ತುಮಕೂರು: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಹೋದರರು ನಡೆಸಿದ ಷಡ್ಯಂತರದಲ್ಲಿ ಶಾಸಕ ಡಾ.ಜಿ. ಪರಮೇಶ್ವರ ಭಾಗಿಯಾಗುವ ಮೂಲಕ ನನ್ನನ್ನು ರಾಜಕೀಯವಾಗಿ ಮುಗಿಸುವ ಪ್ರಯತ್ನ ನಡೆಸಿದರು’ ಎಂದು ಬಿಜೆಪಿ ಸೇರಿರುವ ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಆರೋಪಿಸಿದರು.
‘ನನ್ನನ್ನು ರಾಜಕೀಯವಾಗಿ ಮುಗಿಸುತ್ತಿದ್ದಾರೆ ಎಂಬುದನ್ನು ನೋಡಿಕೊಂಡು ಎಷ್ಟು ದಿನ ಸುಮ್ಮನಿರಲಿ’ ಎಂದು ಬಿಜೆಪಿ ಮುಖಂಡ ಬಿ. ಸುರೇಶ್‌ಗೌಡ ಜತೆಗೆ ಬುಧವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.
‘ಒಕ್ಕಲಿಗ ಸಮುದಾಯದ ನಾಯಕರೊಬ್ಬರು ರಾಜಕೀಯದಲ್ಲಿ ಪ್ರಬಲವಾಗಿ ಬೆಳೆಯಬಾರದು. ನಾನು ಮುಂದೆ ಬರಬಾರದು ಎಂಬ ಒಂದೇ ಕಾರಣಕ್ಕೆ ಅವಕಾಶ ತಪ್ಪಿಸಿದರು. ಲೋಕಸಭೆ ಟಿಕೆಟ್ ನೀಡದೆ ವಂಚಿಸಿದ ಸಮಯದಲ್ಲಿ ರಾಜ್ಯಸಭೆ ಸದಸ್ಯರನ್ನಾಗಿ ಮಾಡುವ ಭರವಸೆ ನೀಡಿದ್ದರು. ಕೊನೆಗೆ ಅದನ್ನೂ ಮಾಡಲಿಲ್ಲ. ವಿಧಾನ ಪರಿಷತ್ ಸದಸ್ಯರಾಗುವ ಅವಕಾಶವನ್ನೂ ನೀಡಲಿಲ್ಲ’ ಎಂದು ಹೇಳಿದರು.
ಪಕ್ಷಕ್ಕಾಗಿ ದುಡಿದವರಿಗೆ ಮೇವು ಹಾಕಲಿಲ್ಲ. ಯಾವ ಅವಕಾಶವನ್ನೂ ಕೊಡದೆ ರಾಜಕೀಯವಾಗಿ ಕೊಲ್ಲುವ ಪ್ರಯತ್ನ ನಡೆಯಿತು. ನಾನೇನು ಸನ್ಯಾಸಿಯಲ್ಲ. ನನಗೂ ಅಧಿಕಾರ ಬೇಕು. ಅವಕಾಶ, ಅಧಿಕಾರ ಸಿಗದಿದ್ದರೆ ಪಕ್ಷಕ್ಕಾಗಿ ಏಕೆ ಕೆಲಸ ಮಾಡಬೇಕು. ಅಂತಹ ಕಡೆ ನಾನೇಕೆ ಇರಬೇಕು? ಪಕ್ಷ ಬಿಡುತ್ತೇನೆ ಎಂದು ಹೇಳಿದಾಗ ರಾಹುಲ್ ಗಾಂಧಿ ಸೇರಿದಂತೆ ಇತರೆ ಯಾವುದೇ ನಾಯಕರೂ ಪಕ್ಷದಲ್ಲೇ ಉಳಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ಮುಂದಿನ ದಿನಗಳಲ್ಲಿ ಅವಕಾಶ ಮಾಡಿಕೊಡುವ ಭರವಸೆ ಕೊಟ್ಟಾದರೂ ಉಳಿಸಿಕೊಳ್ಳಬಹುದಿತ್ತು. ಏಕೆ ಪಕ್ಷ ಬಿಡುತ್ತಿದ್ದೀರಿ ಎಂದು ಯಾರೂ ಕೇಳಲಿಲ್ಲ ಎಂದು ನೋವು ತೋಡಿಕೊಂಡರು.
‘ಹಿಂದೆ ಜೆಡಿಎಸ್‌ನಲ್ಲಿ ಇದ್ದಾಗಲೂ ಇದೇ ಪರಿಸ್ಥಿತಿ. ಕಾಂಗ್ರೆಸ್‌ನಲ್ಲೂ ಅದೇ ಸ್ಥಿತಿಯಾದರೆ ಏನು ಮಾಡಬೇಕು ಎಂದು ಪ್ರಶ್ನಿಸಿದರು. ಕುಣಿಗಲ್ ಕ್ಷೇತ್ರದಿಂದ ಸ್ಪರ್ಧಿಸುವ ಆಸಕ್ತಿಯಿಂದಲೇ ಬಿಜೆಪಿ ಸೇರಿದ್ದೇನೆ. ಪಕ್ಷದ ಹೈಕಮಾಂಡ್ ಮುಂದಿನ ನಿರ್ಧಾರ ಕೈಗೊಳ್ಳಲಿದೆ’ ಎಂದು ಹೇಳಿದರು.
**
ಜನಾದೇಶವಲ್ಲ: ಸುರೇಶ್‌ಗೌಡ
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಜನಾದೇಶದಿಂದ ಜೆಡಿಎಸ್ ಶಾಸಕ ಡಿ.ಸಿ. ಗೌರಿಶಂಕರ್ ಆಯ್ಕೆ ಆಗಿಲ್ಲ ಎಂದು ಕ್ಷೇತ್ರದ ಮಾಜಿ ಶಾಸಕ ಬಿಜೆಪಿಯ ಬಿ. ಸುರೇಶ್‌ಗೌಡ ಆರೋಪಿಸಿದರು.
ಕ್ಷೇತ್ರದಲ್ಲಿ ಶಾಲಾ ಮಕ್ಕಳು ಹಾಗೂ ಜನರಿಗೆ ಸುಮಾರು 16,500 ನಕಲಿ ಬಾಂಡ್‌ಗಳನ್ನು ವಿತರಿಸಿ, ತಮ್ಮ ಕಾಲೇಜಿನಲ್ಲಿ ಎಂಜಿನಿಯರಿಂಗ್, ಡಿಪ್ಲೊಮಾಗೆ ಉಚಿತವಾಗಿ ಪ್ರವೇಶ ನೀಡುವುದಾಗಿ ಭರವಸೆ ನೀಡಿ ಮತ ಪಡೆದರು. ಕೊನೆಗೆ ಒಬ್ಬರಿಗೂ ಕಾಲೇಜಿನಲ್ಲಿ ಸೀಟು ಕೊಡಲಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ದೂರಿದರು.
ಕಾಂಗ್ರೆಸ್, ಜೆಡಿಎಸ್‌ನ ಹಲವು ನಾಯಕರು ಕ್ಷೇತ್ರದಲ್ಲಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಪಕ್ಷಕ್ಕೆ ಸಾಕಷ್ಟು ಶಕ್ತಿ ಬಂದಿದೆ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.