ಬುಧವಾರ, ಮೇ 18, 2022
24 °C

ಕೋವಿಡ್‌ ಲಸಿಕೆ ಪಡೆಯಲು ನಕಾರ: ನೀರು, ವಿದ್ಯುತ್‌ ಸ್ಥಗಿತ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಾವಗಡ (ತುಮಕೂರು): ಕೋವಿಡ್‌ ಲಸಿಕೆ ಪಡೆಯಲು ಹಿಂಜರಿದ ಕನುಮಲಚೆರುವು ಬಡಾವಣೆಯ 40ಕ್ಕೂ ಹೆಚ್ಚಿನ ಮನೆಗಳಿಗೆ ಅಧಿಕಾರಿಗಳು ಕುಡಿಯುವ ನೀರು ಮತ್ತು ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದಾರೆ. 

ಕೂಲಿಕಾರ್ಮಿಕರು, ಪರಿಶಿಷ್ಟ ಜಾತಿಯವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಬಡಾವಣೆ 20 ದಿನಗಳಿಂದ ಕತ್ತಲಲ್ಲಿ ಮುಳುಗಿದೆ. ಕುಡಿಯುವ ನೀರಿಲ್ಲದೆ ಪರದಾಡುತ್ತಿರುವ ನಿವಾಸಿಗಳು ಪುರಸಭೆ ಮುಂಭಾಗ ಪ್ರತಿಭಟನೆಗೆ ಮುಂದಾಗಿದ್ದಾರೆ. 

‘20 ದಿನದ ಹಿಂದೆ ಅಧಿಕಾರಿಗಳ ತಂಡ ಲಸಿಕೆ ಹಾಕಲು ಬಂದಿತ್ತು.ಸಮಯ ನೀಡುವಂತೆ ಕೋರಲಾಗಿತ್ತು. ಪುರಸಭೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಏಕಾಏಕಿ ನೀರು ಮತ್ತು ವಿದ್ಯುತ್ ಸಂಪರ್ಕ ಕಡಿತಗೊಳಿಸಿ
ದ್ದಾರೆ’ ಎಂದು ಬಡಾವಣೆ ನಿವಾಸಿಗಳು ಆರೋಪಿಸಿದ್ದಾರೆ.  

‘ಕೂಲಿ ಮಾಡಿ ಜೀವನ ಸಾಗಿಸಬೇಕು. ಶನಿವಾರ ಲಸಿಕೆ ಹಾಕಿಸಿಕೊಂಡು ಭಾನುವಾರ ಕೆಲಸಕ್ಕೆ ರಜೆ ಹಾಕುತ್ತೇವೆ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಲಾಗಿತ್ತು. ಆದರೂ ನೀರು, ವಿದ್ಯುತ್‌ ಸ್ಥಗಿತಗೊಳಿಸಿದ್ದಾರೆ’ ಎಂದರು.

‘ಕೋವಿಡ್‌ ಲಸಿಕೆಗೂ, ನೀರಿನ ಸಂಪರ್ಕ ಕಡಿತಕ್ಕೂ ಸಂಬಂಧವಿಲ್ಲ. ಡೆಪಾಸಿಟ್ ಪಾವತಿಸದೆ ನೀರಿನ ಸಂಪರ್ಕ ಪಡೆದಿರುವ ಕಾರಣ ಪೈಪ್‌ಲೈನ್ ಸಂಪರ್ಕ ಕಡಿತಗೊಳಿಸಲಾಗಿದೆ. ಡೆಪಾಸಿಟ್ ಹಣ ಪಾವತಿಸಿದ ನಂತರ ಸಂಪರ್ಕ ಕಲ್ಪಿಸಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಬಿ.ಸಿ. ಅರ್ಚನಾ ಸ್ಪಷ್ಟಪಡಿಸಿದ್ದಾರೆ.

ವಿದ್ಯುತ್‌ ಅಥವಾ ನೀರಿನ ಸಂಪರ್ಕ ಕಡಿತಗೊಳಿಸಿದ್ದರೆ ಪುನಃ ಸಂಪರ್ಕ ಕಲ್ಪಿಸಲಾಗುವುದು ಎಂದು ಮಧುಗಿರಿ
ಉಪ ವಿಭಾಗಾಧಿಕಾರಿ ಸೋಮಪ್ಪ ಕಡಕೋಳ ಭರವಸೆ ನೀಡಿದ್ದಾರೆ. ‘ಬಡಾವಣೆಗೆ ಬೆಸ್ಕಾಂ ಸಿಬ್ಬಂದಿ
ಯನ್ನು ತಹಶೀಲ್ದಾರ್ ಕರೆದೊಯ್ದಿದ್ದರು. ಅಂದು ಸಂಜೆಯೇ ಮತ್ತೆ ಸಂಪರ್ಕ ನೀಡಲಾಗಿದೆ’ ಎಂದು ಬೆಸ್ಕಾಂ ಸಹಾಯಕ ಎಂಜಿನಿಯರ್‌ ಅಂಜಿಬಾಬು ತಿಳಿಸಿದರು.

‘ಜನರ ಮನವೊಲಿಸಬೇಕು’

ಲಸಿಕೆ ಹಾಕಿಸಿಕೊಳ್ಳದಿದ್ದರೆ ವಿದ್ಯುತ್‌ ಅಥವಾ ನೀರಿನ ಸಂಪರ್ಕ ಕಡಿತಗೊಳಿಸುವಂತಿಲ್ಲ. ಒಂದು ವೇಳೆ ಹಾಗೇನಾದರೂ ಮಾಡಿದ್ದರೆ ಅದು ತಪ್ಪು. ಪುನಃ ಸಂಪರ್ಕ ಕಲ್ಪಿಸಲಾಗುವುದು. ಕೋವಿಡ್‌ ಲಸಿಕೆ ಪಡೆಯಲು ಜನರು ಹಿಂಜರಿಯುತ್ತಿದ್ದಾರೆ. ಅವರಿಗೆ ಭಯ ಮೂಡಿಸಿ, ಲಸಿಕೆ ಕೊಡಿಸಲು ಅಧಿಕಾರಿಗಳು ಈ ರೀತಿ ಮಾಡಿರಬಹುದು. ಅದು ಸರಿಯಾದ ಕ್ರಮವಲ್ಲ. ಜನರ ಮನವೊಲಿಸಿ, ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಮಧುಗಿರಿ ಉಪ ವಿಭಾಗಾಧಿಕಾರಿ ಸೋಮಪ್ಪ ಕಡಕೋಳ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು