ಬುಧವಾರ, ಜನವರಿ 19, 2022
28 °C

ತುಮಕೂರು: ತರಕಾರಿ, ಹಣ್ಣು ಕೈಗೆಟಕುತ್ತಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಜನರಿಂದ ದೂರವಾಗಿರುವ ತರಕಾರಿ ಈಗ ಮತ್ತಷ್ಟು ದೂರ ಸರಿದಿದೆ. ಕಳೆದ ಕೆಲ ವಾರಗಳಿಂದ ಬೆಲೆ ಏರಿಕೆ ಮುಂದುವರೆದಿದ್ದು, ಈ ವಾರವೂ ಗಗನಮುಖಿಯಾಗಿದೆ.

ಜನಸಾಮಾನ್ಯರು ತರಕಾರಿ ಕೊಳ್ಳುವುದನ್ನೇ ಕಡಿಮೆ ಮಾಡಿದ್ದರೆ, ಕೆಲವರು ಅಲ್ಪ ಸ್ವಲ್ಪ ತೆಗೆದುಕೊಂಡು ಹೋಗುತ್ತಿದ್ದಾರೆ. ಕೆ.ಜಿ ತೆಗೆದು
ಕೊಳ್ಳುತ್ತಿದ್ದವು ಕಾಲು ಕೆ.ಜಿ.ಗೆ ಇಳಿದಿದ್ದಾರೆ. ಬಡವರಂತೂ ತರಕಾರಿ ತಂಟೆಗೆ ಹೋಗುತ್ತಿಲ್ಲ. ಈ ರೀತಿ ಬೆಲೆ ಏರಿಕೆಯಾದರೆ ನಾವು ಹೊಟ್ಟೆಗೆ ಏನು ತಿನ್ನುವುದು ಎಂದು ಗೃಹಿಣಿ ರಮಾದೇವಿ ಪ್ರಶ್ನಿಸಿದ್ದು, ಬೆಲೆ ಏರಿಕೆಗೆ ಕನ್ನಡಿ ಹಿಡಿದಂತಿತ್ತು.

ಕಳೆದ ವಾರ ಟೊಮೆಟೊ ಕೆ.ಜಿ ₹60–70 ಇದ್ದದ್ದು, ಈ ವಾರ ಮತ್ತಷ್ಟು ದುಬಾರಿಯಾಗಿದೆ. ಕೆಲ ಕಾಲ ಸ್ಥಿರವಾಗಿದ್ದ ಬೀನ್ಸ್ ಧಾರಣೆ ಕಳೆದ ಎರಡು ವಾರದಿಂದ ಮತ್ತೆ ಏರಿಕೆಯಾಗಿದ್ದು, ಕೆ.ಜಿ ₹80–90ಕ್ಕೆ ತಲುಪಿದೆ. ಬೆಂಡೆಕಾಯಿ, ಮೂಲಂಗಿ, ಬೀಟ್ರೂಟ್ ಧಾರಣೆಯಲ್ಲಿ ಹೆಚ್ಚಳವಾಗಿದೆ. ಒಂದು ಹೂ ಕೋಸಿನ ಬೆಲೆ ₹60 ದಾಟಿದ್ದು, ಈರುಳ್ಳಿಯೂ ಅದೇ ದಾರಿ ಹಿಡಿದಿದೆ. ₹100 ಗಡಿ ದಾಟಿದ್ದ ಕ್ಯಾಪ್ಸಿಕಂ ಇಳಿಮುಖ ಕಾಣುತ್ತಿದೆ.

ತರಕಾರಿ ಬದಲು ಸೊಪ್ಪು ತೆಗೆದುಕೊಂಡು ಹೋಗಿ ಸಾರು ಮಾಡುವ ಯೋಚನೆ ಮಾಡಿದರೆ ಅದೂ ಸಹ ಕೈ ಸುಡುತ್ತಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹50–60ಕ್ಕೆ ಮಾರಾಟವಾಗಿದ್ದರೆ, ಸಬ್ಬಕ್ಕಿ ಸೊಪ್ಪು ಕೆ.ಜಿ ₹100–120ಕ್ಕೆ, ಮೆಂತ್ಯ ಸೊಪ್ಪು ₹70–80ಕ್ಕೆ, ಪಾಲಕ್ ಕೆ.ಜಿ ₹60–70ಕ್ಕೆ ಏರಿಕೆಯಾಗಿದೆ. ಸೊಪ್ಪಿನ ಬೆಳೆ ಹಾಳಾಗಿರುವುದರಿಂದ ಒಂದೆರಡು ವಾರ ಇದೇ ಬೆಲೆ ಇರುತ್ತದೆ ಎಂದು ಅಂತರಸನಹಳ್ಳಿ ಮಾರುಕಟ್ಟೆ ಮೂಲಗಳು ತಿಳಿಸಿವೆ.

ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಕೆಲವು ತರಕಾರಿಗಳ ಬೆಲೆ ಕೆ.ಜಿ ₹100 ದಾಟಿದ್ದರೆ, ಚಿಲ್ಲರೆ ಹಾಗೂ ಇತರೆ ಮಾರುಕಟ್ಟೆಗಳಲ್ಲಿ ಸಾಕಷ್ಟು ತರಕಾರಿಗಳನ್ನು ₹100ಕ್ಕೆ ಮಾರಾಟ ಮಾಡಲಾಗುತ್ತಿದೆ. ಮಳೆಯಿಂದ ಬೆಳೆ ಹಾಳಾಗಿದ್ದು, ಮಳೆ ಸಂದರ್ಭದಲ್ಲಿ ತರಕಾರಿ ಕಿತ್ತು ತರಲು ಸಾಧ್ಯವಾಗದೆ ಬೆಲೆ ಹೆಚ್ಚಳವಾಗಿತ್ತು. ಈಗ ಒಣಹವೆ ಮೂಡುತ್ತಿದ್ದು, ಮುಂದಿನ ದಿನಗಳಲ್ಲಿ ಬೆಲೆ ಇಳಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಹಣ್ಣು ದುಬಾರಿ: ತರಕಾರಿಯಂತೆ ಹಣ್ಣುಗಳ ಬೆಲೆಯನ್ನೂ ಕೇಳುವಂತೆಯೇ ಇಲ್ಲ. ಕಲ್ಲಂಗಡಿ ಹಣ್ಣು ಕೆ.ಜಿ ₹40ರಿಂದ 60ಕ್ಕೆ ಜಿಗಿದಿದೆ. ಕರಬೂಜ ಕೆ.ಜಿ ₹60ರಿಂದ 80ಕ್ಕೆ ಹೆಚ್ಚಳವಾಗಿದೆ. ದಾಳಿಂಬೆ ಮತ್ತಷ್ಟು ದುಬಾರಿಯಾಗಿದ್ದು, ಮೂಸಂಬಿ, ಕಿತ್ತಳೆ, ಸಪೋಟ, ಪಪ್ಪಾಯ ಬೆಲೆ ಏರಿಕೆಯಾಗಿದೆ.

ಕೆಲವು ಧಾನ್ಯಗಳ ಬೆಲೆ ಮತ್ತೆ ಅಲ್ಪ ಇಳಿಕೆ ಕಂಡಿವೆ. ತೊಗರಿ ಬೇಳೆ ಮತ್ತೆ ಕೆ.ಜಿ ₹10, ಕಡಲೆ ಬೀಜ ಕೆ.ಜಿ ₹15 ಕಡಿಮೆಯಾಗಿದ್ದರೆ, ಉದ್ದಿನ ಬೇಳೆ, ಹೆಸರು ಕಾಳು ಅಲ್ಪ ಏರಿಕೆಯಾಗಿದೆ. ಅಡುಗೆ ಎಣ್ಣೆ ಬೆಲೆ ಸ್ಥಿರತೆ ಕಾಪಾಡಿಕೊಂಡಿದ್ದು, ಸನ್‌ ಫ್ಲವರ್ ಕೆ.ಜಿ ₹138–140, ಪಾಮಾಯಿಲ್ ಕೆ.ಜಿ ₹121–125ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಬೆಲೆ ಇಳಿಕೆ: ಬ್ರಾಯ್ಲರ್ ಕೋಳಿ ಕೆ.ಜಿ ₹20 ಕಡಿಮೆಯಾಗಿದ್ದು, ₹140ಕ್ಕೆ, ರೆಡಿ ಚಿಕನ್ ₹ 200ಕ್ಕೆ, ಮೊಟ್ಟೆ ಕೋಳಿ ಕೆ.ಜಿ ₹135ಕ್ಕೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಮೀನು ಅಲ್ಪ ಇಳಿಕೆ: ಮೀನಿನ ಬೆಲೆ ಅಲ್ಪಮಟ್ಟಿಗೆ ಕಡಿಮೆಯಾಗಿದ್ದು, ಬಂಗುಡೆ ಕೆ.ಜಿ ₹230, ಬೂತಾಯಿ 230, ಅಂಜಲ್ ಕೆ.ಜಿ ₹560, ಬಿಳಿ ಮಾಂಜಿ ₹650, ಸೀಗಡಿ ಕೆ.ಜಿ 620ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.