ಸೋಮವಾರ, ಮೇ 17, 2021
27 °C

ವಿವಾದಕ್ಕೆ ಸಿಲುಕಿದ ಶಾಲೆಗಳ ಮಾನ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಶಾಲೆಗಳಿಗೆ (1ರಿಂದ 8ನೇ ತರಗತಿ) ನವೀಕರಣ ಹಾಗೂ ಮಾನ್ಯತೆ ನೀಡುವ ವಿಚಾರ ಈಗ ವಿವಾದಕ್ಕೆ ಒಳಗಾಗಿದೆ.

ಕರ್ನಾಟಕ ಶಿಕ್ಷಣ ಕಾಯ್ದೆ 1983ರ ನಿಯಮ–9 ಪ್ರಕಾರ ಖಾಸಗಿ ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಶಾಲೆಗಳಿಗೆ ಮಾನ್ಯತೆ, ನವೀಕರಣ ನೀಡುವ ಜವಾಬ್ದಾರಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡಲಾಗಿದೆ. ಈವರೆಗೂ ಇದೇ ವ್ಯವಸ್ಥೆ ಮುಂದುವರೆದುಕೊಂಡು ಬಂದಿದೆ. ಆದರೆ ಈಗ ಕೆಲವು ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕರು (ಆಡಳಿತ) ಇದು ತಮ್ಮ ವ್ಯಾಪ್ತಿಗೆ ಬರುತ್ತದೆ ಎಂದು ವಾದಿಸುತ್ತಿರುವುದು ಸಮಸ್ಯೆಗಳನ್ನು ತಂದೊಡ್ಡಿದೆ.

ಉಚಿತ ಹಾಗೂ ಕಡ್ಡಾಯ ಶಿಕ್ಷಣ ನಿಯಮ (ಆರ್‌ಟಿಇ)– 2012 ನಿಯಮ 11ರ ಅನ್ವಯ ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಶಾಲೆಗಳ ಮಾನ್ಯತೆ, ನವೀಕರಣವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕರು ಮಾಡಬೇಕಿದೆ ಎಂದು ಹೇಳಲಾಗುತ್ತಿದೆ. ಈಗ ಹೊಸದಾಗಿ ಈ ವಿಚಾರ ಮುನ್ನೆಲೆಗೆ ಬಂದಿರುವುದು ವಿವಾದ ಸೃಷ್ಟಿಯಾಗಲು ಕಾರಣವಾಗಿದೆ.

ಒಂದೇ ಕೆಲಸಕ್ಕೆ ಎರಡು ನಿಯಮಗಳನ್ನು ಪಾಲನೆ ಮಾಡಬೇಕಿರುವುದು ಅಧಿಕಾರಿ ವರ್ಗದಲ್ಲಿ ಸಂಕಟ ತರಿಸಿದೆ. ಶಿಕ್ಷಣ ಕಾಯ್ದೆ 1983ರ ನಿಯಮ–9 ಪಾಲನೆ ಮಾಡುವುದೊ? ಅಥವಾ ಆರ್‌ಇಟಿ ಮೂಲಕ ನೀಡಿರುವ ನಿರ್ದೇಶನ ಪಾಲಿಸುವುದೊ? ಎಂಬ ಗೊಂದಲಕ್ಕೆ ಸಿಲುಕಿದ್ದಾರೆ.

ಅಧಿಕಾರ ವಿಕೇಂದ್ರೀಕರಣ ಮಾಡಿ ಆಡಳಿತ ಯಂತ್ರ ಸುಸೂತ್ರವಾಗಿ ನಡೆದುಕೊಂಡು ಹೋಗುವಂತೆ ಮಾಡುವ ಬದಲು ‘ಅಧಿಕಾರ ಕೇಂದ್ರೀಕರಣ’ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಹಿಂದಿನಂತೆ 1ರಿಂದ 8ನೇ ತರಗತಿಗಳಿಗೆ ಮಾನ್ಯತೆ– ನವೀಕರಣ ನೀಡುವ ಜವಾಬ್ದಾರಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡಬೇಕು. ಖಾಸಗಿ ಪ್ರೌಢಶಾಲೆಗಳ ನವೀಕರಣ, ಮಾನ್ಯತೆ ಹೊಣೆಯನ್ನು ಈಗಿರುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕರಿಗೆ ಮುಂದುವರೆಸಬೇಕು. ಒಂದೇ ಕೆಲಸಕ್ಕೆ ಎರಡು ಕಡೆ ಅಲೆದಾಟ ತಪ್ಪಿಸಬೇಕು ಎಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿ ಮುಖಂಡರು ಒತ್ತಾಯಿಸಿದ್ದಾರೆ.

ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸ್ಪಷ್ಟನೆ ನೀಡಬೇಕು. ಈಗ ಉಂಟಾಗಿರುವ ಗೊಂದಲ ಪರಿಹರಿಸಬೇಕು ಎಂದು ಆಗ್ರಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.