ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿತ್ತನೆಗೆ ಅಡ್ಡಿಯಾದ ಸೋನೆ ಮಳೆ

ಆರಿದ್ರಾ ಮಳೆ ಮುಗಿದರೂ ಶುರುವಾಗದ ಬಿತ್ತನೆ
Published 14 ಜುಲೈ 2023, 6:32 IST
Last Updated 14 ಜುಲೈ 2023, 6:32 IST
ಅಕ್ಷರ ಗಾತ್ರ

ಆರ್.ಸಿ.ಮಹೇಶ್

ಹುಳಿಯಾರು: ಹೋಬಳಿ ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಪೂರ್ವ ಮುಂಗಾರು ಬಿತ್ತನೆ ಮುಗಿದು ಹಿಂಗಾರು ಬಿತ್ತನೆಯ ಸಿದ್ಧತೆಯಲ್ಲಿ ರೈತರಿದ್ದಾರೆ. ಆರಿದ್ರಾ ಮಳೆಯ ಕಾಲ ಮುಗಿದು ಪುನರ್ವಸು ಮಳೆ ಮುಗಿಯುತ್ತಾ ಬಂದರೂ ಬಿತ್ತನೆಗೆ ಪೂರಕ ವಾತಾವರಣ ಸೃಷ್ಟಿಯಾಗದಿರುವುದು ರೈತರಿಗೆ ಆತಂಕ ತಂದಿದೆ.

ಏಪ್ರಿಲ್ ಆರಂಭದಲ್ಲಿಯೇ ಪೂರ್ವ ಮುಂಗಾರು ಬಿತ್ತನೆಗೆ ಸಿದ್ಧತೆ ನಡೆಯುವುದು ಈ ಭಾಗದಲ್ಲಿ ಮೊದಲಿನಿಂದಲೂ ನಡೆದು ಬಂದಿದೆ. ಆದರೆ ಈ ಬಾರಿ ಆರಂಭದಲ್ಲಿ ಮಳೆ ಬಾರದೆ ಪೂರ್ವ ಮುಂಗಾರಿನ ಬೀಜ ಬಿತ್ತನೆಗೆ ತೊಂದರೆಯಾಗಿತ್ತು. ಪೂರ್ವ ಮುಂಗಾರಿನ ಕೊನೆಯಲ್ಲಿ ಮಳೆ ಬಿದ್ದ ಕಾರಣ ಅಲ್ಲಲ್ಲಿ ಅಲ್ಪಸ್ವಲ್ಪ ಮಳೆಯಾಗಿ ಬಿತ್ತನೆಗೆ ಅನುವು ಮಾಡಿಕೊಟ್ಟಿತ್ತು. ಇತ್ತೀಚಿನ ವರ್ಷಗಳಲ್ಲಿ ಒಂದಲ್ಲ ಒಂದು ಸಮಸ್ಯೆಯಿಂದ ಸಕಾಲದಲ್ಲಿ ಬಿತ್ತನೆಗೆ ತೊಂದರೆಯಾಗುತ್ತಲೇ ಬಂದಿದೆ. ಕಳೆದ ಏಳೆಂಟು ವರ್ಷಗಳಿಂದ ಹೆಸರು ಸೇರಿದಂತೆ ಇತರ ಬೆಳೆ ಬಿತ್ತನೆ ಮಾಡಿದ್ದರೂ ಪ್ರಯೋಜನವಾಗಿಲ್ಲ. ಈ ಬಾರಿ ಬೆಳೆಗೆ ಸಹಾಯಕವಾಗುವಂತಹ ಮಳೆ ಆಗದೆ ರೈತರು ಕಷ್ಟದಲ್ಲಿದ್ದಾರೆ.

ರಾಗಿ ಬಿತ್ತನೆಗೆ ಸಕಾಲವಾಗಿರುವುದರಿಂದ ರೈತರು ಹೊಲ ಸ್ವಚ್ಛಗೊಳಿಸಲು ಅಣಿಯಾಗುತ್ತಿದ್ದಾರೆ. ಬಹು ದಿನಗಳಿಂದ ಸೋನೆ ಮಳೆಯ ಸಿಂಚನವಾಗುತ್ತಿದ್ದು ಆರಿದ್ರಾ ಮಳೆಯ ಕಾಲ ಮುಗಿದು ಹೋಗಿದೆ. ಸಾಮಾನ್ಯವಾಗಿ ಆರಿದ್ರಾ ಮತ್ತು ಪುನರ್ವಸು ಮಳೆಗೆ ರಾಗಿ ಬಿತ್ತನೆ ಮಾಡುವುದು ಈ ಭಾಗದಲ್ಲಿ ವಾಡಿಕೆ. ಪೂರ್ವ ಹಿಂಗಾರು ಆರಂಭವಾಗುತ್ತಿದ್ದಂತೆ ರೈತರು ರಾಗಿ ಬಿತ್ತನೆಗೆ ಸಿದ್ಧರಾಗುತ್ತಾರೆ. ಆದರೆ ಈ ಬಾರಿ ಪೂರ್ವ ಹಿಂಗಾರಿನಲ್ಲಿ ಉತ್ತಮ ಮಳೆಯಾಗದೆ ಹೊಲಗಳಲ್ಲಿ ಕಳೆ ಬೆಳೆದಿದೆ.

ಆರೇಳು ದಿನಗಳಿಂದ ಸೋನೆ ಮಳೆ ಸಿಂಚನವಾಗುತ್ತಿದೆ. ಈಗ ಮಳೆ ನಿಂತರೂ ಹೊಲ ಸ್ವಚ್ಛಗೊಳ್ಳದೆ ಇರುವುದು ಬಿತ್ತನೆಗೆ ಹಿನ್ನಡೆಯಾಗುತ್ತದೆ. ಈಗಾಗಲೇ ಪುನರ್ವಸು ಮಳೆ ಆರಂಭವಾಗಿ ಐದಾರು ದಿನ ಮುಗಿದು 10 ದಿನ ಮಾತ್ರ ಇದೆ. ಮಳೆ ಸಿಂಚನ ಹೀಗೆ ಮುಂದುವರೆದರೆ ಮುಂದೆ ಅಲ್ಪಾವಧಿ ತಳಿಯ ಬೀಜ ಬಿತ್ತನೆ ಮಾಡಬೇಕಾಗುತ್ತದೆ.

ಚಿಕ್ಕನಾಯಕನಳ್ಳಿ ತಾಲ್ಲೂಕಿನ ವಿವಿಧ ಕಡೆ ರಾಗಿ ಪೈರು ನಾಟಿ ಮಾಡುವ ಪರಿಪಾಠವಿದ್ದು ಈಗಾಗಲೇ ಸಸಿ ಮಡಿಗಳನ್ನು ಮಾಡಿಕೊಳ್ಳುವ ಕೆಲಸವೂ ನಡೆದಿದೆ. ರಾಗಿ ಬಿತ್ತನೆ ಜತೆ ಅಕ್ಕಡಿ ಸಾಲಿನಲ್ಲಿ ತೊಗರಿ, ಅವರೆ, ಹರಳು ಕೂಡ ಬೆಳೆಯುವ ಅವಕಾಶವಿದ್ದು ಅವುಗಳ ಬಿತ್ತನೆಗೂ ಕಾಲ ಮೀರುವ ಅತಂಕ ಎದುರಾಗಿದೆ. ಈಗ ಸೋನೆ ಮಳೆ ನಿಂತರೆ ಕೃಷಿ ಚಟುವಟಿಕೆ ಬಿರುಸಾಗುತ್ತದೆ. ಒಮ್ಮೆಲೆ ಭೂಮಿ ಸ್ವಚ್ಛಗೊಳಿಸಲು ಬೇಸಾಯ ಮಾಡಲು ರಾಸು ಹಾಗೂ ಟ್ರ್ಯಾಕ್ಟರ್‌ಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಪುನರ್ವಸು ಹಾಗೂ ಪುಷ್ಯಾ ಮಳೆಗೆ ರಾಗಿ, ನವಣೆ, ಸಾಮೆ, ಹಾರಕ ಸೇರಿದಂತೆ ಸಿರಿಧಾನ್ಯಗಳ ಬಿತ್ತನೆಯೂ ನಡೆಯುತ್ತದೆ.

- ರಾಗಿ ಬಿತ್ತನೆ ಬೀಜ ದಾಸ್ತಾನು

ತಾಲ್ಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ರಾಗಿ ಬಿತ್ತನೆ ಬೀಜ ದಾಸ್ತಾನಿದೆ. ಪ್ರಸ್ತುತ ಎಂಆರ್-‌6 ಎಂ.ಎನ್‌ 365 ತಳಿ ಬಿತ್ತನೆಗೆ ಪೂರಕವಾಗಿದೆ. ಮಳೆ ಅಭಾವವಾದರೆ ನಂತರ ಎಂ.ಎನ್ 365 ಬಿತ್ತನೆ ಮಾಡಬಹುದು. ಅಗತ್ಯ ಬಿದ್ದರೆ ಮತ್ತೆ ಬಿತ್ತನೆ ಬೀಜ ಕೇಂದ್ರಗಳಿಗೆ ತರುವ ವ್ಯವಸ್ಥೆ ಮಾಡಲಾಗುವುದು. ಡಿ.ಆರ್.ಹನುಮಂತರಾಜು ಸಹಾಯಕ ಕೃಷಿ ನಿರ್ದೇಶಕ ಚಿಕ್ಕನಾಯಕನಹಳ್ಳಿ ಹೊಲ ಸ್ವಚ್ಛಗೊಳಿಸುವ ಸವಾಲು ಆರಂಭದಲ್ಲಿಯೇ ಮಳೆ ಬಾರದ ಕಾರಣ ಪೂರ್ವ ಮುಂಗಾರು ಬಿತ್ತನೆ ತಡವಾಗಿದೆ. ಹಿಂಗಾರು ಬೆಳೆ ಬಿತ್ತನೆಗೆ ಪೂರಕವಾಗುವಂತಹ ಮಳೆ ಆಗಿದ್ದರೂ ಬಿತ್ತನೆಗೆ ಸೋನೆ ಮಳೆ ಅಡ್ಡಿಯಾಗಿದೆ. ಮಳೆ ಬೀಳುವುದು ನಿಂತರೆ ಬಿತ್ತನೆಯನ್ನು ನಿರಾತಂಕವಾಗಿ ಮಾಡಬಹುದು. ಆದರೆ ಹೊಲವನ್ನು ಸ್ವಚ್ಛಗೊಳಿಸುವುದು ಸವಾಲಾಗುತ್ತದೆ. ರಮೇಶ್‌ ರೈತ ತಮ್ಮಡಿಹಳ್ಳಿ ಗೊಲ್ಲರಹಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT