ಗುರುವಾರ , ಜೂನ್ 30, 2022
23 °C
ಚಾನೆಲ್‌ಗೆ ಸೇರುತ್ತಿರುವ ಕಲುಷಿತ ನೀರು

ಹೇಮಾವತಿ ನಾಲೆಗೆ ತ್ಯಾಜ್ಯ ನೀರು: ಜನರಿಗೆ ಆತಂಕ

ಸುಪ್ರತೀಕ್.ಎಚ್.ಬಿ. Updated:

ಅಕ್ಷರ ಗಾತ್ರ : | |

Prajavani

ತಿಪಟೂರು: ಹೇಮಾವತಿ ನಾಲೆ ನೀರಿಗೆ ತಿಪಟೂರಿನ ಒಳಚರಂಡಿ (ಯುಜಿಡಿ) ಪೈಪ್‍ಲೈನ್‍ನ ಕಲುಷಿತ ನೀರು ಸೇರುತ್ತಿದ್ದು, ಜಿಲ್ಲೆಯ ಜನತೆಯಲ್ಲಿ ಆತಂಕ ಮನೆ ಮಾಡಿದೆ.

ನಗರದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಹಾದು ಹೋಗಿರುವ ಒಳಚರಂಡಿ ಯೋಜನೆಯ ಪೈಪ್‍ಲೈನ್ ಮಳೆ ಬಂದಾಗಲೆಲ್ಲಾ ಬಾಯಿ ತೆರೆದುಕೊಂಡು ರಸ್ತೆಯುದ್ದಕ್ಕೂ ಹರಿಯುತ್ತಾ ಸಾಗುತ್ತದೆ.

ಯುಜಿಡಿ ಮೊದಲ ಹಂತದಲ್ಲಿ ಈಡೇನಹಳ್ಳಿಯ ಬಳಿಯಲ್ಲಿ ಸ್ಥಾಪಿಸಲಾಗಿರುವ ಜಾಕ್‍ವೆಲ್ ಸ್ಥಾವರದಿಂದ ಸಮರ್ಪಕವಾಗಿ ನೀರನ್ನು ಪಂಪ್ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಹೆಚ್ಚಿನ ತ್ಯಾಜ್ಯ ನೀರು ಈಡೇನಹಳ್ಳಿ ರುದ್ರಭೂಮಿ ಎದುರಿನ ಸಣ್ಣ ಹಳ್ಳದ ಮೂಲಕ ರೈಲ್ವೆ ಲೈನ್ ಪಕ್ಕದಲ್ಲಿಯೇ ಹಾದು ಹೋಗುತ್ತದೆ. ಹಿಂಡಿಸ್ಕೆರೆ ಮತ್ತು ಹುಲ್ಲುಕಟ್ಟೆಯ ಮಧ್ಯೆ ಈಚನೂರು ಕೆರೆಗೆ ನೀರು ಪಂಪ್ ಮಾಡುವ ದೂರದಿಂದ 250 ಮೀಟರ್ ದೂರದಲ್ಲಿ ತೋಟಗಳ ಮೂಲಕವಾಗಿ ಹಾದು ಬಂದ ತ್ಯಾಜ್ಯ ನೀರು ಹೇಮಾವತಿ ನಾಲೆಗೆ ಸೇರುತ್ತಿದೆ.

ತಿಪಟೂರು ನಗರದಲ್ಲಿ ಒಂದು ಲಕ್ಷ ಜನಸಂಖ್ಯೆಯನ್ನು ಗಮನದಲ್ಲಿ ಇಟ್ಟುಕೊಂಡು, ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಉದ್ದೇಶದಿಂದಲೇ ₹65 ಕೋಟಿ ವೆಚ್ಚದಲ್ಲಿ ಮೂರು ಹಂತದಲ್ಲಿ ಯುಜಿಡಿ ಯೋಜನೆಯನ್ನು ರೂಪಿಸಲಾಗಿದೆ. ನಗರದಲ್ಲಿ ನಿತ್ಯ ಸಂಗ್ರಹವಾಗುವ 3.5 ಎಂಎಲ್‌ಡಿ (35 ಲಕ್ಷ ಲೀಟರ್) ನೀರನ್ನು ಸಂಸ್ಕರಿಸುವ ಸಲುವಾಗಿ ನಗರದ ಹೊರವಲಯದ ಕಲ್ಲೇಗೌಡನಪಾಳ್ಯದ ಬಳಿಯಿರುವ ಹೂವಿನ ಕಟ್ಟೆ ಬಳಿಯಲ್ಲಿ ಯುಜಿಡಿ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಸ್ಥಾಪಿಸಲಾಗಿದೆ.

ಮೊದಲ ಹಂತದಲ್ಲಿ ಈಡೇನಹಳ್ಳಿ ಬಳಿರುವ ಜಾಕ್‍ವೆಲ್‍ನ ಬಳಿಯಲ್ಲಿ ಕಠಿಣ ತ್ಯಾಜ್ಯವನ್ನು ಬೇರ್ಪಡಿಸಿ ಉಳಿದ ನೀರನ್ನು ಕಲ್ಲೇಗೌಡನಪಾಳ್ಯದ ಬಳಿ ಇರುವ ಯುಜಿಡಿ ಸಂಸ್ಕರಣಾ ಘಟಕಕ್ಕೆ ಪಂಪ್ ಮಾಡಲಾಗುತ್ತದೆ. ನಂತರದಲ್ಲಿ ಹಂತ ಹಂತವಾಗಿ ಸಂಸ್ಕರಣೆ ಮಾಡಿ ಕುಡಿಯಲು ಹೊರತುಪಡಿಸಿ ಉಳಿದೆಲ್ಲಾ ಕಾರ್ಯಗಳಿಗೆ ಉಪಯೋಗಿಸಲು ಯೋಗ್ಯವಾಗುವ ಸಾಧ್ಯತೆಯಿರುವ ನೀರನ್ನು ಹೂವಿನಕಟ್ಟೆಗೆ ಬಿಡಲಾಗುತ್ತದೆ.

ಸಮಸ್ಯೆಗೆ ಮೂಲ ಕಾರಣವೇನು?: ನಗರದ ಹಾಸನ ವೃತ್ತದಿಂದ ರಾಜಕಾಲುವೆಯ ಮೂಲಕ ಹರಿದು ಬರುವ ನೀರು ನೇರವಾಗಿ ಬಂದು ತಿಪಟೂರು ಅಮಾನಿಕೆರೆಗೆ ಸೇರುತ್ತಿತ್ತು. ಆದರೆ ಕೆರೆ ಸೌಂದರೀಕರಣದ ಸಲುವಾಗಿ ರಾಜಕಾಲುವೆಯ ನೀರನ್ನು ಕೆಎಸ್‌ಆರ್‌ಟಿಸಿ ಪಕ್ಕದಲ್ಲಿರುವ ಮ್ಯಾನ್ ಹೋಲ್‍ನ್ನು ದೊಡ್ಡ ರಂಧ್ರ ಮಾಡಿ ಹರಿಸಲಾಗುತ್ತಿದೆ.

ಅಲ್ಲದೇ ದೋಬಿಘಾಟ್ ಬಳಿಯಲ್ಲಿಗೆ ಬರುವ ಕೆಲ ಚರಂಡಿ ನೀರು, ಮಳೆಯ ನೀರು ಸಹ ಮ್ಯಾನ್‍ಹೋಲ್ ಮೂಲಕವೇ ಯುಜಿಡಿ ಸೇರುತ್ತಿದೆ. ಮಳೆ ಬಂದಾಗ ಈ ರಾಜಕಾಲುವೆಗಳ ಮೂಲಕ ಸುಮಾರು 12 ರಿಂದ 15 ಎಂಎಲ್‌ಡಿ ನೀರು (120 ರಿಂದ 150 ಲಕ್ಷ ಲೀಟರ್) ಮಳೆಯ ನೀರು ಯುಜಿಡಿ ನೀರಿನೊಂದಿಗೆ ಸೇರುತ್ತಿದೆ. ಹೆಚ್ಚಿನ ಪ್ರಮಾಣ ನೀರು ಯುಜಿಡಿಗೆ ಬರುವುದರಿಂದ ಕೋಡಿ ಸರ್ಕಲ್ ಮುಂಭಾಗದ ಮ್ಯಾನ್‍ಹೊಲ್ ತೆಗೆದುಕೊಂಡು ನೀರು ಹರಿಯುತ್ತಾ ಸಾಗಿ ಈಡೇನಹಳ್ಳಿ ರುದ್ರಭೂಮಿಯ ಪಕ್ಕದ ಸಣ್ಣ ಹಳ್ಳದ ತಗ್ಗಿನ ಪ್ರದೇಶಕ್ಕೆ ಹರಿಯುತ್ತಿದೆ. ಅದೇ ಮಳೆ ಮತ್ತು ಯುಜಿಡಿ ನೀರು ಇದೀಗ ಹೇಮಾವತಿ ನಾಲೆಯನ್ನು ಸೇರುತ್ತಿದೆ.

ಕೊರೊನಾ ಭೀತಿ: ಜಿಲ್ಲೆಯಾದ್ಯಂತ ಕೊರೊನಾ ಸೋಂಕಿನ ತೀವ್ರತೆ ಹೆಚ್ಚಾಗಿದ್ದು ತಿಪಟೂರು ನಗರದಲ್ಲಿಯೂ ಹೆಚ್ಚಾಗಿದೆ. ಕೊರೊನಾ ಸೋಂಕಿನಿಂದ ಹೋಂ ಕ್ವಾರಂಟೈನ್ ಆಗಿರುವವರ ಸಂಖ್ಯೆ ಹೆಚ್ಚಾಗಿದೆ. ಮನೆಗಳಲ್ಲಿ ಸ್ನಾನಕ್ಕೆ ಇತರೆ ಕಾರ್ಯಗಳಿಗೆ ಬಳಸಿದ ನೀರು ಈ ಯುಜಿಡಿ ಮುಖಾಂತರವೇ ಹರಿಯುತ್ತದೆ.

ಸದ್ಯ ಈ ನೀರು ತಿಪಟೂರು ನಗರಕ್ಕೆ ಪಂಪ್ ಆಗುವಲ್ಲಿಂದ 250 ಮೀಟರ್ ಮುಂಭಾಗದಲ್ಲಿ ಸೇರುತ್ತಿದೆ. ಜಿಲ್ಲೆಯೇ ಹೇಮೆಯ ಮೇಲೆ ಅವಲಂಬಿತವಾಗಿದ್ದು, ನೀರು ಬಳಸಲು ಆತಂಕ ಸೃಷ್ಟಿಯಾಗಿದೆ. ಇನ್ನೂ ಎರಡು ದಿನಗಳ ಕಾಲ ನೀರು ಹರಿಯುವುದನ್ನು ತಡೆಯಲು ಅಸಾಧ್ಯ ಎಂದು ಅಧಿಕಾರಿಗಳ ಮೂಲದಿಂದ ಮಾಹಿತಿ ದೊರೆತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು