ಗುರುವಾರ , ಮೇ 6, 2021
25 °C
ಆಂತರಿಕ ಸಂಪನ್ಮೂಲದಿಂದ ಕಾಮಗಾರಿಗೆ ₹28 ಕೋಟಿ ನೀಡುವ ವಿಚಾರ

ಕುಲಪತಿ ಪಟ್ಟಿಗೂ ಸಿಗದ ಅನುಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ತನ್ನ ಆಂತರಿಕ ಸಂಪನ್ಮೂಲ ಬಳಸಿ ಹೊಸ ಕ್ಯಾಂಪಸ್‌ನಲ್ಲಿ (ಬಿದರಕಟ್ಟೆ) ನಿರ್ಮಾಣ ಕಾಮಗಾರಿ ಮಾಡಲು ಮುಂದಾಗಿದ್ದ ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಪ್ರಯತ್ನಕ್ಕೆ ಸ್ಪಂದನೆ ಸಿಕ್ಕಿಲ್ಲ.

ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ಸಿಂಡಿಕೇಟ್ ಸಭೆಯಲ್ಲಿ ‘ಕಟ್ಟಡ ನಿರ್ಮಾಣ ಆಗಲೇಬೇಕು. ₹28 ಕೋಟಿ ವೆಚ್ಚ ಮಾಡಲು ಒಪ್ಪಿಗೆ ನೀಡಬೇಕು’ ಎಂದು ಕುಲಪತಿ ಪಟ್ಟು ಹಿಡಿದರು. ಆದರೆ ಸದಸ್ಯರು ತೀವ್ರ ಭಿನ್ನಾಭಿಪ್ರಾಯ ದಾಖಲಿಸಿದ ಹಿನ್ನೆಲೆಯಲ್ಲಿ ಈ ಪ್ರಸ್ತಾವ ಕೈಬಿಡಲಾಯಿತು.

ಸಾಮಾನ್ಯವಾಗಿ ತನ್ನ ಸಂಪನ್ಮೂಲ ಹಾಗೂ ಇತರ ಮೂಲಗಳಿಂದ ಸಂಗ್ರಹಿಸಿ ಉಳಿತಾಯ ಮಾಡಿರುವ ಹಣವನ್ನು ನೌಕರರು, ಸಿಬ್ಬಂದಿ ವೇತನ ನೀಡಲು, ದಿನನಿತ್ಯದ ವೆಚ್ಚ ಭರಿಸಲು, ವಿ.ವಿ ಆಡಳಿತ ಸುಗಮವಾಗಿ ನಡೆದುಕೊಂಡು ಹೋಗಲು ಅಗತ್ಯವಾದ ಖರ್ಚು ವೆಚ್ಚಗಳಿಗೆ ಬಳಕೆ ಮಾಡಲಾಗುತ್ತದೆ. ಉಳಿತಾಯದ ಹಣವನ್ನು ಕಟ್ಟಡ ನಿರ್ಮಾಣಕ್ಕೆ ನೀಡಿದರೆ ಮುಂದೆ ಸಂಕಷ್ಟ ಎದುರಾದರೆ ಸಿಬ್ಬಂದಿಗೆ ವೇತನ ನೀಡಲೂ ಪರದಾಡಬೇಕಾಗುತ್ತದೆ ಎಂಬ ಅಭಿಪ್ರಾಯ ಕೆಲ ಸದಸ್ಯರಿಂದ ವ್ಯಕ್ತವಾಯಿತು ಎಂದು ಮೂಲಗಳು ತಿಳಿಸಿವೆ.

ಆಂತರಿಕ ಸಂಪನ್ಮೂಲವನ್ನು ನಿರ್ಮಾಣ ಕಾಮಗಾರಿಗೆ ಬಳಸಲೇಬಾರದು ಎಂಬ ನಿಯಮವಿಲ್ಲ. ವಿ.ವಿ ಆರ್ಥಿಕವಾಗಿ ಸದೃಢವಾಗಿದ್ದಾಗ ಬಳಕೆ ಮಾಡಿದರೆ ಯಾರಿಂದಲೂ ತಕರಾರು ವ್ಯಕ್ತವಾಗುವುದಿಲ್ಲ. ಆದರೆ ಇನ್ನೂ ಉತ್ತಮ ಸ್ಥಿತಿಗೆ ತಲುಪಿಲ್ಲ ಎಂದು ಸದಸ್ಯರು ಹೇಳಿದರು ಎನ್ನಲಾಗಿದೆ.

ಈಗ ಕೋವಿಡ್–19ನಿಂದಾಗಿ ದೇಶ ತತ್ತರಿಸಿದೆ. ನೌಕರರ ವೇತನಕ್ಕೂ ಸರ್ಕಾರದ ಬಳಿ ಹಣವಿಲ್ಲವಾಗಿದೆ. ಮುಂದೆ ವಿ.ವಿಗೂ ಅನುದಾನ ಕಡಿತಗೊಂಡರೆ ಸಂಬಳ, ಇತರ ವೆಚ್ಚಗಳಿಗೆ ಪರದಾಡಬೇಕಾಗುತ್ತದೆ. ಈಗಲೇ ಮುನ್ನೆಚ್ಚರಿಕೆ ವಹಿಸಿದರೆ ಮುಂದಿನ ಸಂಕಷ್ಟದ ದಿನಗಳನ್ನು ಎದುರಿಸಬಹುದು ಎಂಬ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ.

ಖಜಾನೆ ತುಂಬಿಸಿದ ರಾಜಾಸಾಬ್
ಎಸ್.ಸಿ.ಶರ್ಮಾ ಕುಲಪತಿ ಆಗಿದ್ದಾಗ ವಿ.ವಿ ಖಜಾನೆ ಖಾಲಿಯಾಗಿತ್ತು. ಅವರು ಅಧಿಕಾರದಿಂದ ನಿರ್ಗಮಿಸಿದಾಗ ₹4 ಕೋಟಿ ಹಣ ಉಳಿದಿತ್ತು. ನಂತರ ಬಂದ ಪ್ರೊ.ಎ.ಎಚ್.ರಾಜಾಸಾಬ್ ಸಂಪನ್ಮೂಲ ಕ್ರೋಡೀಕರಿಸಲು ಒತ್ತು ನೀಡಿದರು. ಅವರು ಕುಲಪತಿ ಸ್ಥಾನದಿಂದ ಕೆಳಗಿಳಿಯುವ ಮುನ್ನ ₹62 ಕೋಟಿ ಬಿಟ್ಟು ಹೋಗಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು