ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನದಾತರ ಹೋರಾಟಕ್ಕೆ ಸಂದ ಜಯ: ಎ.ಗೋವಿಂದ

Last Updated 20 ನವೆಂಬರ್ 2021, 7:48 IST
ಅಕ್ಷರ ಗಾತ್ರ

ತುಮಕೂರು: ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿರುವುದನ್ನು ರೈತ ಸಂಘಟನೆಗಳು, ರೈತ ಮುಖಂಡರು ಸ್ವಾಗತಿಸಿದ್ದಾರೆ.

‘ಇದು ಅನ್ನದಾತರ ಹೋರಾಟಕ್ಕೆ ಸಿಕ್ಕ ಜಯ’ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರವರು ಬಣ್ಣಿಸಿದ್ದಾರೆ. ರೈತ ವಿರೋಧಿ ಕಾಯ್ದೆ ವಿರುದ್ಧ ಕಳೆದ ಒಂದು ವರ್ಷದಿಂದ ನಿರಂತರವಾಗಿ ಹೋರಾಟ ನಡೆಸಿದ ಫಲ. ಬಹಳಷ್ಟು ರಾಷ್ಟ್ರಗಳು ರೈತರ ಹೋರಾಟವನ್ನು ಬೆಂಬಲಿಸಿದ್ದು, ಕೃಷಿ ಕಾಯ್ದೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದವು ಎಂದು ಹೇಳಿದರು.

ಇತ್ತೀಚೆಗೆ ವಿವಿಧ ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ರೈತರು ಹೋರಾಟ ನಿಲ್ಲಿಸುವುದಿಲ್ಲ ಎಂಬ ವಿಚಾರ ಮನದಟ್ಟಾದ ನಂತರ ವಾಪಸ್ ತೆಗೆದುಕೊಳ್ಳುವ ನಿರ್ಧಾರ ಕೈಗೊಂಡಿದ್ದಾರೆ ಎಂದರು.

ಹೋರಾಟದ ಸಮಯದಲ್ಲಿ 700ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದು, ಇದರ ಹೊಣೆಯನ್ನು ಕೇಂದ್ರ ಸರ್ಕಾರವೇ ಹೊರಬೇಕಿದೆ. ಹುತಾತ್ಮ ರೈತ ಕುಟುಂಬಗಳ ಬದುಕಿನ ಬಗ್ಗೆಯೂ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಚಳವಳಿ ಸಮಯದಲ್ಲಿ ರೈತರ ಮೇಲೆ ನೂರಾರು ಪ್ರಕರಣಗಳನ್ನು ದಾಖಲಿಸಿದ್ದು, ಅವುಗಳ ಬಗ್ಗೆಯೂ ಸ್ಪಷ್ಟತೆ ಮೂಡಬೇಕಿದೆ ಎಂದು ಹೇಳಿದರು.

ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಬಾರದು. ಬೆಂಬಲ ಬೆಲೆ ಖಾತ್ರಿ ಕಾಯ್ದೆ ರೂಪಿಸುವಂತೆಯೂ ಒತ್ತಾಯಿಸುತ್ತಿದ್ದು, ಈ ಬಗ್ಗೆಯೂ ಸ್ಪಷ್ಟತೆ ಬರಬೇಕಿದೆ ಎಂದರು.

ರಾಜ್ಯದಲ್ಲಿ ಜಾರಿಗೆ ತಂದಿರುವ ಭೂಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆಗಳನ್ನೂ ರಾಜ್ಯ ಸರ್ಕಾರ ವಾಪಸ್ ಪಡೆಯಬೇಕು. ಇಲ್ಲವಾದರೆ ದೆಹಲಿಯಲ್ಲಿ ನಡೆದ ಹೋರಾಟ ರಾಜ್ಯದಲ್ಲೂ ಆರಂಭವಾಗಲಿದೆ ಎಂದು ಎಚ್ಚರಿಸಿದರು.

ರೈತ ಹೋರಾಟಕ್ಕೆ ಐತಿಹಾಸಿಕ ಮುನ್ನಡೆ: ಮೂರು ಕೃಷಿ ಕಾಯ್ದೆಗಳನ್ನು ಘೋಷಣೆ ಮಾಡಿ ಒಂದು ವರ್ಷ ತುಂಬುವ ಸಂದರ್ಭದಲ್ಲಿ ವಾಪಸ್ ಪಡೆಯುವುದಾಗಿಹೇಳಿರುವುದು ಅನ್ನದಾತರ ಸಂಘಟಿತ ಹೋರಾಟಕ್ಕೆ ಮುನ್ನಡೆ ಸಿಕ್ಕಿದಂತಾಗಿದೆ. ಆದರೆ ಎಚ್ಚರ ತಪ್ಪುವಂತಿಲ್ಲ ಎಂದು ‘ಸಂಯುಕ್ತ ಹೋರಾಟ– ಕರ್ನಾಟಕ’ ಜಿಲ್ಲಾ ಘಟಕ ತಿಳಿಸಿದೆ.

ಜಿಲ್ಲಾ ಘಟಕದ ಸಂಚಾಲಕ ಸಿ.ಯತಿರಾಜು, ಶಂಕರಪ್ಪ, ಧನಂಜಯಾರಾಧ್ಯ, ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಾದ ಬಿ.ಉಮೇಶ್, ಅಜ್ಜಪ್ಪ, ಆರ್‌ಕೆಎಸ್ ಎಸ್.ಎನ್.ಸ್ವಾಮಿ, ಎಐಕೆಎಸ್ ಕಂಬೇಗೌಡ ಇತರರು ಸ್ವಾಗತಿಸಿದ್ದಾರೆ.

ರಾಜ್ಯದಲ್ಲಿ ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆಗಳನ್ನು ರಾಜ್ಯ ಸರ್ಕಾರ ವಾಪಾಸ್ ಪಡೆಯಬೇಕು. ಅಲ್ಲದೆ ಕಾರ್ಪೋರೇಟ್ ಕಂಪನಿಗಳ ಪರವಾಗಿ ಕಾರ್ಮಿಕ ಕಾಯ್ದೆಗೆ ತಿದ್ದುಪಡಿಗಳನ್ನು ತಂದು ನಾಲ್ಕು ಕಾರ್ಮಿಕ ಸಂಹಿತೆಗಳಾಗಿ ಮಾರ್ಪಡಿಸಿರುವ ಕ್ರಮವನ್ನು ಕೈ ಬಿಡಬೇಕು ಎಂದು ಆಗ್ರಹಿಸಿದ್ದಾರೆ.

ಪ್ರತಿಭಟನೆ ಸಮಯದಲ್ಲಿ ಹುತಾತ್ಮರಾದ 700ಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ಪರಿಹಾರ ನೀಡಬೇಕು. ಲಖಿಂಪುರ್ ಖೇರಿಯಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವರ ಮಗನ ನೇತೃತ್ವದಲ್ಲಿ ನಡೆದ ಹಿಂಸಾತ್ಮಕ ದೌರ್ಜನ್ಯ, ಸಾವು, ರೈತರ ಮೇಲಿನ ದೌರ್ಜನ್ಯಗಳ ಹೊಣೆ ಹೊತ್ತು ಪ್ರಧಾನಿ ನರೇಂದ್ರ ಮೋದಿ ಅವರು ಅನ್ನದಾತರ ಕ್ಷಮೆ ಕೇಳಬೇಕು. ಕೇಂದ್ರ ಸಚಿವರ ರಾಜೀನಾಮೆ ಪಡೆಯಬೇಕು. ಡಾ.ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT