ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು ವಿಶ್ವವಿದ್ಯಾಲಯ: ರೈತನ ಮಗಳಿಗೆ 4 ಚಿನ್ನದ ಪದಕ

ತುಮಕೂರು ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ l 7,992 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ
Last Updated 6 ಮಾರ್ಚ್ 2021, 3:18 IST
ಅಕ್ಷರ ಗಾತ್ರ

ತುಮಕೂರು: ಗ್ರಾಮೀಣ ಭಾಗ ಅದರಲ್ಲೂ ಕೃಷಿ ಕುಟುಂಬದಿಂದ ಬಂದ ವಿದ್ಯಾರ್ಥಿನಿ ಕೆ.ಎಸ್.ಪಾವನ ಕನ್ನಡ ವಿಭಾಗದ ಸ್ನಾತಕೋತ್ತರ ಪದವಿಯಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ತಿಪಟೂರು ತಾಲ್ಲೂಕು ಕೆ.ಬಿ.ಕ್ರಾಸ್ ಸಮೀಪದ ಕಾಮಗೊಂಡನಹಳ್ಳಿ ರೈತ ನರಸಿಂಹರಾಜು ಅವರ ಪುತ್ರಿ. ಹಳ್ಳಿಯಿಂದ ಪ್ರತಿದಿನವೂ ವಿಶ್ವವಿದ್ಯಾಲಯಕ್ಕೆ ಬಸ್‌ನಲ್ಲೇ ಪ್ರಯಾಣಮಾಡಿ, ಅಭ್ಯಾಸದಲ್ಲಿ ತೊಡಗಿಸಿಕೊಂಡು ರ‍್ಯಾಂಕ್ ಪಡೆದಿದ್ದಾರೆ. ಪ್ರಯಾಣದ ಸಮಯವನ್ನು ವ್ಯರ್ಥಮಾಡದೇ ಓದಿಗೆ ಬಳಕೆ ಮಾಡಿಕೊಂಡಿದ್ದಾರೆ. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಉನ್ನತ ಸಾಧನೆ ಮಾಡಿದ್ದಾರೆ.

ತಂದೆ ಕೃಷಿಕರಾದರೂ ಮಗಳ ವಿದ್ಯಾಭ್ಯಾಸಕ್ಕೆ ಅನುವುಮಾಡಿ ಕೊಟ್ಟಿದ್ದಾರೆ. ಕಷ್ಟಪಟ್ಟು ನಗರಕ್ಕೆ ಕಳುಹಿಸಿ ಸಾಧನೆ ಮಾಡುವಂತೆ ಮಾಡಿದ್ದಾರೆ. ಮಗಳು ಚಿನ್ನದ ಪದಕ ಪಡೆಯುವುದನ್ನು ಕ್ಯಾಂಪಸ್‌ನಲ್ಲಿ ನರಸಿಂಹರಾಜು ಕಣ್ತುಂಬಿಕೊಂಡರು.

‘ಪದವಿಯಲ್ಲೂ ರ‍್ಯಾಂಕ್ ಪಡೆದಿದ್ದೆ. ಇಲ್ಲಿಯೂ ರ‍್ಯಾಂಕ್ ನಿರೀಕ್ಷಿಸಿದ್ದೆ. ಹಳ್ಳಿಯಿಂದ ಬಂದು ಮಾಡಿದ ಸಾಧನೆ ಹೆಮ್ಮೆ ತಂದಿದೆ. ನಮ್ಮ ಊರಿನಲ್ಲಿ ನಾನೇ ಮೊದಲು ಎಂ.ಎ ಮಾಡುತ್ತಿರುವುದು. ನಮ್ಮೂರಿನ ಹೆಸರು ಪತ್ರಿಕೆಯಲ್ಲಿ ಬರುತ್ತಿರುವುದು ಕಂಡು ಖುಷಿ ತಂದಿದೆ. ನಗರಕ್ಕೆ ಹೆಣ್ಣು ಮಕ್ಕಳು ಬಂದರೂ ಹಾಳಾಗುವುದಿಲ್ಲ ಎಂಬುದಕ್ಕೆ ನಾನೇ ಉದಾಹರಣೆ. ಮುಂದೆ ಶಿಕ್ಷಕಿಯಾಗಲು ಬಯಸಿದ್ದೇನೆ’ ಎಂದು ಪಾವನ ಹೇಳಿದರು.

ಹೊಲಿಗೆ ಮಾಡಿ ಓದಿಸಿದರು: ಗಣಿತಶಾಸ್ತ್ರದಲ್ಲಿ ಮೂರು ಚಿನ್ನದ ಪದಕ ಪಡೆದಿರುವ ತುಮಕೂರು ಶಾಂತಿನಗರದ ಆರ್.ವಿದ್ಯಾಶ್ರೀ ಸಹ ಬಡತನದಿಂದಲೇ ಬಂದು ಸಾಧನೆ ಮಾಡಿದವರು. ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ತಂದೆ ಹೃದಯಾಘಾತದಿಂದ ತೀರಿಕೊಂಡ ನಂತರ ಅವರ ತಾಯಿಯೇ ದುಡಿದು ಸಲಹಿ, ಶಿಕ್ಷಣ ಕೊಡಿಸಿದ್ದಾರೆ.

ಹೊಲಿಗೆ ವೃತ್ತಿಮಾಡಿ ಇಬ್ಬರು ಹೆಣ್ಣು ಮಕ್ಕಳಿಗೆ ಶಿಕ್ಷಣದ ದಾರಿ ತೋರಿಸಿದ್ದಾರೆ. ದಿನಕ್ಕೆ 6ರಿಂದ 7 ಗಂಟೆ ಅಭ್ಯಾಸ ಮಾಡಿದ್ದು ನೆರವಿಗೆ ಬಂದಿದೆ. ಮನೆ ಪಾಠಕ್ಕೆ ಹೋಗದೆಯೂ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.

‘ತಂದೆ ಇಲ್ಲದ ಕೊರಗು. ಅಮ್ಮನ ಕಷ್ಟದ ಕ್ಷಣಗಳು ಕಣ್ಣುಮುಂದೆ ಬರುತ್ತಿದ್ದವು. ಪದವಿಯಲ್ಲಿ ಅಲ್ಪದರಲ್ಲೇ ರ‍್ಯಾಂಕ್ ಕೈತಪ್ಪಿತ್ತು. ಈಗ ಅಂತಹ ಅವಕಾಶ ಸಿಕ್ಕಿದೆ. ಪಿಎಚ್.ಡಿ ಮಾಡಿ ಮುಂದೆ ತಂದೆಯಂತೆ ಗಣಿತ ಶಾಸ್ತ್ರದಲ್ಲೇ ಉಪನ್ಯಾಸಕಿ ಆಗುತ್ತೇನೆ’ ಎಂದು ವಿಧ್ಯಾಶ್ರೀ ಭಾವುಕರಾದರು.

‘ಹಳ್ಳಿಯಿಂದ ಬಂದು ಓದಿದೆ’: ಹಳ್ಳಿಯಿಂದ ಬಂದಿರುವ ಬಿ.ಎ.ವಾಣಿ ಅವರು ವಾಣಿಜ್ಯ ವಿಭಾಗದಲ್ಲಿ (ಎಂಕಾಂ) ಮೂರು ಚಿನ್ನದ ಪದಗಳನ್ನು ಕೊರಳಿಗೇರಿಸಿಕೊಂಡಿದ್ದಾರೆ. ತಂದೆ ಖಾಸಗಿ ಕಂಪನಿಯಲ್ಲಿ, ತಾಯಿ ಸಹ ಇಂತಹುದೆ ಸಂಸ್ಥೆಯಲ್ಲಿ ದುಡಿದು ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದಾರೆ.

ಇವರ ಕುಟುಂಬ ದಾಬಸ್‌ಪೇಟೆ ಸಮೀಪದ ಪೆಮ್ಮನಹಳ್ಳಿಯಲ್ಲಿ ನೆಲೆಸಿದೆ. ಸ್ವಂತ ಊರು ಮಾಗಡಿ ತಾಲ್ಲೂಕು ಕುದೂರು ಹೋಬಳಿಯ ಬಿಸ್ಕೂರು. ಪ್ರತಿದಿನವೂ ಪ್ರಯಾಣ ಮಾಡಿಯೇ ಓದಿದ್ದಾರೆ.

‘ಈ ಸಾಧನೆಗೆ ಗುರುಗಳ ಮಾರ್ಗದರ್ಶನವೇ ಕಾರಣ. ಗಂಟೆಗಟ್ಟಲೆ ಕುಳಿತು ಓದುತ್ತಿರಲಿಲ್ಲ. ಮನೆ ಕೆಲಸ ಮಾಡಿಕೊಂಡು ಬಿಡುವಿನಲ್ಲಿ ಅಭ್ಯಾಸ ಮಾಡುತ್ತಿದ್ದೆ. ಸದಾ ಓದುವುದಷ್ಟೇ ಜೀವನವಲ್ಲ. ಅದರಿಂದಲೇ ಸಾಧನೆಯೂ ಆಗುವುದಿಲ್ಲ. ಎಲ್ಲದರಲ್ಲೂ ತೊಡಗಿಸಿಕೊಂಡು, ಓದಿಗೂ ಸಮಯ ಮಾಡಿಕೊಳ್ಳುತ್ತಿದೆ. ಸದಾ ಚಟುವಟಿಕೆಯಿಂದ ಕೂಡಿದ್ದರೆ ಮಾತ್ರ ಸಾಧನೆ ಸಾಧ್ಯವಾಗಲಿದೆ. ಅದುವೇ ಜೀವನ’ ಎಂದು ವಾಣಿ ತಮ್ಮ ಅನುಭವ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT