‘ಪಲ್ಲಕ್ಕಿ’ ಉತ್ಸವ ಬೇಡ: ಶಿವಪ್ರಕಾಶ್
‘ಸಮ್ಮೇಳನಾಧ್ಯಕ್ಷರನ್ನು ಪಲ್ಲಕ್ಕಿ ಮೇಲೆ ಹೊತ್ತು ತರುವುದು ನಿಲ್ಲಿಸಬೇಕು. ಇದು ಸಾಮಂತವಾದಿ ಸಂಸ್ಕೃತಿಯ ಸಂಕೇತ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದಕ್ಕೆ ಅವಕಾಶ ಇರಬಾರದು. ಅಧ್ಯಕ್ಷರು ನೆಲದ ಮೇಲೆ ನಡೆದು ಸಮ್ಮೇಳನದ ಸೇವೆ ಮಾಡಲಿ’ ಎಂಬ ಆಶಯವನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎಚ್.ಎಸ್.ಶಿವಪ್ರಕಾಶ್ ವ್ಯಕ್ತಪಡಿಸಿದರು. ಜಿಲ್ಲೆಯ ನೆಲ ಕಲೆ ಸಂಸ್ಕೃತಿಯ ಬಗ್ಗೆ ವಿ.ವಿಯಲ್ಲಿ ಹೆಚ್ಚಿನ ಅಧ್ಯಯನಗಳಾಗಬೇಕು. ಪ್ರಾಥಮಿಕ ಶಿಕ್ಷಣದ ಜತೆಗೆ ಉನ್ನತ ಶಿಕ್ಷಣ ಮತ್ತು ವಿಜ್ಞಾನ–ತಂತ್ರಜ್ಞಾನದಲ್ಲಿ ಕನ್ನಡ ಬಳಕೆಯಾಗಬೇಕು. ಇಂಗ್ಲಿಷ್ ಜ್ಞಾನದ ಮೂಲ ಎಂಬ ಮೂಢನಂಬಿಕೆ ಜನರಲ್ಲಿ ಬೇರೂರಿದೆ. ಇದು ದೂರವಾಗಿ ಕನ್ನಡದ ಚಿಂತನೆ ಬೆಳೆಯಬೇಕು ಎಂದು ಆಶಿಸಿದರು.