ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶೇ 72ರಷ್ಟು ಪದವೀಧರರು ನಿರುದ್ಯೋಗಿಗಳು

‘ಕಲಿಕೆ ಜೊತೆಗೆ ಕೌಶಲ’ ಕಾರ್ಯಾಗಾರ,
Published 9 ಮೇ 2024, 7:42 IST
Last Updated 9 ಮೇ 2024, 7:42 IST
ಅಕ್ಷರ ಗಾತ್ರ

ತುಮಕೂರು: ಪದವಿ ವಿದ್ಯಾಭ್ಯಾಸ ಮುಗಿಸಿದ ಶೇ 72ರಷ್ಟು ಮಂದಿಗೆ ಉದ್ಯೋಗ ಸಿಗುತ್ತಿಲ್ಲ. ಪದವಿ ಮುಗಿಸಿದವರಲ್ಲಿ ಉದ್ಯೋಗ ಬಯಸುವ ಕೌಶಲಗಳಿಲ್ಲದಿರುವುದೇ ಇದಕ್ಕೆ ಕಾರಣವಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕಿ ಜಿ.ಶೋಭಾ ಹೇಳಿದರು.

ವಿ.ವಿಯಲ್ಲಿ ಬುಧವಾರ ಕಾಲೇಜು ಶಿಕ್ಷಣ ಇಲಾಖೆ, ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದಿಂದ ಏರ್ಪಡಿಸಿದ್ದ ‘ಕಲಿಕೆ ಜೊತೆಗೆ ಕೌಶಲ’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕೌಶಲ ಅಭಿವೃದ್ಧಿ ನಿಗಮವು ವಿದ್ಯಾರ್ಥಿಗಳ ಭವಿಷ್ಯ ಬದಲಾಯಿಸುವ, ಉದ್ಯೋಗಶೀಲರನ್ನಾಗಿ ಮಾಡಲು ಮುಂದಾಗಿದೆ. ಕೌಶಲ ಬೆಳವಣಿಗೆಯ ಉತ್ಕೃಷ್ಟ ಯೋಜನೆಯೊಂದಿಗೆ ಶಿಕ್ಷಣ ಸಂಸ್ಥೆಗಳ ಜತೆ ಕೈಜೋಡಿಸುತ್ತಿದೆ. ಪ್ರತಿ ಕಾಲೇಜಿನಲ್ಲಿ ಪದವಿಯ 6ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಕೌಶಲವರ್ಧಕ ಪತ್ರಿಕೆ ಆಯ್ಕೆ ಮಾಡಿಕೊಳ್ಳುವ ಯೋಜನೆ ರೂಪಿಸಿದೆ ಎಂದು ಮಾಹಿತಿ ನೀಡಿದರು.

ಕೌಶಲ ಅಭಿವೃದ್ಧಿ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ಸಿ.ಆರ್‌.ಕೃಷ್ಣಕುಮಾರ್‌, ‘ಪದವಿ ಮುಗಿಸಿ ಹೊರಬರುತ್ತಿರುವ ವಿದ್ಯಾರ್ಥಿಗಳಲ್ಲಿ ಶೇ 22ರಷ್ಟು ಮಂದಿಗಷ್ಟೇ ವಿಶೇಷ ಕೌಶಲಗಳಿರುತ್ತವೆ. ಅವರಷ್ಟೇ ಉದ್ಯೋಗ ಪಡೆಯುತ್ತಿದ್ದಾರೆ’ ಎಂದು ತಿಳಿಸಿದರು.

ವಿ.ವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ‘ಮೊದಲು ಶಿಕ್ಷಕರ ಕೌಶಲ ವೃದ್ಧಿಯಾಗಬೇಕು. ಸರ್ಕಾರ ಕಡಿಮೆ ವೆಚ್ಚದಲ್ಲಿ ಪರಿಚಯಿಸುವ ಕೌಶಲ ಯೋಜನೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು’ ಎಂದು ಸಲಹೆ ಮಾಡಿದರು.

ವಿ.ವಿಯ ಸಂಯೋಜಕಿ ಎಂ.ಮಂಗಳಾಗೌರಿ, ‘ಕೌಶಲ ಆಧಾರಿತ ಆರು ವಿಷಯಗಳನ್ನು ಪರಿಚಯಿಸಲಾಗುತ್ತಿದೆ. ನಿಯಮಿತ ಪಠ್ಯಕ್ರಮದ ಜತೆಗೆ ಒಂದು ವಿಷಯಕ್ಕೆ ಮೂರು ಕ್ರೆಡಿಟ್‍ಗಳಂತೆ 100 ಅಂಕಗಳು ಇರಲಿವೆ’ ಎಂದು ಮಾಹಿತಿ ನೀಡಿದರು.

ವಿ.ವಿಯ ಹಣಕಾಸು ಅಧಿಕಾರಿ ಪ್ರೊ.ಪಿ.ಪರಮಶಿವಯ್ಯ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT