ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷೇಧಿತ ಪ್ಲಾಸ್ಟಿಕ್ ನಿಯಂತ್ರಣಕ್ಕೆ ಹೆಣಗಾಟ

ಸ್ಮಾರ್ಟ್ ಸಿಟಿಯಲ್ಲಿ ಗುಪ್ತಗಾಮಿನಿಯಾದ ನಿಷೇಧಿತ ಪ್ಲಾಸ್ಟಿಕ್ ಬಳಕೆ, ಜನಜಾಗೃತಿಗೆ ಜಾಗೃತರಾಗದ ಜನ, ದಂಡಕ್ಕೆ ಮಣಿಯದ ಮಾರಾಟಗಾರರು
Last Updated 16 ಜೂನ್ 2019, 19:45 IST
ಅಕ್ಷರ ಗಾತ್ರ

ತುಮಕೂರು: ನಾಲ್ಕಾರು ದಿನಗಳ ಹಿಂದೆಯಷ್ಟೇ ‘ವಿಶ್ವಪರಿಸರ ದಿನ’ವನ್ನು ನಗರದೆಲ್ಲೆಡೆ ಆಚರಣೆ ಮಾಡಲಾಯಿತು. ಈ ದಿನದಂದು ಸಾರ್ವಜನಿಕರು, ಸಂಘ ಸಂಸ್ಥೆಯವರು ‘ಗಿಡ’ಗಳನ್ನು ನೆಟ್ಟು ಪರಿಸರ ಕಾಳಜಿ ಮೆರೆದರು. ಆದರೆ, ವಿಶ್ವಪರಿಸರ ದಿನವನ್ನೇ ಅಣಕಿಸುವ ರೀತಿಯಲ್ಲಿ ನಗರದಲ್ಲಿ ‘ಪ್ಲಾಸ್ಟಿಕ್‌ ಮಹಾಮಾರಿ’ ಗಹಗಹಿಸಿ ನಕ್ಕಿತು. ಗಿಡ ನೆಟ್ಟು ಪರಿಸರ ಕಾಳಜಿ ತೋರಿದಷ್ಟು ನಿಷೇಧಿತ ಪ್ಲಾಸ್ಟಿಕ್ ನಿಯಂತ್ರಣಕ್ಕೆ ಜನರು ಗಮನ ಹರಿಸಲೇ ಇಲ್ಲ.

ಪ್ರತಿ ಮನೆ, ಅಂಗಡಿ, ಮುಂಗಟ್ಟು, ಕಚೇರಿ ಎಲ್ಲ ಕಡೆಗೂ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮುಂದುವರಿದಿದೆ. ಪರಿಸರ ದಿನಾಚರಣೆ ದಿನವೂ ಅದು ಸಾಮಾನ್ಯ ದಿನಗಳಂತೆಯೇ ನಡೆಯಿತು. ಪ್ಲಾಸ್ಟಿಕ್ ಬಳಕೆಯೇ ಅಪಾಯಕಾರಿ. ಅದರಲ್ಲೂ ನಿಷೇಧಿತ ಪ್ಲಾಸ್ಟಿಕ್ ಬಳಕೆ ಜೀವ ಸಂಕುಲಕ್ಕೆ ಕಂಟಕ ಎಂದು ಪರಿಸರವಾದಿಗಳು, ಪರಿಸರ ಪ್ರೇಮಿಗಳು, ಮಹಾನಗರ ಪಾಲಿಕೆ, ಆರೋಗ್ಯಾಧಿಕಾರಿಗಳು ಹೇಳುತ್ತಲೇ ಇದ್ದಾರೆ.

ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಸ್ಮಾರ್ಟ್ ಸಿಟಿ ಆಗುತ್ತಿರುವ ತುಮಕೂರಿನಲ್ಲಿ ಪ್ಲಾಸ್ಟಿಕ್ ಪೆಡಂಭೂತವನ್ನು ಹೇಗೆ ನಿಯಂತ್ರಿಸಿ ಓಡಿಸಬೇಕು ಎಂಬುದರ ಕುರಿತು ಪ್ರಯತ್ನ ನಡೆದರೂ ನಿರೀಕ್ಷಿತ ನಿಷೇಧಿತ ಪ್ಲಾಸ್ಟಿಕ್ ನಿಯಂತ್ರಣ ಸಾಧ್ಯವಾಗಿಲ್ಲ.

ನಗರದ ಕೆರೆ, ಕುಂಟೆ, ರಾಜ ಕಾಲುವೆ, ಚರಂಡಿಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಸೇರಿದಂತೆ ಪ್ಲಾಸ್ಟಿಕ್‌ ವಸ್ತುಗಳೇ ಗೋಚರಿಸುತ್ತಿವೆ. ಮಳೆ ಬಂದಾಗ ಒಳಚರಂಡಿ ಬಂದ್ ಮಾಡುವುದೇ ಪ್ಲಾಸ್ಟಿಕ್‌! ಚರಂಡಿಯಲ್ಲಿ ಹರಿಯಬೇಕಾದ ನೀರು ರಸ್ತಗೆ ನುಗ್ಗಿ ಅನಾಹುತಕ್ಕೆ ಕಾರಣವಾಗುತ್ತದೆ. ನಸುಕಿನ ಜಾವವೇ ಬಿಸಾಕ್ತಾರೆ.

ಇಡೀ ದಿನ ಮನೆ, ಅಂಗಡಿ, ಕಚೇರಿ, ಹೊಟೇಲ್‌ಗಳನ್ನು ಯಾವ್ಯಾವುದೋ ರೀತಿ ಸೇರಿಕೊಳ್ಳುವ ನಿಷೇಧಿತ ಪ್ಲಾಸ್ಟಿಕ್ ಬ್ಯಾಗ್, ವಸ್ತುಗಳು ಬೆಳಗಾಗುತ್ತಿದ್ದಂತೆಯೇ ಮೂಟೆಗಟ್ಟಲೆ ಹೊರ ಬೀಳುತ್ತವೆ. ಕೆಲವರು ನಸುಕಿನ ಜಾವವೇ ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗುಗಳನ್ನು ಕದ್ದು ಮುಚ್ಚಿ ಬಂದು ರಸ್ತೆಗೆ, ರಸ್ತೆಯ ಪಕ್ಕ, ಪ್ರಮುಖ ವೃತ್ತಗಳಲ್ಲಿ, ಸಂದಿಗೊಂದಿಗಳಲ್ಲಿ ಎಸೆದು ಹೋಗುತ್ತಾರೆ. ಮತ್ತೊಂದಿಷ್ಟು ಜನರು ರಸ್ತೆಯ ಪಕ್ಕವೇ ಎಸೆದು ಅದಕ್ಕೆ ಬೆಂಕಿ ಇಡುತ್ತಾರೆ. ಅಕ್ಕಪಕ್ಕದ ಮನೆಯವರು, ನಿವಾಸಿಗಳು ನೋಡುವಷ್ಟರಲ್ಲಿ ಕಣ್ಮರೆಯಾಗುತ್ತಾರೆ. ಕೆಲವರು ಇದನ್ನೇ ರೂಢಿ ಮಾಡಿಕೊಂಡಿದ್ದಾರೆ.

ಮಾರುಕಟ್ಟೆಲ್ಲೂ ಬೆಂಕಿ: ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳಾದ ಮಂಡಿಪೇಟೆ, ಎಂ.ಜಿ. ರಸ್ತೆ, ಎಸ್.ಎಸ್.ಪುರಂ ತರಕಾರಿ ಮಾರುಕಟ್ಟೆ ಪ್ರದೇಶಗಳಲ್ಲಿನ ವ್ಯಾಪಾರಸ್ಥರೇ ರಾತ್ರಿ ಅಂಗಡಿ ಮುಚ್ಚುವ ವೇಳೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೊರಗಡೆ ಬಿಸಾಕಿ ಬೆಂಕಿ ಕಡ್ಡಿ ಗೀರುತ್ತಾರೆ. ಕೆಲವರು ಅಂಗಡಿಯಾಚೆ ಬಿಸಾಕಿ ಹೋಗುತ್ತಾರೆ. ಅದಕ್ಕೆ ಯಾರ್‍ಯಾರೊ ಬೆಂಕಿ ಹಚ್ಚುತ್ತಾರೆ. ಇದರಲ್ಲಿ ಪ್ಲಾಸ್ಟಿಕ್ ವಸ್ತು, ಥರ್ಮಕೋಲ್, ಉಪಕರಣಗಳ ತ್ಯಾಜ್ಯವೂ ಸೇರಿಕೊಂಡು ಸುತ್ತಮುತ್ತಲಿನ ಪರಿಸರಕ್ಕೆ ಧಕ್ಕೆಯುಂಟು ಮಾಡುತ್ತದೆ. ಅಪಾಯಕಾರಿ ರಾಸಾಯನಿಕಗಳಿಂದ ಜನಾರೋಗ್ಯಕ್ಕೆ ಕಾರಣವಾಗುತ್ತಿದೆ.

ಮತ್ತೊಂದೆಡೆ ಬಿಡಾಡಿ ದನಕರುಗಳು ಈ ಪ್ಲಾಸ್ಟಿ್ಕ್‌ನ್ನು ತ್ಯಾಜ್ಯ ಆಹಾರದೊಂದಿಗೆ ಸೇವಿಸುತ್ತಿವೆ. ಮಾರುಕಟ್ಟೆ ಪ್ರದೇಶದಲ್ಲಿ ಸಂಚರಿಸುವ ಇಂತಹ ದನಕರುಗಳಿಗೆ ಪ್ಲಾಸ್ಟಿಕ್ಕೇ ಆಹಾರ ಎಂಬಂತಾಗಿದೆ.

ಯಾವ್ಯಾವ ಪ್ಲಾಸ್ಟಿಕ್‌ಗಳು: ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ಭಿತ್ತಿಪತ್ರ, ಪ್ಲಾಸ್ಟಿಕ್ ತೋರಣ, ಪ್ಲಾಸ್ಟಿಕ್ ಫ್ಲೆಕ್ಸ್ ಬಾವುಟ, ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ಚಮಚ, ಕ್ಲಿಂಗ್ ಫಿಲ್ಮ್, ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆ, ಥರ್ಮಾಕೋಲ್, ಪ್ಲಾಸ್ಟಿಕ್ ಮೈಕ್ರೋಬೀಡ್‌ನಿಂದ ತಯಾರಾಗುವ ಇತರೆ ವಸ್ತುಗಳ ತಯಾರಿಕೆ, ಸರಬರಾಜು, ಸಂಗ್ರಹಣೆ, ಮಾರಾಟ, ವಿತರಣೆ ಮತ್ತು ಬಳಕೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದರೂ ಸಹ ಪ್ಲಾಸ್ಟಿಕ್ ಬಳಕೆ ವ್ಯಾಪಕವಾಗಿ ನಡೆಯುತ್ತಿದೆ.

ನಿಷೇಧಿತ ಪ್ಲಾಸ್ಟಿಕ್ ತಯಾರಿಕೆ, ಸರಬರಾಜು, ಸಂಗ್ರಹಣೆ, ಮಾರಾಟ, ವಿತರಣೆ ಮತ್ತು ಬಳಕೆ ಮಾಡುವ ಸಾರ್ವಜನಿಕರಿಗೆ ಮತ್ತು ಉದ್ದಿಮೆದಾರರಿಗೆ ಮಹಾನಗರ ಪಾಲಿಕೆ ದಂಡ ವಿಧಿಸುತ್ತಿದೆ. ಆದರೆ ಇದ್ಯಾವುದಕ್ಕೂ ಮಾರಾಟಗಾರರು, ಬಳಕೆದಾರರು ಜಗ್ಗುತ್ತಿಲ್ಲ. ಬಳಕೆದಾರರು ಪ್ಲಾಸ್ಟಿಕ್ ಬ್ಯಾಗ್ ಕೊಡಿ ಎಂದು ಕೇಳಿದರೆ ಮಾರಾಟಗಾರರು ಮಾರಾಟ ಮಾಡುತ್ತಲೇ ಇದ್ದಾರೆ.

ಕೆಲ ಹೊಟೇಲ್, ಅಲ್ಪಸ್ವಲ್ಪ ಕಿರಾಣಿ ಅಂಗಡಿಗಳಲ್ಲಿ ಇದು ನಿಯಂತ್ರಣವಾಗಿದೆ. ಪ್ಲಾಸ್ಟಿಕ್ ಬ್ಯಾಗು ಕೇಳಿದವರಿಗೆ ಬಟ್ಟೆ ಬ್ಯಾಗ್ ತೆಗೆದುಕೊಳ್ಳಿ ಎಂದು ಹೇಳುತ್ತಿದ್ದಾರೆ. ₹ 5, ₹ 8, ₹ 15 ಹೀಗೆ ಅಳತೆಗೆ ತಕ್ಕಂತೆ ಬಟ್ಟೆ ಬ್ಯಾಗುಗಳನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ.

ಈ ಹಣ ಕೊಟ್ಟು ಬಟ್ಟೆ ಬ್ಯಾಗು ಯಾಕೆ ಖರೀದಿಸಬೇಕು ಎಂಬುವವರು ನಿಷೇಧಿತ ಪ್ಲಾಸ್ಟಿಕ್‌ ಬ್ಯಾಗುಗಳನ್ನೇ ಹಿಡಿದುಕೊಂಡು ಅಂಗಡಿಗೆ ತೆರಳುತ್ತಿದ್ದಾರೆ. ನಿಷೇಧಿತ ಪ್ಲಾಸ್ಟಿಕ್ ಬ್ಯಾಗುಗಳನ್ನು ಸಂಗ್ರಹಿಸಿಟ್ಟುಕೊಂಡು ಬಳಕೆ ಮಾಡುತ್ತಿದ್ದಾರೆ. ಪ್ಲಾಸ್ಟಿಕ್ ಬ್ಯಾಗ್ ಬಿಸಾಕಬೇಕು ಎಂಬುದಕ್ಕಿಂತ ಅವುಗಳು ಇನ್ನು ಮುಂದೆ ಸಿಗುವುದಿಲ್ಲ. ಜತನವಾಗಿ ಬಳಸಬೇಕು ಎಂಬ ಧೋರಣೆಯಿಂದ ಸಂಗ್ರಹಿಸಿಟ್ಟುಕೊಂಡು ಬಳಕೆ ಮಾಡುತ್ತಿದ್ದಾರೆ. ಇದು ನಿಷೇಧಿತ ಪ್ಲಾಸ್ಟಿಕ್ ನಿಯಂತ್ರಣದ ವಿರುದ್ಧ ಸಮರ ಸಾರಿರುವ ಮಹಾನಗರ ಪಾಲಿಕೆ, ಪರಿಸರ ಪ್ರೇಮಿಗಳಿಗೆ ತಲೆ ನೋವಾಗಿದೆ.

ಫ್ಯಾಕ್ಟರಿ ಬಂದ್ ಮಾಡಿಸಲಿ ಅನ್ತಾರೆ: ನಿಷೇಧಿತ ಪ್ಲಾಸ್ಟಿಕ್ ಬಳಕೆಯಿಂದ ಪರಿಸರ, ಅರೋಗ್ಯದ ಮೇಲೆ ಆಗುವು ದುಷ್ಪರಿಣಾಮಗಳಾಗುತ್ತಿರುವುದನ್ನು ಸಾರ್ವಜನಿಕರು ಗಂಭೀರವಾಗಿ ಪರಿಗಣಿಸಿಲ್ಲ. ಪ್ರತಿನಿತ್ಯ ನಗರದಲ್ಲಿ 6.5 ಟನ್ ಪ್ಲಾಸ್ಟಿಕ್ ಉತ್ಪಾದನೆಯಾಗುತ್ತದೆ. ಸತತ ದಾಳಿ ಬಳಿಕ ಅದು 6 ಟನ್‌ಗೆ ತಗ್ಗಿದೆ ಎಂದು ಮಹಾನಗರ ಪಾಲಿಕೆ ಪರಿಸರ ಎಂಜಿನಿಯರೊಬ್ಬರು ಪ್ರತಿಕ್ರಿಯಿಸಿದರು.

ಪ್ಲಾಸ್ಟಿಕ್ ಬಳಸಬೇಡಿ, ಮಾರಾಟ ಮಾಡಬೇಡಿ ಎಂದು ಹೇಳಿದರೆ ನಮಗೇನು ಹೇಳುತ್ತೀರಿ. ನಿಷೇಧಿತ ಪ್ಲಾಸ್ಟಿಕ್ ತಯಾರಿಕಾ ಘಟಕಗಳನ್ನು ಬಂದ್ ಮಾಡಿಸಿ. ಅವುಗಳ ವಿರುದ್ಧ ಕ್ರಮಕೈಗೊಳ್ಳಿ ಎಂದು ಪ್ರತಿಕ್ರಿಯಿಸಿದ ಅನುಭವ ಹಲವಾರು ವೇಳೆ ದಾಳಿ ಸಂದರ್ಭದಲ್ಲಿ ಆಗಿದೆ. ಜನಜಾಗೃತಿಯಿಂದ ಮಾತ್ರವೇ ನಿಷೇಧಿತ ಪ್ಲಾಸ್ಟಿಕ್ ನಿರ್ಮೂಲನೆ ಸಾಧ್ಯ ಎಂದು ನುಡಿದರು.

––––––––––––

3.05 (2011ರ ಜನಗಣತಿ)

ತುಮಕೂರು ನಗರ ಜನಸಂಖ್ಯೆ

48.60 ಚ.ಕಿ.ಮೀ- ತುಮಕೂರು ನಗರ ವಿಸ್ತೀರ್ಣ

88,167 -ಮನೆಗಳ ಸಂಖ್ಯೆ

8,860- ವಾಣಿಜ್ಯ ಮಳಿಗೆಗಳ ಸಂಖ್ಯೆ

35 - ಮಹಾನಗರ ಪಾಲಿಕೆ ವಾರ್ಡ್‌ಗಳು

110 ಟನ್ - ಪ್ರತಿನಿತ್ಯ ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ

6 ಟನ್- ನಗರದಲ್ಲಿ ಪ್ರತಿ ದಿನ ಉತ್ಪತ್ತಿಯಾಗುವ ಪ್ಲಾಸ್ಟಿಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT