ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮನ್ಸ್‌ಗೆ ಜಗ್ಗದಿದ್ದರೆ ಬರುತ್ತೆ ವಾರಂಟ್‌

ಮಾನವ ಹಕ್ಕುಗಳ ಆಯೋಗದ ಸದಸ್ಯ ರೂಪಕ್‌ಕುಮಾರ್‌ ದತ್ತ ಎಚ್ಚರಿಕೆ
Last Updated 2 ಅಕ್ಟೋಬರ್ 2019, 5:33 IST
ಅಕ್ಷರ ಗಾತ್ರ

ತುಮಕೂರು: ಆಯೋಗದಲ್ಲಿ ದಾಖಲಾಗುವ ದೂರುಗಳನ್ನು ಮೂರು ತಿಂಗಳ ಒಳಗೆ ಇತ್ಯರ್ಥಪಡಿಸಿ ನೋಂದವರಿಗೆ ನ್ಯಾಯ ದೊರಕಿಸಲು ಕ್ರಮವಹಿಸಿ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ರೂಪಕ್‌ಕುಮಾರ್‌ ದತ್ತ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ‘ಆಯೋಗದಲ್ಲಿನ ಬಾಕಿ ಪ್ರಕರಣಗಳ ಪರಿಶೀಲನಾ ಸಭೆ’ಯಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೆಲವೊಂದು ಪ್ರಕರಣಗಳಲ್ಲಿ ದೂರು ದಾಖಲಾಗಿ ನಾಲ್ಕೈದು ವರ್ಷ ಕಳೆದರೂ ಇತ್ಯರ್ಥ ಆಗುತ್ತಿಲ್ಲ. ಆಯೋಗ ನೀಡುವ ಸಮನ್ಸ್‌ಗಳಿಗೂ ಅಧಿಕಾರಿಗಳು ಪ್ರತಿಕ್ರಿಯೆ ನೀಡುವುದಿಲ್ಲ. ಇದು ಉತ್ತಮ ನಡೆ ಅಲ್ಲ. ಈ ಪದ್ಧತಿ ಹೀಗೆಯೇ ಮುಂದುವರೆದರೆ ವಾರಂಟ್‌ ನೀಡಬೇಕಾಗುತ್ತದೆ. ನೀವು ಕೇಂದ್ರ ಕಚೇರಿಗೆ ಬಂದು ಉತ್ತರಿಸಬೇಕಾಗುತ್ತದೆ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.

ಬಹುತೇಕ ಇಲಾಖೆಗಳ ಮುಖ್ಯಸ್ಥರು ಪ್ರಕರಣದ ವರದಿಯನ್ನು ಗಮನಿಸುತ್ತಿಲ್ಲ. ವರದಿಯನ್ನು ಕೆಳಹಂತದ ಸಿಬ್ಬಂದಿಯಿಂದ ತಯಾರಿಸಿ, ಆಯೋಗಕ್ಕೆ ರವಾನಿಸುತ್ತಿದ್ದಾರೆ. ಅದರಲ್ಲೂ ಕೆಲವೊಂದು ಹಿಂಬರಗಳು ಕೇವಲ ಎರಡೇ ಸಾಲಿನಿಂದ ಕೂಡಿರುತ್ತವೆ. ಮಾಹಿತಿ ಅಪೂರ್ಣವಾಗಿ ಇರುತ್ತದೆ ಎಂದು ಬೇಸರಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಿಂದ ಬರುವ ವರದಿಗಳನ್ನು ಎಸ್ಪಿ ಗಮನಿಸುವುದಿಲ್ಲ ಎನಿಸುತ್ತದೆ. ವರದಿಯಲ್ಲಿ ಎಸ್ಪಿ ಪರವಾಗಿ ಕಚೇರಿಯ ಆಡಳಿತ ಅಧಿಕಾರಿಯ ಸಹಿ ಇರುತ್ತದೆ. ಪೊಲೀಸ್‌ ಅಧಿಕಾರಿಗಳ ಮೇಲಿನ ಆರೋಪಗಳಲ್ಲಿಯೂ, ಆರೋಪಿಯೇ ವರದಿಗಳನ್ನು ತಯಾರಿಸಿದ ಉದಾಹರಣೆಗಳಿವೆ. ಹೀಗಾದರೆ ಹೇಗೆ ಎಂದು ಪ್ರಶ್ನಿಸಿದರು. ಈ ವೇಳೆ ಎಸ್ಪಿ ಕೆ.ವಂಶಿಕೃಷ್ಣ ಅವರು ಸಭೆಯಲ್ಲಿ ಇರಲಿಲ್ಲ.

ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ 3 ವಾರಗಳ ಒಳಗೆ ವರದಿ ಸಲ್ಲಿಸಿ, 3 ತಿಂಗಳ ಒಳಗೆ ದೂರುಗಳನ್ನು ಇತ್ಯರ್ಥ ಪಡಿಸಿ. ಇದರಿಂದ ಆಡಳಿತ ಸುಗಮವಾಗುತ್ತದೆ. ಜನರಿಗೂ ಅನುಕೂಲ ಆಗುತ್ತದೆ ಎಂದು ಕಿವಿಮಾತು ಹೇಳಿದರು.

20 ವರ್ಷವಾದರೂ ಇತ್ಯರ್ಥವಾಗದ ದೂರು

ನಿವೃತ್ತ ಶಿರಸ್ತೇದಾರ ಡಿ.ತಿಮ್ಮಯ್ಯ ಎಂಬುವವರ ಪಿಂಚಣಿ ಮಂಜೂರಾಗಿಲ್ಲ ಎಂಬ ದೂರು 20 ವರ್ಷಗಳಿಂದ ಇತ್ಯರ್ಥವಾಗಿಲ್ಲ. ಯಾಕೆ ತಡವಾಗಿದೆ ಎಂದು ರೂಪಕ್‌ಕುಮಾರ್‌ ದತ್ತ ಪ್ರಶ್ನಿಸಿದರು.

ಇದು ತುಂಬಾ ಹಳೆಯ ಪ್ರಕರಣ ಆಗಿದ್ದರಿಂದ, ಅದರ ಕಡತ ಸಿಕ್ಕಿಲ್ಲದಿರಬಹುದು. ಕಚೇರಿಯನ್ನು ನವೀಕರಿಸುತ್ತಿದ್ದೇವೆ. ಆ ಕಡತವನ್ನು ಹುಡುಕಿಸಿ, ಸಮಸ್ಯೆ ಪರಿಹರಿಸುತ್ತೇನೆ ಎಂದು ಪಕ್ಕದಲ್ಲಿದ್ದ ಜಿಲ್ಲಾಧಿಕಾರಿ ಕೆ.ರಾಕೇಶ್‌ಕುಮಾರ್ ಪ್ರತಿಕ್ರಿಯಿಸಿದರು.

‘ಮತ್ತೊಮ್ಮೆ ವರದಿ ಕಳುಹಿಸಿ’

ರೂಪಕ್‌ಕುಮಾರ್‌ ದತ್ತ ಅವರು ತಮ್ಮೊಂದಿಗೆ ಕಡತಗಳ ಬಂಡಲ್‌ ಅನ್ನೆ ಸಭೆಗೆ ತಂದಿದ್ದರು. ತಮ್ಮ ವಿಚಾರಣಪೀಠದಡಿಯ ಒಂದೊಂದೆ ದೂರುಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಚಿಕ್ಕನಾಯಕನಹಳ್ಳಿಯ ಕುಡಿಯುವ ನೀರಿನ ಸಮಸ್ಯೆ, ಶೆಟ್ಟಿಹಳ್ಳಿಯ ಅಂಗನವಾಡಿ ಕಟ್ಟಡದ ಶಿಥಿಲಾವಸ್ಥೆ, ಮಾಯಸಂದ್ರ ಹೋಬಳಿಯಲ್ಲಿ ಅನಧಿಕೃತವಾಗಿ ಮರಗಳನ್ನು ಕಡಿದ ಪ್ರಕರಣ, ಯಲ್ಲೇನಹಳ್ಳಿಯ ಗೋಮಾಳ ಒತ್ತುವರಿ, ಕುಣಿಗಲ್‌ನಲ್ಲಿ ನಾಯಿ ದಾಳಿಗೆ ಬಾಲಕಿ ಬಲಿಯಾದ ಪ್ರಕರಣಗಳ ಕುರಿತು ಮಾಹಿತಿ ಪಡೆದುಕೊಂಡರು.

ಬಹುತೇಕ ಪ್ರಕರಣಗಳಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿಗೆ ವರದಿ ಸಲ್ಲಿಸಲಾಗಿದೆ ಎಂಬ ಉತ್ತರಗಳು ತಾಲ್ಲೂಕು ಮಟ್ಟದ ಅಧಿಕಾರಿಗಳಿಂದ ಬಂದವು. ಆಗ, ಜಿಲ್ಲಾಧಿಕಾರಿ ಕೆ.ರಾಕೇಶ್‌ಕುಮಾರ್‌, ‘ಪ್ರಕರಣದ ಸಂಖ್ಯೆಯನ್ನು ಬರೆದುಕೊಂಡು, ವರದಿಯ ಪ್ರತಿಯನ್ನು ಮತ್ತೊಮ್ಮೆ ನಮಗೂ, ಆಯೋಗಕ್ಕೂ ಕಳುಹಿಸಿ’ ಎಂದು ಸೂಚಿಸಿದರು.

ಸಮಸ್ಯೆಗೆ ಸ್ಪಂದಿಸಿ

ಆಯೋಗ ಆಡಳಿತ ಮಾಡಲ್ಲ. ಆಡಳಿತದಲ್ಲಿ ಹೆಚ್ಚು–ಕಡಿಮೆ ಆದಾಗ ಜನ ಆಯೋಗಕ್ಕೆ ಬರುತ್ತಾರೆ. ಅವರ ಕಷ್ಟಗಳಿಗೆ ತಕ್ಷಣ ಸ್ಪಂದಿಸಿದರೆ, ಆಡಳಿತ ಸುಗಮ ಆಗುತ್ತದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ರೂಪಕ್‌ಕುಮಾರ್ ದತ್ತ ಹೇಳಿದರು.

ಅಂಕಿ–ಅಂಶ

182 –ಆಯೋಗದಿಂದ ಅಂತಿಮ ಆದೇಶಕ್ಕಾಗಿ ಜಿಲ್ಲಾಡಳಿತ ಸಲ್ಲಿಸಬೇಕಾದ ಅನುಸರಣಾ ವರದಿಗಳು

131 –ಅನುಸರಣಾ ವರದಿ ಸಲ್ಲಿಸಿರುವ ಪ್ರಕರಣಗಳ ಸಂಖ್ಯೆ

51 –ಅನುಸರಣಾ ವರದಿ ಸಿದ್ಧವಾಗಬೇಕಾದ ಪ್ರಕರಣಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT