ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಚುನಾವಣೆ | ಎರಡು ಸಮುದಾಯಕ್ಕೆ ಸೀಮಿತವಾದ ತಿಪಟೂರು ಕ್ಷೇತ್ರ

Last Updated 23 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ತಿಪಟೂರು: ತಿಪಟೂರು ವಿಧಾನಸಭಾ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿದ್ದು, ಪ್ರಜ್ಞಾವಂತ ಮತದಾರರನ್ನು ಹೊಂದಿದೆ. ಕಳೆದ 15 ಚುನಾವಣೆಗಳಿಂದಲೂ ಲಿಂಗಾಯಿತ ಹಾಗೂ ಬ್ರಾಹ್ಮಣ ಸಮುದಾಯದವರು ಆಯ್ಕೆ ಆಗುತ್ತಾ ಬಂದಿದ್ದಾರೆ.

ಹೊರಗಿನಿಂದ ಬಂದು ತಿಪಟೂರಿನಲ್ಲಿ ನೆಲೆಯೂರಿರುವ ಹಲವರು ಶಾಸಕರಾಗಿರುವುದು ವಿಶೇಷ. ತಿಪಟೂರಿನ ಟಿ.ಜಿ.ತಿಮ್ಮೇಗೌಡ, ರೇವಣಸಿದ್ಧಪ್ಪ, ನೀಲಕಂಠಸ್ವಾಮಿ, ಬಿ.ನಂಜಾಮರಿ, ಕೆ.ಷಡಕ್ಷರಿ ತಿಪಟೂರಿನವರು. ಉಳಿದವರು ಹೊರಗಿನಿಂದ ಬಂದು ನಗರದಲ್ಲಿ ನೆಲೆ ನಿಂತವರು.

1957, 1962ರಲ್ಲಿ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯ (ಪಿಎಸ್‍ಪಿ) ಕೆ.ಪಿ.ರೇವಣಸಿದ್ದಪ್ಪ ಅವರನ್ನು ಹೊರತುಪಡಿಸಿ ಈವರೆಗೂ ಯಾರೂ ಸತತವಾಗಿ ಎರಡು ಬಾರಿ ಗೆದ್ದಿರುವ ಇತಿಹಾಸ ಇಲ್ಲ. ಬಿ.ನಂಜಾಮರಿ 1994ರಲ್ಲಿ ಬಿಜೆಪಿಯಿಂದ, 2004ರಲ್ಲಿ ಜೆಡಿಎಸ್‌ನಿಂದ ಜಯಗಳಿಸಿದ್ದರೆ, ಬಿಜೆಪಿಯಿಂದ ಬಿ.ಸಿ.ನಾಗೇಶ್ 2008, 2018ರಲ್ಲಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಶಾಲಾ ಶಿಕ್ಷಣ ಸಚಿವರಾಗಿದ್ದಾರೆ. ಕಾಂಗ್ರೆಸ್‍ನ ಕೆ.ಷಡಕ್ಷರಿ 1999, 2013ರಲ್ಲಿ ಜಯಗಳಿಸಿದ್ದರು.

ಕ್ಷೇತ್ರದಲ್ಲಿ ಅತಿ ಹೆಚ್ಚು ವೀರಶೈವ ಲಿಂಗಾಯತ ಮತಗಳು ಇವೆ. ಅಹಿಂದ ಮತಗಳನ್ನು ನಿರ್ಲಕ್ಷಿಸುವಂತಿಲ್ಲ. ಈವರೆಗೂ ಜಾತಿಯ ಆಧಾರದಲ್ಲಿ ಚುನಾವಣೆಗಳು ನಡೆದಿಲ್ಲ. ಕಡಿಮೆ ಜನಸಂಖ್ಯೆ ಹೊಂದಿರುವ ಬ್ರಾಹ್ಮಣ ಸಮುದಾಯದವರು ಗೆಲುವು ಸಾಧಿಸುತ್ತಾ ಬಂದಿದ್ದಾರೆ. 1985ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಬಿ.ಎಸ್.ಚಂದ್ರಶೇಖರಯ್ಯ, ಬಿಜೆಪಿಯ ಬಿ.ಸಿ.ನಾಗೇಶ್ 2008, 2018ರಲ್ಲಿ ಜಯಗಳಿಸಿದ್ದಾರೆ. ಈವರೆಗೆ ಕ್ಷೇತ್ರದಿಂದ ಆಯ್ಕೆಯಾದ ಇಬ್ಬರು ಸಚಿವರಾಗಿದ್ದಾರೆ. 1989ರಲ್ಲಿ ಟಿ.ಎಂ.ಮಂಜುನಾಥ್ ಸಕ್ಕರೆ ಮತ್ತು ಲಾಟರಿ ಸಚಿವರಾಗಿದ್ದರು. ಪ್ರಸ್ತುತ ಬಿ.ಸಿ.ನಾಗೇಶ್ ಶಾಲಾ ಶಿಕ್ಷಣ ಸಚಿವರಾಗಿದ್ದಾರೆ.

1952ರ ಚುನಾವಣೆಯಿಂದಲೂ ಕ್ಷೇತ್ರ ಹಲವು ಏರಿಳಿತಗಳನ್ನು ಕಂಡಿದೆ. 1967ರಲ್ಲಿ ಎಂ.ಎಸ್.ನೀಲಕಂಠಸ್ವಾಮಿ ಕಾಂಗ್ರೆಸ್‍ನಿಂದ ಜಯಗಳಿಸಿದ್ದರು. ಕೇವಲ ನಾಲ್ಕು ತಿಂಗಳಿಗೆ ಅಕಾಲಿಕ ನಿಧನ ಹೊಂದಿದ ಕಾರಣ 1967ರಲ್ಲಿ ಉಪಚುನಾವಣೆ ನಡೆದಾಗ ಪಕ್ಷೇತರ ಅಭ್ಯರ್ಥಿಯಾಗಿ ಪರಾಭವಗೊಂಡಿದ್ದ ವಿ.ಎಲ್.ಶಿವಪ್ಪ ಅವರಿಗೆ ಕಾಂಗ್ರೆಸ್‍ ಅವಕಾಶ ಮಾಡಿಕೊಟ್ಟಿತ್ತು. ಅವರು ಆಯ್ಕೆಯಾಗಿದ್ದರು. 1972ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತರು. ನಂತರ 1978ರಲ್ಲಿ ಕಾಂಗ್ರೆಸ್ (ಐ)ನಿಂದ ಜಯಗಳಿಸಿದರು.

1983ರ ಚುನಾವಣೆ ವೇಳೆಗೆ ಎರಡು ಬಾರಿ ಜಯಗಳಿಸಿ ಹಾಲಿ ಶಾಸಕರಾಗಿದ್ದ ವಿ.ಎಲ್.ಶಿವಪ್ಪ, ಟಿ.ಎಂ.ಮಂಜುನಾಥ್ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಅಂದು ಮುಖ್ಯಮಂತ್ರಿಯಾಗಿದ್ದ ಆರ್.ಗುಂಡೂರಾವ್ ಇಬ್ಬರನ್ನು ಹೊರತುಪಡಿಸಿ ಕೊಬ್ಬರಿ ವರ್ತಕ ಹಾಗೂ ಪುರಸಭೆ ಅಧ್ಯಕ್ಷರಾಗಿದ್ದ ಎಸ್.ಪಿ.ಗಂಗಾಧರಪ್ಪ ಅವರಿಗೆ ಟಿಕೆಟ್ ನೀಡಿದ್ದು, ಆಯ್ಕೆಯಾಗಿದ್ದರು. ವಿ.ಎಲ್.ಶಿವಪ್ಪ ಪಕ್ಷೇತರವಾಗಿ ಸ್ಪರ್ಧಿಸಿ ಕೆಲವೇ ಸಾವಿರ ಮತಗಳ ಅಂತರದಲ್ಲಿ ಪರಾಭವಗೊಂಡರು. 1985ರಲ್ಲಿ ರಾಜ್ಯದಲ್ಲಿ ಸರ್ಕಾರ ಪತನವಾದ ಕಾರಣ ಚುನಾವಣೆ ನಡೆದಾಗ ಬಿ.ಎಸ್.ಚಂದ್ರಶೇಖರಯ್ಯ ಜನತಾ ಪಕ್ಷದಿಂದ ಜಯಗಳಿಸಿದರು.

2013ರ ಚುನಾವಣೆಯಲ್ಲಿ ಕೆ.ಷಡಕ್ಷರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಶಾಸಕರಾಗಿದ್ದರು. 2018ರ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಕೊಡಲಿಲ್ಲ. ಸಿದ್ದರಾಮಯ್ಯ ಅವರು ನಂಜಾಮರಿ ಅವರಿಗೆ ಟಿಕೆಟ್ ಘೋಷಿಸಿದ್ದರು. ಕೊನೆಗೆ ಸಾಕಷ್ಟು ರಾಜಕೀಯ ಹೈಡ್ರಾಮದ ನಂತರ ಕೆ.ಷಡಕ್ಷರಿ ಅವರಿಗೆ ಕಾಂಗ್ರೆಸ್‌ನಿಂದ ಟಿಕೆಟ್ ನೀಡಲಾಯಿತು. ಕೊನೆಗೂ ಪರಾಭವಗೊಂಡರು. ಬಿಜೆಪಿಯ ಬಿ.ಸಿ.ನಾಗೇಶ್ ಆಯ್ಕೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT