ಶುಕ್ರವಾರ, ಜೂನ್ 25, 2021
30 °C
ಸಕಾರಣವಿಲ್ಲದೆ ಸಂಚರಿಸುತ್ತಿದ್ದ ವಾಹನಗಳು ಪೊಲೀಸರ ವಶಕ್ಕೆ

ಲಾಕ್‌ಡೌನ್‌ ಕಟ್ಟುನಿಟ್ಟು: ಎಲ್ಲೆಡೆ ಸ್ತಬ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಲಾಕ್‌ಡೌನ್ ಕಟ್ಟುನಿಟ್ಟು ಜಾರಿಯಿಂದಾಗಿ ಸೋಮವಾರ ನಗರ ಹಾಗೂ ಜಿಲ್ಲೆ ಬಹುತೇಕ ಸ್ತಬ್ಧಗೊಂಡಿದೆ. ಹಿಂದಿನ ವಾರ ಕರ್ಫ್ಯೂ ಜಾರಿಯಲ್ಲಿದ್ದ ಸಮಯದಲ್ಲಿ ಸಂಚಾರಕ್ಕೆ ಅವಕಾಶ ಸಿಕ್ಕಿದಂತೆ ಈಗಲೂ ಸಿಗಬಹುದು ಎಂದುಕೊಂಡು ಬಂದವರು ತೊಂದರೆಗೆ ಸಿಲುಕಿದರು. ಕೆಲವರು ಪೊಲೀಸರ ಕೈಗೆ ಸಿಲುಕಿ ಒದ್ದಾಡಿದರು.

ನಗರದಲ್ಲಿ ಸೋಮವಾರ ಬೆಳಿಗ್ಗೆ ಪೊಲೀಸರು ವಾಹನಗಳ ತಪಾಸಣೆ ನಡೆಸಿ, ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಿದರು. ಸಕಾರಣವಿಲ್ಲದೆ ಸಂಚರಿಸುತ್ತಿದ್ದ ವಾಹನಗಳನ್ನು ವಶಕ್ಕೆ ಪಡೆದುಕೊಂಡರು.

ನಗರ ಪ್ರವೇಶಿಸುವ ಹಾಗೂ ನಗರದಿಂದ ಹೊರಗೆ ಹೋಗುವ ವಾಹನಗಳನ್ನು ತಪಾಸಣೆ ಮಾಡಿದರು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಂತರ ಜಿಲ್ಲೆಗಳನ್ನು ಸಂಪರ್ಕಿಸುವ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಿದ್ದು, ಹೊರ ಜಿಲ್ಲೆಯ ವಾಹನಗಳು ಜಿಲ್ಲೆ ಪ್ರವೇಶಿಸದಂತೆ ತಡೆದರು. ಜಿಲ್ಲೆಯಿಂದಲೂ ಹೊರಕ್ಕೆ ಹೋಗಲು ಬಿಡಲಿಲ್ಲ. ಅಗತ್ಯ ಸೇವೆ ಒದಗಿಸುವ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಯಿತು.

ಹಿಂದಿನ ದಿನಗಳಿಗೆ ಹೋಲಿಸಿದರೆ ಸೋಮವಾರ ವಾಹನ ಹಾಗೂ ಜನ ಸಂಚಾರ ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಇತ್ತು. ಹಲವರು ಹತ್ತಾರು ಕಾರಣಗಳನ್ನು ಹೇಳಿಕೊಂಡು ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದರು. ಸಕಾರಣ ಇದ್ದವರಿಗೂ ಸಂಚರಿಸಲು ಪೊಲೀಸರು ಕಿರಿಕಿರಿ ಮಾಡಿದರು. ನಗರದ ಬಟವಾಡಿ ಮಿರ್ಜಿ ಪೆಟ್ರೋಲ್ ಬಂಕ್ ಬಳಿ ಬೆಳಿಗ್ಗೆ 7.30ರ ಸಮಯದಲ್ಲಿ ಗುರುತಿನ ಕಾರ್ಡ್ ತೋರಿಸಿದವರಿಗೂ ಸಂಚರಿಸಲು ಅಡ್ಡಿಪಡ್ಡಿಸಿ ನಿಂದಿಸಿ ಕಳುಹಿಸಿದರು. ಕೆಲವು ಪೊಲೀಸರು ಸೌಜನ್ಯ ಮೀರಿ ವರ್ತಿಸಿದರು.

ಬೆಳಿಗ್ಗೆ 6ರಿಂದ 10 ಗಂಟೆ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಬೆಳಿಗ್ಗೆ ಸ್ವಲ್ಪ ಮಟ್ಟಿಗೆ ವಾಹನಗಳ ಸಂಚಾರ ಇತ್ತು. 10 ಗಂಟೆ ನಂತರ ತಗ್ಗಿತು. ಅಗತ್ಯ ಇರುವವರು, ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡವರು
ಸಂಚರಿಸಿದರು.

ಲಾಕ್‌ಡೌನ್‌ ಜಾರಿಯಿಂದಾಗಿ ನಗರದಲ್ಲಿ ಬಹುತೇಕ ಚಟುವಟಿಕೆಗಳು ಸ್ಥಗಿತಗೊಂಡವು. ಕಂದಾಯ, ನೀರು ಸರಬರಾಜು, ನಗರ ಸ್ಥಳೀಯ ಸಂಸ್ಥೆಗಳು, ಬ್ಯಾಂಕ್‌ಗಳು ಸೇರಿದಂತೆ ಕೆಲವು ಕಚೇರಿಗಳು ಕಾರ್ಯ ನಿರ್ವಹಿಸಿದವು. ಕೆಲವು ಹೋಟೆಲ್‌ಗಳು ತೆರೆದಿದ್ದವು. ಊಟ, ತಿಂಡಿಯನ್ನು ಪಾರ್ಸೆಲ್ ನೀಡಲಾಯಿತು. ಮಧ್ಯಾಹ್ನದ ವೇಳೆಗೆ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಸಂಜೆ ವೇಳೆಗೆ ಸ್ವಲ್ಪ ಮಟ್ಟಿಗೆ ಓಡಾಟ ಕಂಡುಬಂತು. ಉಳಿದಂತೆ ನಗರ ಸ್ತಬ್ಧಗೊಂಡಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು