ಮಂಗಳವಾರ, ಫೆಬ್ರವರಿ 25, 2020
19 °C
ಮಹಾನಗರಪಾಲಿಕೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ: ಮಾಜಿ ಶಾಸಕ ರಫೀಕ್‌ ಅಹಮದ್‌ ಆರೋಪ

ಸ್ಮಾರ್ಟ್‌ಸಿಟಿ; ಜನಪ್ರತಿನಿಧಿಗಳ ವೈಫಲ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಸ್ಮಾರ್ಟ್‌ ಸಿಟಿ ಕಾಮಗಾರಿಗಳು ನಿಧಾನಗತಿಯಲ್ಲಿ ನಡೆಯುತ್ತಿವೆ. ಇದಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳ ಹೊಂದಾಣಿಕೆ ಕೊರತೆಯೇ ಕಾರಣ. ಕಾಮಗಾರಿಗಳನ್ನು ವ್ಯವಸ್ಥಿತ ರೀತಿಯಲ್ಲಿ ಕೂಡಲೇ ಕೈಗೊಳ್ಳಬೇಕೆಂದು ಮಾಜಿ ಶಾಸಕ ರಫೀಕ್‌ ಅಹಮದ್‌ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜನಪ್ರತಿನಿಧಿಗಳು, ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲ. ಯಾರು ಯಾಕಾಗಿ ರಸ್ತೆಗಳನ್ನು ಅಗೆಯುತ್ತಿದ್ದಾರೆ ಎಂದು ಯಾರಿಗೂ ತಿಳಿಯುತ್ತಿಲ್ಲ. ಅಧಿಕಾರಿಗಳಿಗೂ ಈ ಬಗ್ಗೆ ತಿಳುವಳಿಕೆ ಇಲ್ಲ. ನನ್ನ ಅಧಿಕಾರಾವಧಿಯಲ್ಲಿ ಕೆಲಸಗಳು ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿದ್ದವು’ ಎಂದರು.

‘ನನ್ನ ಅವಧಿಯಲ್ಲಿ ₹2200 ಕೋಟಿಯ ಕ್ರಿಯಾ ಯೋಜನೆ ಮಾಡಿ ಸರ್ಕಾರದ ಅನುಮೋದನೆ ಪಡೆದು ಕೆಲವು ಯೋಜನೆಗಳಿಗೆ ಚಾಲನೆ ನೀಡಲಾಗಿತ್ತು. 5 ವರ್ಷಗಳಲ್ಲಿ ತುಮಕೂರು ಉತ್ತಮ ನಗರವಾಗುತ್ತದೆಂಬ ಕನಸಿತ್ತು. ಇಂದು ಜನಪ್ರತಿನಿಧಿಗಳ ವೈಫಲ್ಯದಿಂದ ಸ್ಮಾರ್ಟ್‌ಸಿಟಿಗೆ ದುಸ್ಥಿತಿ ಬಂದಿದೆ. ಕೆಲವು ರಸ್ತೆಗಳನ್ನು ಅಗೆದು ಸಮರ್ಪಕವಾಗಿ ಮುಚ್ಚದೇ ಸಮಸ್ಯೆ ಸೃಷ್ಟಿಯಾಗುತ್ತಿದೆ. ಇನ್ನೂ ದೊಡ್ಡ ದೊಡ್ಡ ಕಾಮಗಾರಿಗಳು ಆಗಬೇಕಾಗಿದ್ದು, ಜನರಿಗಾಗುವ ತೊಂದರೆಯನ್ನು ಊಹಿಸುವಂತೆಯೂ ಇಲ್ಲ. ಸ್ಮಾರ್ಟ್‌ಸಿಟಿಗೆ 4–5 ತಿಂಗಳಿನಿಂದ ಆಯುಕ್ತರೇ ಇಲ್ಲವಾಗಿದ್ದಾರೆ’ ಎಂದರು.

ಅನುದಾನ ಹಂಚಿಕೆಯಲ್ಲಿ ತಾರತಮ್ಯ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಗರಪಾಲಿಕೆಗೆ ₹125ಕೋಟಿ ಬಿಡುಗಡೆಯಾಗಿದ್ದು, ಎಲ್ಲಾ ವಾರ್ಡ್‌ಗಳಿಗೂ ಅನುದಾನ ಸಮಾನವಾಗಿ ಹಂಚಿಕೆಯಾಗಬೇಕು. ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ. ನಗರದಲ್ಲಿ ರಸ್ತೆಗಳು ಅಲ್ಲಲ್ಲಿ ಗುಂಡಿ ಬಿದ್ದಿವೆ. ಈವರೆಗೂ ಯಾವುದೇ ಗುಂಡಿ ಮುಚ್ಚುವ ಕೆಲಸ ಮಾಡಿಲ್ಲ ಎಂದು ಆರೋಪಿಸಿದ ಅವರು, ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಒಂದೇ ಸರ್ಕಾರವಿದ್ದು ಶಾಸಕರು ರಸ್ತೆ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ ತರಬೇಕು ಎಂದು ಆಗ್ರಹಿಸಿದರು.

ವರ್ತುಲ ರಸ್ತೆ ಅಭಿವೃದ್ಧಿಗೆ ₹58 ಕೋಟಿ ಬಿಡುಗಡೆಯಾಗಿದ್ದು ಕಾಮಗಾರಿಯು ಸಾಮಾನ್ಯ ರಸ್ತೆಯಂತೆಯೇ ಆಗಿದೆ. ವರ್ತುಲ ರಸ್ತೆಯನ್ನು ಗುಣಮಟ್ಟದ ಸ್ಮಾರ್ಟ್‌ ರಸ್ತೆಯಾಗಿ ಪರಿವರ್ತಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದರು.

ಸಂಚಾರ ದಟ್ಟಣೆ: ನಗರದಲ್ಲಿ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸ್‌ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಕಾಣಿಸುತ್ತಿದೆ. ಸಮರ್ಪಕ ನಿರ್ವಹಣೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಗೋಷ್ಠಿಯಲ್ಲಿ ವಕೀಲ ನಿರಂಜನ್‌, ಮಾಜಿ ಕಾರ್ಪೋರೇಟರ್‌ ರುದ್ರೇಶ್‌, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಟೋ ರಾಜು, ಮೆಹಬೂಬ್ ಪಾಷಾ, ಸಯ್ಯದ್‌ ರಫೀಕ್‌ ಇದ್ದರು.

ಪ್ರತಿ ಮನೆಗೂ ಗ್ಯಾಸ್‌ ಸಂಪರ್ಕ ನೀಡಿ
ನಗರದಲ್ಲಿ ಗ್ಯಾಸ್‌ ಸಂಪರ್ಕ ಒದಗಿಸುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಬಡವ ಶ್ರೀಮಂತ ಎಂಬ ತಾರತಮ್ಯ ಅನುಸರಿಸಲಾಗುತ್ತಿದೆ. ಪ್ರತಿ ಮನೆಗೂ ಗ್ಯಾಸ್‌ ಸಂಪರ್ಕ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಜಿಲ್ಲಾಸ್ಪತ್ರೆ ನಿರ್ವಹಣೆಗೆ ಹಣ ಬೇಕಿದ್ದು, ಶಾಸಕರು ಹೆಚ್ಚುವರಿ ಅನುದಾನವನ್ನು ತಂದು ನಿರ್ವಹಣೆ ಮಾಡಬೇಕು ಎಂದು ರಫೀಕ್‌ ಅಹಮದ್‌ ಒತ್ತಾಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು