ಶನಿವಾರ, ಅಕ್ಟೋಬರ್ 23, 2021
20 °C
ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಪಾವಗಡ ತಾಲ್ಲೂಕಿಗೆ ಅನ್ಯಾಯ: ಸ್ವಾಮೀಜಿ ಆರೋಪ

ತುಮಕೂರು: ಸರ್ಕಾರದ ಮಲತಾಯಿ ಧೋರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಾವಗಡ: ಸರ್ಕಾರಗಳು ತಾಲ್ಲೂಕನ್ನು ಕಡೆಗಣಿಸಿರುವುದರಿಂದ ತಾಲ್ಲೂಕು ಹಿಂದುಳಿದಿದೆ ಎಂದು ನಿಡಗಲ್ ವಾಲ್ಮೀಕಿ ಆಶ್ರಮದ ಪೀಠಾಧ್ಯಕ್ಷ ವಾಲ್ಮೀಕಿ ಸಂಜಯ ಕುಮಾರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ವೆಂಕಟಾಪುರ ಗ್ರಾಮದಲ್ಲಿ ಗುರುವಾರ ವಿವಿಧ ಸಂಘ ಸಂಸ್ಥೆಗಳು ಭದ್ರಾ ಮೇಲ್ದಂಡೆ ಯೋಜನೆಯ ಅಸಮರ್ಪಕ ನೀರು ಹಂಚಿಕೆ ವಿರೋಧಿಸಿ ಹಮ್ಮಿಕೊಂಡಿದ್ದ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರಗಳು ಹಲವು ದಶಕಗಳಿಂದ ತಾಲ್ಲೂಕಿನ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿವೆ. ಎತ್ತಿನ ಹೊಳೆ ಯೋಜನೆಯಲ್ಲಿ ತಾಲ್ಲೂಕಿಗೆ ಅನ್ಯಾಯ ಎಸಗಿದ್ದು, ಭದ್ರಾ ಮೇಲ್ದಂಡೆ ಯೋಜನೆಯಲ್ಲೂ ಅನ್ಯಾಯವಾಗುತ್ತಿದೆ. ಕೂಡಲೇ ಇದನ್ನು ಸರ್ಕಾರ ಸರಿಪಡಿಸಬೇಕು. ಇಲ್ಲದಿದ್ದಲ್ಲಿ ಎಲ್ಲ ಸಂಘಟನೆಗಳು ಒಗ್ಗೂಡಿ ಹೋರಾಟ ನಡೆಸಲಾಗುವುದು ಎಂದರು.

ಮುಖಂಡ ನಾಗೇಂದ್ರಕುಮಾರ್, ಭದ್ರಾಮೇಲ್ದಂಡೆ ಯೋಜನೆಯಲ್ಲಿ ತಾಲ್ಲೂಕಿಗೆ ಕೇವಲ ಅರ್ಧ ಟಿಎಂಸಿ ನೀರು ಹಂಚಿಕೆ ಮಾಡಿರುವುದಾಗಿ ಸರ್ಕಾರ ಮಾಹಿತಿ ನೀಡಿದೆ. ನೆರೆಯ ಶಿರಾ, ಹಿರಿಯೂರು ತಾಲ್ಲೂಕುಗಳಿಗೆ ಹೆಚ್ಚಿನ ಪ್ರಮಾಣದ ನೀರು ಹಂಚಿಕೆ ಮಾಡಲಾಗಿದೆ. ಯಾವುದೇ ನದಿ ಮೂಲವಿಲ್ಲದ ತಾಲ್ಲೂಕಿಗೆ ತೀವ್ರ ಅನ್ಯಾಯ ಮಾಡಲಾಗುತ್ತಿದೆ ಎಂದರು.

ಮುಖಂಡ ವಿ.ಸಿ.ಚೆನ್ನಕೇಶವರೆಡ್ಡಿ, ಮಾನಂವೆಂಕಟ ಸ್ವಾಮಿ ಮಾತನಾಡಿದರು. ಮುಖಂಡರಾದ ಪೂಜಾರಪ್ಪ, ಮಾನಂ ಶಶಿಕಿರಣ್‌, ಎಸ್.ಹನುಮಂತರಾಯ, ಎ.ಅಂಜನೇಯಲು, ನರಸಿಂಹ ರೆಡ್ಡಿ, ರವಿಕುಮಾರ್, ಬಿಎಸ್‌ಪಿ ಮಂಜುನಾಥ್, ಕಿರಣ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.