ಶುಕ್ರವಾರ, ಮಾರ್ಚ್ 5, 2021
17 °C
ಮಧುಗಿರಿ ತಾಲ್ಲೂಕು ಚಿನಕವಜ್ರದಲ್ಲಿ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿಕೆ

ಬರನಿರ್ವಹಣೆಗೆ ಹಣದ ಕೊರತೆ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ರಾಜ್ಯದ ಬರನಿರ್ವಹಣೆಗೆ ಯಾವುದೇ ರೀತಿ ಹಣದ ಕೊರತೆಯಿಲ್ಲ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು ತಿಳಿಸಿದರು.

ಶುಕ್ರವಾರ ಮಧುಗಿರಿ ತಾಲೂಕು ಚಿನಕವಜ್ರ ಗ್ರಾಮದ ದೊಡ್ಡತಿಮ್ಮಯ್ಯ ಅವರ ಜಮೀನಿಗೆ ಭೇಟಿ ನೀಡಿದ ಸಮಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ,‘ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದುದರಿಂದ ಪ್ರಗತಿ ಪರಿಶೀಲನೆ ನಡೆಸಲು ಅವಕಾಶವಾಗಿರಲಿಲ್ಲ. ರಾಜ್ಯದ ಬರ ನಿರ್ವಹಣೆಗಾಗಿ ಚುನಾವಣೆಗೂ ಮುನ್ನ ಅಗತ್ಯ ಪೂರ್ವಸಿದ್ಧತಾ ಕ್ರಮಗಳನ್ನು ಕೈಗೊಂಡು ₹ 700 ಕೋಟಿ ಮೀಸಲಿಟ್ಟು ಆಯಾ ಜಿಲ್ಲಾಡಳಿತಕ್ಕೆ ಅನುದಾನ ಬಿಡುಗಡೆ ಮಾಡಲಾಗಿತ್ತು ಎಂದು ಹೇಳಿದರು.

ತುಮಕೂರು ಜಿಲ್ಲೆಯ ಬರ ನಿರ್ವಹಣೆಗಾಗಿ ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಖರ್ಚು ಮಾಡಿ ಇನ್ನೂ ₹ 12 ಕೋಟಿ ಖಾತೆಯಲ್ಲಿ ಉಳಿದಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಬರದಿಂದ ಗ್ರಾಮೀಣ ಪ್ರದೇಶದ ಜನರು ಗುಳೇ ಹೋಗದಂತೆ ಹಾಗೂ ಕುಡಿಯುವ ನೀರು, ಜಾನುವಾರುಗಳ ಮೇವಿಗೆ ತೊಂದರೆಯಾಗದಂತೆ ಅಗತ್ಯ ಕ್ರಮಕೈಗೊಳ್ಳಲು ಪ್ರತಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

‘ಕೇಂದ್ರ ಸರ್ಕಾರದ ಆದೇಶದಂತೆ ನೀರಿನ ಸಮಸ್ಯೆ ಇರುವ ಕಡೆ 3 ತಿಂಗಳಿಗಿಂತ ಹೆಚ್ಚಿಗೆ ಟ್ಯಾಂಕರ್ ನೀರು ಸರಬರಾಜು ಮಾಡಲು ಅವಕಾಶವಿಲ್ಲವಾದರೂ ಜನರ ನೀರಿನ ಬವಣೆಯನ್ನು ಮನಗಂಡು 3 ತಿಂಗಳ ಅವಧಿ ಮೀರಿದ ಮೇಲೆಯೂ ಅಗತ್ಯವಿರುವಷ್ಟು ದಿನ ಟ್ಯಾಂಕರ್ ಮೂಲಕ ನೀರನ್ನು ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.

‘ಈ ಹಿಂದೆ ಟ್ಯಾಂಕರ್ ನೀರು ಸರಬರಾಜಿಗೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯಬೇಕಾಗಿತ್ತು. ಆದರೆ ಈ ಕ್ರಮವನ್ನು ಸಡಿಲಿಸಿ ಅಧಿಕಾರ ವಿಕೇಂದ್ರೀಕರಣಗೊಳಿಸಿ ಆಯಾ ತಹಶೀಲ್ದಾರರಿಗೆ ಅಧಿಕಾರ ನೀಡಲಾಗಿದೆ. ರಾಜ್ಯದ ಪ್ರತಿ ತಾಲ್ಲೂಕಿನ ತಹಶೀಲ್ದಾರರ ಖಾತೆಯಲ್ಲಿ ಬರನಿರ್ವಹಣೆಗಗಿ ₹30 ರಿಂದ 40 ಲಕ್ಷ ಅನುದಾನ ಲಭ್ಯವಿದ್ದು, ಅಧಿಕಾರಿಗಳು ತುರ್ತು ಸಂದರ್ಭಗಳಲ್ಲಿ ಬಳಕೆ ಮಾಡಿಕೊಳ್ಳಬೇಕು’ ಎಂದು ಸೂಚಿಸಿದರು.

ಮೇವು ಬ್ಯಾಂಕಿಗೆ ಭೇಟಿ

ಕೊರಟಗೆರೆ ತಾಲ್ಲೂಕಿನ ಎಲೆರಾಂಪುರ ಗ್ರಾಮದ ಹತ್ತಿರ ಮೇವು ಬ್ಯಾಂಕಿಗೆ ಭೇಟಿ ನೀಡಿ ಸಚಿವರು ಪರಿಶೀಲನೆ ನಡೆಸಿದರು. ಪಶುವೈದ್ಯ ಇಲಾಖೆಯ ಉಪನಿರ್ದೇಶಕರಿಂದ ಮಾಹಿತಿ ಪಡೆದರು.

ಕಾರ್ಮಿಕರಿಗೆ ಆದ್ಯತೆ ನೀಡಬೇಕು. ರೈತರಿಗೆ ಎಷ್ಟು ದಿನ ಮೇವಿನ ಅಗತ್ಯವಿರುತ್ತದೆಯೋ ಅಷ್ಟು ದಿನವೂ ಮೇವು ಪೂರೈಕೆಯಾಗಬೇಕು. ಯಾವುದೇ ಕಾರಣಕ್ಕೂ ಮೇವು ಬ್ಯಾಂಕ್‌ಗಳನ್ನು ಸ್ಥಗಿತಗೊಳಿಸಬಾರದು. ರೈತರು ಆತಂಕಕ್ಕೊಳಗಾಗದೆ ತಮಗೆ ಬೇಕಾದಷ್ಟು ದಿನ ಮೇವು ಬ್ಯಾಂಕಿಗೆ ಬಂದು ಮೇವು ಖರೀದಿಸಬಹುದು ಎಂದು ಹೇಳಿದರು.

ಅಧಿಕಾರಿಗಳು ಯಾವುದೇ ರೀತಿಯಲ್ಲೂ ಜಾನುವಾರುಗಳಿಗೆ ಮೇವಿನ ತೊಂದರೆಯಾಗದಂತೆ ಎಚ್ಚರವಹಿಸಬೇಕು. ಮೇವು ಖಾಲಿಯಾಗದಂತೆ ಶೇಖರಣೆ ಮಾಡಬೇಕು. ಮೇವಿನ ತೂಕದಲ್ಲಿ ವ್ಯತ್ಯಾಸವಾಗದಂತೆ ವಿತರಿಸಬೇಕು. ರೈತರೂ ತೂಕದ ಯಂತ್ರ ಗಮನಿಸಬೇಕು ಎಂದು ಅಲ್ಲಿದ್ದ ರೈತರಿಗೆ ಸೂಚಿಸಿದರು.

ಬಳಿಕ ಎಲೆರಾಂಪುರ ಗ್ರಾಮದ ರೈತ ಪ್ರಸನ್ನಕುಮಾರ ಹಾಗೂ ಮಧುಗಿರಿ ತಾಲೂಕು ಕೆರೆಗಳಪಾಳ್ಯದ ವೀರಭದ್ರಪ್ಪ ಅವರ ಜಮೀನಿಗೆ ಭೇಟಿ ನೀಡಿ ಮೇವಿನ ಕಿಟ್ ಪಡೆದು ಬೆಳೆದ ಜೋಳದ ಬೆಳೆಯನ್ನು ವೀಕ್ಷಿಸಿದರು.

ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಪ್ರಕಾಶ್, ಮಧುಗಿರಿ ಶಾಸಕ ಎಂ.ವಿ.ವೀರಭದ್ರಯ್ಯ, ಕಂದಾಯ ಅಧಿಕಾರಿಗಳು, ಪಶು ಪಾಲನಾ ಇಲಾಖೆ ಅಧಿಕಾರಿಗಳು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು