ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು| ಜೆಡಿಎಸ್‌ನತ್ತ ಸೊಗಡು ಶಿವಣ್ಣ ಚಿತ್ತ

ಒಂದೆರಡು ದಿನದಲ್ಲೇ ಪಕ್ಷ ಸೇರ್ಪಡೆ ನಿರ್ಧಾರ
Last Updated 15 ಏಪ್ರಿಲ್ 2023, 15:47 IST
ಅಕ್ಷರ ಗಾತ್ರ

ತುಮಕೂರು: ಬಿಜೆಪಿಯಲ್ಲಿ ಟಿಕೆಟ್ ಸಿಗದೆ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರ ಬಂದಿರುವ ಮಾಜಿ ಸಚಿವ ಸೊಗಡು ಶಿವಣ್ಣ ಜೆಡಿಎಸ್‌ನತ್ತ ಹೆಜ್ಜೆ ಹಾಕಿದ್ದಾರೆ. ಒಂದೆರಡು ದಿನದಲ್ಲೇ ಪಕ್ಷ ಸೇರ್ಪಡೆ ಬಗ್ಗೆ ನಿರ್ಧಾರವಾಗಲಿದೆ.

ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬೆಂಗಳೂರಿನಲ್ಲಿ ಶನಿವಾರ ಭೇಟಿಮಾಡಿ ಶಿವಣ್ಣ ಚರ್ಚಿಸಿದ್ದಾರೆ. ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ಸಹ ಭೇಟಿಯಾಗಿದ್ದರು. ನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗುವ ಬಗ್ಗೆಯೂ ಚರ್ಚೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿಯಿಂದ ಹೊರ ಬಂದ ನಂತರ ಪಕ್ಷೇತರ ಅಥವಾ ಯಾವುದಾದರೂ ಪಕ್ಷದಿಂದ ಸ್ಪರ್ಧೆ ಮಾಡುವುದಾಗಿ ಹೇಳಿದ್ದರು. ಈಗ ಜೆಡಿಎಸ್ ಮುಖಂಡರನ್ನು ಭೇಟಿ ಮಾಡಿರುವುದನ್ನು ನೋಡಿದರೆ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯನ್ನಾಗಿ ಎನ್.ಗೋವಿಂದರಾಜು ಹೆಸರು ಪ್ರಕಟಿಸಲಾಗಿದ್ದು, ಈಗಾಗಲೇ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮಹಿಳೆಯೊಬ್ಬರ ಜತೆಗೆ ಗೋವಿಂದರಾಜು ಅಸಭ್ಯ, ಅಶ್ಲೀಲವಾಗಿ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ. ಈ ವಿಚಾರ ದಳಪತಿಗಳ ಕಿವಿಗೂ ಮುಟ್ಟಿದ್ದು, ಈ ಬಗ್ಗೆಯೂ ಭೇಟಿ ಸಮಯದಲ್ಲಿ ಚರ್ಚಿಸಲಾಯಿತು ಎನ್ನಲಾಗಿದೆ.

ಇಂತಹ ಸಂದರ್ಭದಲ್ಲಿ ಜನರ ಬಳಿಗೆ ಹೋಗಿ ಗೋವಿಂದರಾಜು ಪರ ಮತ ಕೇಳುವುದು ಕಷ್ಟಕರವಾಗಬಹುದು. ಅಭ್ಯರ್ಥಿಯನ್ನು ಬದಲಿಸಿ ಶಿವಣ್ಣ ಅವರನ್ನು ಕಣಕ್ಕಿಳಿಸಿದರೆ ಪಕ್ಷದ ಗೌರವ ಕಾಪಾಡಿಕೊಂಡು ಮತ ಕೇಳಲು ನೆರವಾಗಬಹುದು ಎಂಬ ಚಿಂತನೆ ನಡೆದಿದೆ.

ಬೆಳ್ಳಿ ಲೋಕೇಶ್ ರಾಜೀನಾಮೆ:

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬೆಳ್ಳಿ ಲೋಕೇಶ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ತಮ್ಮ ಸ್ಥಾನಕ್ಕೆ ಶನಿವಾರ ರಾಜೀನಾಮೆ ನೀಡಿದ್ದಾರೆ. ಜಿಲ್ಲಾ ಘಟಕದ ಅಧ್ಯಕ್ಷರ ಮೂಲಕ ಪಕ್ಷದ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ಕಳುಹಿಸಿಕೊಟ್ಟಿದ್ದಾರೆ.

ಗೋವಿಂದರಾಜು ಅವರಿಗೆ ಟಿಕೆಟ್ ನೀಡಿದ ನಂತರ ಹಾಗೂ ತಮ್ಮನ್ನು ಪಕ್ಷದಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಕಾರಣಕ್ಕೆ ಪಕ್ಷದಿಂದ ದೂರ ಸರಿದಿದ್ದರು.

ಟಿಕೆಟ್ ಸಿಗದೆ ಮುನಿಸಿಕೊಂಡಿದ್ದ ಮತ್ತೊಬ್ಬ ಜೆಡಿಎಸ್ ಮುಖಂಡ ನರಸೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.

**

ಕಾಂಗ್ರೆಸ್‌ಗೆ ರಾಜೀನಾಮೆ

ತುಮಕೂರು: ನಗರ ಕ್ಷೇತ್ರದಲ್ಲಿ ಟಿಕೆಟ್ ಕೈ ತಪ್ಪಿದ್ದರಿಂದ ಬೇಸರಗೊಂಡಿದ್ದ ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅತೀಕ್ ಅಹಮದ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ತಮ್ಮ ಸ್ಥಾನಕ್ಕೆ ಶನಿವಾರ ರಾಜೀನಾಮೆ ನೀಡಿದ್ದಾರೆ.

ಶಾಸಕ ಡಾ.ಜಿ.ಪರಮೇಶ್ವರ ಬೆಂಬಲಿಗನಾಗಿದ್ದರೂ ಅವರು ನನ್ನನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಸೌಜನ್ಯಕ್ಕೂ ಕರೆತು ಮಾತನಾಡಿಸಲಿಲ್ಲ ಎಂದು ಆರೋಪಿಸಿದ್ದಾರೆ.

ಟಿಕೆಟ್ ಸಿಗದ ಕಾರಣಕ್ಕೆ ಮಾಜಿ ಶಾಸಕರೊಬ್ಬರು ರಾಜೀನಾಮೆ ನೀಡಿದ ತಕ್ಷಣ ಪಕ್ಷದ ವರಿಷ್ಠರು ಬಂದು ಮಾತನಾಡಿ, ಸಮಾಧಾನ ಪಡಿಸಿದರು. ಆದರೆ ಹಲವು ವರ್ಷಗಳಿಂದ ಪಕ್ಷ ಕಟ್ಟಿದ ನನ್ನನ್ನು ನಿರ್ಲಕ್ಷ್ಯಿಸಿದ್ದಾರೆ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT