ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಠಗಳತ್ತ ವಿ.ಸೋಮಣ್ಣ ಚಿತ್ತ

ತುಮಕೂರಲ್ಲದೆ ಬೇರೆಡೆ ಸ್ಪರ್ಧೆಗೂ ಸಿದ್ಧ
Published 18 ಫೆಬ್ರುವರಿ 2024, 5:59 IST
Last Updated 18 ಫೆಬ್ರುವರಿ 2024, 5:59 IST
ಅಕ್ಷರ ಗಾತ್ರ

ತುಮಕೂರು: ತುಮಕೂರು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಪ್ರಯತ್ನಿಸುತ್ತಿರುವ ಮಾಜಿ ಸಚಿವ ವಿ.ಸೋಮಣ್ಣ ಶನಿವಾರ ಜಿಲ್ಲೆಯಲ್ಲಿ ವಿವಿಧ ಮಠಾಧೀಶರನ್ನು ಭೇಟಿಯಾದರು.

ಕೊರಟಗೆರೆ ತಾಲ್ಲೂಕು ಎಲೆರಾಂಪುರ ಕುಂಚಿಟಿಗರ ಮಠದ ಹನುಮಂತನಾಥ ಸ್ವಾಮೀಜಿ, ಸಿದ್ಧರಬೆಟ್ಟದ ರಂಭಾಪುರಿ ಖಾಸಾ ಶಾಖಾ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ನಂತರ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಭೇಟಿಯಾಗಿ ಚರ್ಚೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜ್ಯಸಭೆಗೆ ಅವಕಾಶ ಕೇಳಿದ್ದೆ. ಅಲ್ಲಿ ಎಲ್ಲವೂ ಕೊನೆ ಹಂತಕ್ಕೆ ಬಂದಿದ್ದರಿಂದ ಸಾಧ್ಯವಾಗಿಲ್ಲ. ಹೈಕಮಾಂಡ್ ಅವಕಾಶ ಕೊಟ್ಟರೆ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ತುಮಕೂರು ಬಿಟ್ಟು ಬೇರೆಡೆ ಸ್ಪರ್ಧೆ ಮಾಡುವಂತೆ ಹೇಳಿದರೆ ಅದಕ್ಕೂ ತಯಾರಿದ್ದೇನೆ’ ಎಂದು ಹೇಳಿದರು.

ಸೋಮಣ್ಣ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ, ‘ಸ್ಥಳೀಯರಿಗೆ ಟಿಕೆಟ್ ನೀಡಬೇಕು’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಮಾಧುಸ್ವಾಮಿ ಹಿರಿಯ ನಾಯಕರು. ಸ್ಥಳೀಯರು, ಮತ್ತೊಬ್ಬರು ಎಂಬುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಬಿಟ್ಟು ಬೇರೆಡೆ ನಿಲ್ಲಲಿಲ್ಲವೆ’ ಎಂದು ಪ್ರಶ್ನಿಸಿದರು.

‘ನನಗೂ ತುಮಕೂರಿಗೂ ಅವಿನಾಭಾವ ಸಂಬಂಧ ಇದೆ. ಯಾರನ್ನು ಎಲ್ಲೆಗೆ ಕರೆಸಿಕೊಳ್ಳಬೇಕು. ಎಲ್ಲಿ ಕೆಲಸ ಮಾಡಿಸಿಕೊಳ್ಳಬೇಕು ಎಂಬುದು ಗೊತ್ತಿದೆ. ಕಳೆದ ಬಾರಿ ಜಿ.ಎಸ್.ಬಸವರಾಜು ಚುನಾವಣೆಗೆ ಸ್ಪರ್ಧಿಸಿದಾಗ ನಾನೇ ಉಸ್ತುವಾರಿ ಇದ್ದೆ. ಜಿಲ್ಲೆಯ ಒಂದು ಸಾವಿರ ಹಳ್ಳಿ ಹೆಸರು ಹೇಳಬಲ್ಲೆ. ಸಾವಿರಾರು ಜನರು ಗೊತ್ತಿದ್ದಾರೆ’ ಎನ್ನುವ ಮೂಲಕ ಸ್ಪರ್ಧೆಗೆ ವಿರೋಧಿಸುವವರಿಗೆ ತಿರುಗೇಟು ನೀಡಿದರು.

‘ವಿಧಾನಸಭೆ ಚುನಾವಣೆಯಲ್ಲಿ ಎರಡು ಕಡೆ ಸ್ಪರ್ಧೆ ಮಾಡಲು ನಿರ್ಧರಿಸಿದ್ದು ಒಬ್ಬ ಸೋಮಣ್ಣನಿಂದ ಮಾತ್ರ ಸಾಧ್ಯ. ಇದು ಎಲ್ಲರ ಕೈಯಲ್ಲೂ ಸಾಧ್ಯವಿಲ್ಲ. ನಾನು ಗೆದಿದ್ದರೆ ಏನಾಗುತ್ತಿದ್ದೆ ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ನಾನೊಬ್ಬ ಕೆಲಸಗಾರ. ಹಗ್ಗದಲ್ಲಿ ಕಟ್ಟಿಹಾಕಿ ಕೂರಿಸಿದರೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ’ ಎಂದು ಹೇಳಿದರು.

ಬಿಜೆಪಿ– ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ದು ತುಮಕೂರು ಕ್ಷೇತ್ರ ಯಾರಿಗೆ? ಎಂಬುದನ್ನು ಬಿಜೆಪಿ ಹೈಕಮಾಂಡ್ ಈಗಾಗಲೇ ನಿರ್ಧರಿಸಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT