನಿಕ್‌ ಇದೆ. ಇಲ್ಲಿ ಇದುವರೆಗೆ ಯಾವುದೇ ಸೇವೆಗಳು ಸಿಗುತ್ತಿಲ್ಲ.

ಕೋತಿತೋಪಿನ ಕ್ಲಿನಿಕ್‌ಗೆ ಹದಿನೈದು ದಿನಕ್ಕೊಮ್ಮೆ ಸ್ತ್ರೀ ರೋಗ ಮತ್ತು ಮಕ್ಕಳು ತಜ್ಞರು ಭೇಟಿ ನೀಡುತ್ತಾರೆ. ಅಂದು ಆಸ್ಪತ್ರೆಗೆ ಬಂದ ಮಹಿಳೆಯರ ಆರೋಗ್ಯ ಪರೀಕ್ಷಿಸಲಾಗುತ್ತದೆ. ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ತಜ್ಞರನ್ನು ಕ್ಲಿನಿಕ್‌ಗೆ ನೇಮಿಸಿಕೊಳ್ಳಲಾಗಿದೆ.

ಅಗ್ರಹಾರ, ತಿಪಟೂರು, ಶಿರಾ ಕ್ಲಿನಿಕ್‌ಗಳು ಇನ್ನೂ ಆರಂಭಿಕ ಹಂತದಲ್ಲಿವೆ. ಇಲ್ಲಿಗೆ ತಜ್ಞ ವೈದ್ಯರೇ ಸಿಗುತ್ತಿಲ್ಲ. ಕ್ಲಿನಿಕ್‌ ಆರಂಭವಾಗಿರುವ ಕುರಿತು ಮಾಹಿತಿ ನೀಡುವ ಕೆಲಸವಾಗಿಲ್ಲ. ಸದುದ್ದೇಶದಿಂದ ಆರಂಭಿಸಿದ ಕ್ಲಿನಿಕ್‌ಗಳು ಎಲ್ಲರ ಉಪಯೋಗಕ್ಕೆ ಬರುವಂತಾಗಬೇಕು. ವೈದ್ಯಾಧಿಕಾರಿಗಳು ನಿರ್ಲಕ್ಷ್ಯ ವಹಿಸದೆ ಅಗತ್ಯ ಕ್ರಮಕೈಗೊಳ್ಳಬೇಕು ಎಂಬುವುದು ಸಾರ್ವಜನಿಕರ ಒತ್ತಾಯವಾಗಿದೆ.

‘ಸ್ವಸ್ಥ ಮಹಿಳೆಯರು, ಸ್ವಸ್ಥ ಸಮಾಜ ನಿರ್ಮಾಣ’ ಎಂದು ಆರಂಭಿಸಿದ ಕ್ಲಿನಿಕ್‌ಗಳು ಇದ್ದೂ ಇಲ್ಲದಂತಾಗಿವೆ. ಆಸ್ಪತ್ರೆಯಲ್ಲಿಯೇ ಕ್ಲಿನಿಕ್‌ ಆರಂಭಿಸಿದ್ದರೂ ಈ ಬಗ್ಗೆ ಜನರಿಗೆ ತಿಳಿದಿಲ್ಲ. ಪ್ರಚಾರದ ಕೊರತೆಯಿಂದ ಕ್ಲಿನಿಕ್‌ ಕುರಿತು ಹೆಚ್ಚಿನ ಮಹಿಳೆಯರಿಗೆ ಅರಿವಿಲ್ಲ.

‘ವೈದ್ಯರು, ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು. ಎಲ್ಲರಿಗೂ ಉತ್ತಮ ಆರೋಗ್ಯ ಸೇವೆ ಸಿಗುವಂತೆ ನೋಡಿಕೊಳ್ಳಬೇಕು’ ಎಂದು ಕೋತಿತೋಪಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದ ನಗರದ ನಿವಾಸಿ ಶಾರದಮ್ಮ ಒತ್ತಾಯಿಸಿದರು.

ಆಯುಷ್ಮತಿ ಕ್ಲಿನಿಕ್‌ನಲ್ಲಿರುವ ನಾಮಫಲಕ
ಆಯುಷ್ಮತಿ ಕ್ಲಿನಿಕ್‌ನಲ್ಲಿರುವ ನಾಮಫಲಕ

ತಜ್ಞರ ಸೇವೆ ನಾಮ ಫಲಕಕ್ಕೆ ಸೀಮಿತ

ಆಯುಷ್ಮತಿ ಕ್ಲಿನಿಕ್‌ ಪ್ರಾರಂಭಿಸಿದ ನಂತರ ಅಲ್ಲಿ ಯಾವೆಲ್ಲ ಆರೋಗ್ಯ ಸೇವೆಗಳು ಸಿಗುತ್ತವೆ ಎಂದು ನಾಮ ಫಲಕ ಅಳವಡಿಸುವ ಕೆಲಸ ಮಾತ್ರ ಆಗಿದೆ. ಕ್ಲಿನಿಕ್‌ಗೆ ಯಾವ ವೈದ್ಯರು ಭೇಟಿ ನೀಡುತ್ತಾರೆ? ರೋಗಿಗಳು ಎಷ್ಟು ಗಂಟೆಗೆ ಬರಬೇಕು? ಎಂಬ ಹೆಚ್ಚಿನ ಮಾಹಿತಿ ಇಲ್ಲ. ತಜ್ಞರ ಸೇವೆ ಕೇವಲ ನಾಮ ಫಲಕದಲ್ಲಿ ಮಾತ್ರ ಉಳಿದಿದೆ. ಪ್ರತಿ ಸೋಮವಾರ– ಫಿಜಿಷಿಯನ್‌ ಮಂಗಳವಾರ- ಮೂಳೆ ಮತ್ತು ಕೀಲು ತಜ್ಞರು ಬುಧವಾರ- ಶಸ್ತ್ರಚಿಕಿತ್ಸಾ ತಜ್ಞರು ಗುರುವಾರ- ಮಕ್ಕಳ ತಜ್ಞರು ಶುಕ್ರವಾರ- ಸ್ತ್ರೀರೋಗ ತಜ್ಞರು ಶನಿವಾರ- ಇತರೆ (ಕಿವಿ ಮೂಗು ಮತ್ತು ಗಂಟಲು ನೇತ್ರ ಚರ್ಮರೋಗ ಮಾನಸಿಕ ರೋಗ ತಜ್ಞರು) ಎಂದು ಬೋರ್ಡ್‌ ಹಾಕಲಾಗಿದೆ. ಅವರು ಭೇಟಿ ನೀಡುವ ಸಮಯದ ಜಾಗ ಮಾತ್ರ ಖಾಲಿ ಇದೆ.

ತಜ್ಞ ವೈದ್ಯರು ಸಿಗುತ್ತಿಲ್ಲ

ಆಯುಷ್ಮತಿ ಕ್ಲಿನಿಕ್‌ಗಳಿಗೆ ಪ್ರತಿ ದಿನ ಒಬ್ಬರು ತಜ್ಞ ವೈದ್ಯರನ್ನು ನಿಯೋಜಿಸಿಕೊಳ್ಳಬೇಕಿದೆ. ಆದರೆ ಜಿಲ್ಲೆಯಲ್ಲಿ ತಜ್ಞ ವೈದ್ಯರು ಸಿಗುತ್ತಿಲ್ಲ. ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲು ಅವಕಾಶ ಇದ್ದರೂ ಯಾರೂ ಮುಂದೆ ಬರುತ್ತಿಲ್ಲ. ಸರ್ಕಾರಿ ಆಸ್ಪತ್ರೆಯ ವೈದ್ಯರನ್ನು ಕ್ಲಿನಿಕ್‌ಗಳಿಗೆ ಬಳಸಿಕೊಳ್ಳಲು ಆಗುವುದಿಲ್ಲ. ಹೀಗಾಗಿ ಕ್ಲಿನಿಕ್‌ಗೆ ಪ್ರಾರಂಭದಲ್ಲಿ ಅಲ್ಪ ಸಮಸ್ಯೆಯಾಗುತ್ತಿದೆ. ಡಾ.ಡಿ.ಎನ್‌.ಮಂಜುನಾಥ್‌ ಡಿಎಚ್‌ಒ ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT