ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮನೆ ಬಾಡಿಗೆದಾರರನೇ ಕಳ್ಳ!

Published 27 ಜೂನ್ 2024, 4:25 IST
Last Updated 27 ಜೂನ್ 2024, 4:25 IST
ಅಕ್ಷರ ಗಾತ್ರ

ತುಮಕೂರು: ಮನೆ ಬಾಡಿಗೆ ನೀಡಿದ್ದ ಮಾಲೀಕನ ಮನೆಯಲ್ಲೇ ಕಳ್ಳತನ ಮಾಡಿದ ಆರೋಪಿಗಳನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಹರಿಶಿನಕುಂಟೆ ಬಿಎಂಟಿಸಿ ಡಿಪೊದಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿರುವ ನಗರದ ಅಮರಜ್ಯೋತಿನಗರ ಮುಖ್ಯ ರಸ್ತೆ ನಿವಾಸಿ ಪಿ.ಎಸ್.ಶ್ರೀನಾಥ್ (39), ನಗರದ ನಿರ್ವಾಣಿ ಲೇಔಟ್‌ನ ಛಾಯಾಗ್ರಾಹಕ ವಿ.ವರುಣ್ (27) ಬಂಧಿತ ಆರೋಪಿಗಳು. ಇಬ್ಬರು ಆರೋಪಿಗಳು ಸೇರಿಕೊಂಡು ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಮೂರು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

ಜಯನಗರ ಠಾಣೆಯ ಒಂದು ಪ್ರಕರಣದಲ್ಲಿ ₹36.92 ಲಕ್ಷ ಬೆಲೆ ಬಾಳುವ 615 ಗ್ರಾಂ ತೂಕದ ಚಿನ್ನದ ಒಡವೆಗಳು, ₹4.22 ಲಕ್ಷ ಬೆಲೆ ಬಾಳುವ 5.660 ಕೆ.ಜಿ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಮತ್ತೊಂದು ಪ್ರಕರಣದಲ್ಲಿ ₹3.60 ಲಕ್ಷ ಬೆಲೆ ಬಾಳುವ 60 ಗ್ರಾಂ ಚಿನ್ನದ ಮಾಂಗಲ್ಯ ಸರ ಹಾಗೂ ಪಲ್ಸರ್ ಬೈಕ್ ವಶಪಡಿಸಿಕೊಳ್ಳಲಾಗಿದೆ.

ಡಿವೈಎಸ್‌ಪಿ ಕೆ.ಆರ್.ಚಂದ್ರಶೇಖರ್ ನೇತೃತ್ವದಲ್ಲಿ ಸಿಪಿಐ ಜಿ.ಪುರುಷೋತ್ತಮ, ಪಿಎಸ್‌ಐ ಎಚ್.ಎನ್.ಮಹಾಲಕ್ಷ್ಮಮ್ಮ ಅವರ ತಂಡ ಆರೋಪಿಗಳನ್ನು ಬಂಧಿಸಿದೆ.

ಆಂಧ್ರದ ಕಳ್ಳ: ಆಂಧ್ರಪ್ರದೇಶದಿಂದ ಬಂದು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಹಿಂದೂಪುರದ ಜಿ.ಆರ್.ಚಿನ್ನಾ, ರಿಜ್ವಾನ್ ಬಾಷ ಎಂಬುವರನ್ನು ಬಂಧಿಸಿ ₹29.35 ಲಕ್ಷ ಮೌಲ್ಯದ ಚಿನ್ನಾಭರಣ, ಮೂರು ದ್ವಿಚಕ್ರ ವಾಹನ, 6 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ಈ ಇಬ್ಬರು ಆರೋಪಿಗಳ ಬಂಧನದಿಂದ ರಾಜ್ಯದ ಗಡಿ ಪ್ರದೇಶಕ್ಕೆ ಬಂದು ಮಧುಗಿರಿ, ಪಾವಗಡ ಭಾಗದಲ್ಲಿ ಕಳ್ಳತನ ಮಾಡಿದ 18 ಪ್ರಕರಣಗಳು ಪತ್ತೆಯಾಗಿವೆ. ಕಳೆದ ಕೆಲ ದಿನಗಳ ಹಿಂದೆ ಬಂಧಿಸಿ ಕರೆ ತರುತ್ತಿದ್ದ ಸಮಯದಲ್ಲಿ ರಿಜ್ವಾನ್ ಪಾಷಾ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಪೊಲೀಸರು ಕಾಲಿಗೆ ಗುಂಡು ಹೊಡೆದು ವಶಕ್ಕೆ ಪಡೆದಿದ್ದರು.

ಮಧುಗಿರಿ ಸಿಪಿಐ ಎಸ್.ರವಿ, ಪಿಎಸ್‌ಐ ಪಿ.ಎಂ.ಅಮ್ಮಣಗಿ, ಮುತ್ತುರಾಜು ರಮೇಶ್, ಪ್ರಕಾಶ್, ಗೋಪಾಲಕೃಷ್ಣ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT