ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೆಂತ್ಯ ಸೊಪ್ಪು ಕೆ.ಜಿ ₹200!

ಸೊಪ್ಪು, ತರಕಾರಿ ದುಬಾರಿ; ಬೇಳೆ, ಧಾನ್ಯ ಏರಿಕೆ
Published 26 ಮೇ 2024, 3:28 IST
Last Updated 26 ಮೇ 2024, 3:28 IST
ಅಕ್ಷರ ಗಾತ್ರ

ತುಮಕೂರು: ಸೊಪ್ಪಿನ ಬೆಲೆ ಗಗನಮುಖಿಯಾಗಿದ್ದು, ತರಕಾರಿ ಸಹ ಅದೇ ದಾರಿಯಲ್ಲಿ ಸಾಗಿದ್ದರೆ, ಬೇಳೆ, ಧಾನ್ಯವೂ ದುಬಾರಿಯಾಗಿದೆ. ಕೋಳಿ ಮಾಂಸದ ದರ ಏರುಗತಿಯಲ್ಲೇ ಸಾಗಿದ್ದರೆ, ಮೀನು ತುಸು ತಗ್ಗಿದೆ.

ತರಕಾರಿ ದುಬಾರಿ: ಕಳೆದ ಕೆಲವು ವಾರಗಳಿಂದ ದುಬಾರಿಯಾಗಿರುವ ತರಕಾರಿ ಈ ವಾರ ಮತ್ತಷ್ಟು ಏರಿಕೆ ಕಂಡಿದೆ. ಬೀನ್ಸ್ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಕೆ.ಜಿ ₹160–180ರಲ್ಲಿ ಮುಂದುವರಿದಿದೆ. ಹೂ ಕೋಸು ದರ ಸಾಕಷ್ಟು ಹೆಚ್ಚಳವಾಗಿದ್ದು, ₹50 (1ಕ್ಕೆ) ದಾಟಿದೆ. ಇತ್ತೀಚಿನ ದಿನಗಳಲ್ಲಿ ಈ ಪ್ರಮಾಣದಲ್ಲಿ ಏರಿಕೆಯಾಗಿರಲಿಲ್ಲ ಎಂದು ಹೇಳಲಾಗುತ್ತಿದೆ.

ಆಲೂಗೆಡ್ಡೆ, ಮೂಲಂಗಿ, ಬದನೆಕಾಯಿ, ತೊಂಡೆಕಾಯಿ ಧಾರಣೆ ಕೆ.ಜಿಗೆ ₹10 ಹೆಚ್ಚಳವಾಗಿದ್ದರೆ, ಎಲೆಕೋಸು, ತೊಂಡೆಕಾಯಿ, ಕ್ಯಾಪ್ಸಿಕಂ ಕೊಂಚ ತಗ್ಗಿದೆ. ಬೇಸಿಗೆಯಲ್ಲಿ ತುಟ್ಟಿಯಾಗಿದ್ದ ಸೌತೆಕಾಯಿ ಈಗ ಇಳಿಕೆಯತ್ತ ಮುಖ ಮಾಡಿದೆ. ಬೇಸಿಗೆಯಲ್ಲಿ ತರಕಾರಿ ಬೆಳೆ ಒಣಗಿರುವುದು, ಮಳೆಯಿಂದ ಮತ್ತಷ್ಟು ಹಾಳಾಗಿದ್ದು, ಮಾರುಕಟ್ಟೆಯಲ್ಲಿ ಆವಕ ಕಡಿಮೆಯಾಗಿರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

ಸೊಪ್ಪು ಮತ್ತಷ್ಟು ತುಟ್ಟಿ: ಕಳೆದ ಒಂದು ತಿಂಗಳಿಂದ ಏರುಗತಿಯಲ್ಲೇ ಸಾಗಿರುವ ಸೊಪ್ಪಿನ ಧಾರಣೆ, ಈ ವಾರ ಮತ್ತಷ್ಟು ದುಬಾರಿಯಾಗಿದೆ. ಮೆಂತ್ಯೆ ಸೊಪ್ಪು ಒಮ್ಮೆಲೆ ದುಪ್ಪಟ್ಟಾಗಿದ್ದು, ಕೆ.ಜಿ ₹200 ಗಡಿಗೆ ತಲುಪಿದ್ದರೆ, ಕೊತ್ತಂಬರಿ, ಪಾಲಕ್ ಸೊಪ್ಪು ಸಹ ಅದೇ ದಾರಿಯಲ್ಲಿ ಸಾಗಿವೆ. ಕೊತ್ತಂಬರಿ ಸೊಪ್ಪು ಕೆ.ಜಿ ₹120–140, ಸಬ್ಬಕ್ಕಿ ಕೆ.ಜಿ ₹100–120, ಮೆಂತ್ಯ ಸೊಪ್ಪು ಕೆ.ಜಿ ₹180–200, ಪಾಲಕ್ ಸೊಪ್ಪು (ಕಟ್ಟು) ₹80–100ಕ್ಕೆ ಏರಿಕೆಯಾಗಿದೆ.

ಏಲಕ್ಕಿ ಬಾಳೆ ಏರಿಕೆ: ಕೆಲವು ವಾರಗಳಿಂದ ಇಳಿಕೆಯತ್ತ ಸಾಗಿದ್ದ ಏಲಕ್ಕಿ ಬಾಳೆ ಹಣ್ಣು ಈಗ ಏರಿಕೆಯತ್ತ ಹೆಜ್ಜೆ ಹಾಕಿದೆ. ಸೇಬು, ಕಲ್ಲಂಗಡಿ ಹಣ್ಣು ಕೊಂಚ ಇಳಿಕೆ ದಾಖಲಿಸಿದೆ. ತೋತಾಪುರಿ ಕೆ.ಜಿ ₹100, ಬೆನಿಷಾ ಕೆ.ಜಿ ₹80ಕ್ಕೆ ಮಾರಾಟವಾಗುತ್ತಿದೆ.

ಅಡುಗೆ ಎಣ್ಣೆ: ಅಡುಗೆ ಎಣ್ಣೆ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಗೋಲ್ಡ್‌ವಿನ್ನರ್ ಕೆ.ಜಿ ₹109–112, ಪಾಮಾಯಿಲ್ ಕೆ.ಜಿ ₹88–90, ಕಡಲೆಕಾಯಿ ಎಣ್ಣೆ ಕೆ.ಜಿ ₹155–160ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಬೇಳೆ, ಧಾನ್ಯ ಹೆಚ್ಚಳ: ಕಳೆದ ಕೆಲವು ವಾರಗಳಿಂದ ತಟಸ್ಥ ಸ್ಥಿತಿಯಲ್ಲಿದ್ದ ಬೇಳೆ ಕಾಳು, ಧಾನ್ಯಗಳ ಧಾರಣೆ ಈಗ ಏರಿಕೆಯತ್ತ ಮುಖ ಮಾಡಿದೆ. ಬಹುತೇಕ ಬೇಳೆಗಳು ಕೆ.ಜಿಗೆ ₹5ರಿಂದ 10ರ ವರೆಗೆ ಹೆಚ್ಚಳ ದಾಖಲಿಸಿವೆ. ತೊಗರಿ ಬೇಳೆ, ಕಡಲೆ ಬೇಳೆ, ಹೆಸರು ಕಾಳು, ಕಡಲೆಕಾಳು, ಅವರೆಕಾಳು, ಹುರುಳಿಕಾಳು, ಹುರಿಗಡಲೆ ದರ ಏರಿಕೆಯಾಗಿದೆ.

ಮಸಾಲೆ ಪದಾರ್ಥ: ಬೇಳೆ ದಾರಿಯಲ್ಲೇ ಮಸಾಲೆ ಪದಾರ್ಥಗಳು ಸಾಗಿದ್ದು, ಅಲ್ಪ ಪ್ರಮಾಣದಲ್ಲಿ ಬೆಲೆ ಏರಿಕೆಯಾಗಿದೆ. ಜೀರಿಗೆ ಒಮ್ಮೆಲೆ ಕೆ.ಜಿಗೆ ₹50 ಹೆಚ್ಚಳವಾಗಿದ್ದರೆ, ಲವಂಗ, ಚಕ್ಕೆ, ಮೆಣಸಿನಕಾಯಿ ಇತರೆ ಪದಾರ್ಥಗಳು ಅಲ್ಪ ಪ್ರಮಾಣದಲ್ಲಿ ದುಬಾರಿಯಾಗಿವೆ.

ಕೋಳಿ ಮತ್ತೆ ಗಗನಮುಖಿ: ಕೋಳಿ ಮಾಂಸ ಈ ವಾರ ಮತ್ತಷ್ಟು ದುಬಾರಿಯಾಗಿದೆ. ಬ್ರಾಯ್ಲರ್ ಕೋಳಿ ಹೊರತುಪಡಿಸಿದರೆ ಇತರೆ ಕೋಳಿ ಮಾಂಸದಲ್ಲಿ ಕೆ.ಜಿಗೆ ₹20 ಹೆಚ್ಚಳವಾಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹170, ರೆಡಿ ಚಿಕನ್ ಕೆ.ಜಿ ₹280, ಸ್ಕಿನ್‌ಲೆಸ್ ಕೆ.ಜಿ ₹320, ಮೊಟ್ಟೆ ಕೋಳಿ (ಫಾರಂ) ಕೆ.ಜಿ ₹120ಕ್ಕೆ ಹೆಚ್ಚಳವಾಗಿದೆ.

ಬೇಸಿಗೆ ಬಿಸಿಲಿನ ತಾಪ ಹೆಚ್ಚಳದಿಂದ ಕೋಳಿ ಸಾವನ್ನಪ್ಪುತ್ತಿರುವುದು, ಉತ್ಪಾದನೆಯಲ್ಲಿ ಕುಸಿತ ಹಾಗೂ ಹಬ್ಬ, ಜಾತ್ರೆಯಲ್ಲಿ ಮಾಂಸ ಬಳಕೆ ಹೆಚ್ಚಾಗಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಮೀನು ಅಲ್ಪ ಇಳಿಕೆ: ಕಳೆದ ವಾರಕ್ಕೆ ಹೋಲಿಸಿದರೆ ಮೀನಿನ ದರ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ. ಬಂಗುಡೆ ಕೆ.ಜಿ ₹270, ಬೂತಾಯಿ ಕೆ.ಜಿ ₹280, ಬೊಳಿಂಜರ್ ಕೆ.ಜಿ ₹200, ಅಂಜಲ್ ಕೆ.ಜಿ ₹1,320, ಬಿಳಿಮಾಂಜಿ ಕೆ.ಜಿ ₹1,440, ಕಪ್ಪುಮಾಂಜಿ ಕೆ.ಜಿ ₹1,060, ಇಂಡಿಯನ್ ಸಾಲ್ಮನ್ ಕೆ.ಜಿ ₹960, ಸೀಗಡಿ ಕೆ.ಜಿ ₹540–650, ಏಡಿ ಕೆ.ಜಿ 540ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT