ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | ಕೊಡಚಾದ್ರಿಗೆ ಕಾಂಕ್ರಿಟ್‌ ರಸ್ತೆ ಪ್ರಸ್ತಾವ ತಿರಸ್ಕೃತ

ಈಗಿರುವ ಮಣ್ಣಿನ ರಸ್ತೆಯೇ ಇರಲಿ; ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿ ಮಹತ್ವದ ನಿರ್ಧಾರ
Last Updated 29 ಏಪ್ರಿಲ್ 2022, 13:42 IST
ಅಕ್ಷರ ಗಾತ್ರ

ಉಡುಪಿ: ಕೊಡಚಾದ್ರಿ ಬೆಟ್ಟಕ್ಕೆ ಸಿಮೆಂಟ್ ರಸ್ತೆ ನಿರ್ಮಿಸುವ ಪ್ರಸ್ತಾವವನ್ನು ತಿರಸ್ಕರಿಸಿ ಮಣ್ಣಿನ ರಸ್ತೆಯನ್ನೇ ಮುಂದುವರಿಸಲು ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿ ಈಚೆಗೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಪ್ರವಾಸಿಗರು ಹಾಗೂ ಚಾರಣಿಗರ ಅನುಕೂಲಕ್ಕಾಗಿ ಕೊಡಚಾದ್ರಿ ಬೆಟ್ಟದ ಮೇಲಿನ ವೀಕ್ಷಣಾ ಸ್ಥಳ ತಲುಪಲು ಕಟ್ಟಿನಹೊಳೆಯಿಂದ ಕೊಡಚಾದ್ರಿ ಬೆಟ್ಟ ತಲುಪಲು ಈಗಿರುವ ಮಣ್ಣಿನ ರಸ್ತೆಯನ್ನು ಸಿಮೆಂಟ್ ರಸ್ತೆಯನ್ನಾಗಿ ಉನ್ನತೀಕರಿಸುಲು ಅನುಮತಿ ಕೋರಿ ರಾಜ್ಯ ವನ್ಯಜೀವಿ ಮಂಡಳಿಯು ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿಗೆ ಪ್ರಸ್ತಾವ ಕಳುಹಿಸಿತ್ತು.

ಪ್ರಸ್ತಾವವನ್ನು ನಿರಾಕರಿಸಿರುವ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿಯು ಈಗಿರುವ ಮಣ್ಣಿನ ರಸ್ತೆಯನ್ನೇ ನಿರ್ವಹಣೆ ಮಾಡಲು ಸೂಚಿಸಿದೆ. ರೋಪ್ ವೇ ನಿರ್ಮಾಣದ ಕಾರ್ಯಸಾಧ್ಯತೆ ಬಗ್ಗೆ ಪರಿಶೀಲಿಸಲು ಸರ್ಕಾರಕ್ಕೆ ತಿಳಿಸಿದೆ. ಮಾರ್ಚ್ 25 ರಂದು ನಡೆದ ಸ್ಥಾಯಿ ಸಮಿತಿಯ 67ನೇ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ ತಿಳಿಸಿದ್ದಾರೆ.

ಪ್ರಸ್ತಾವದಲ್ಲಿದ್ದ ಅಂಶಗಳು:ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಕುದುರೆಮುಖ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿ ಬರುವ ಮೂಕಾಂಬಿಕಾ ಅಭಯಾರಣ್ಯದಲ್ಲಿ 4.5 ಹೆಕ್ಟೇರ್ ಹಾಗೂ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಸಾಗರ ಪ್ರಾದೇಶಿಕ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿರುವ ಮೂಕಾಂಬಿಕಾ ಅಭಯಾರಣ್ಯದ ಪರಿಸರ ಸೂಕ್ಷ್ಮ ವಲಯದಲ್ಲಿ 0.99 ಹೆಕ್ಟೇರ್ ಸೇರಿ 5.5 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಪರಿವರ್ತನೆ ಕೋರಿಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತವು ಅರ್ಜಿ ಸಲ್ಲಿಸಿತ್ತು.

ಕೊಟ್ಟ ಕಾರಣಗಳು ಏನು:ಕಾಂಕ್ರೀಟ್‌ ರಸ್ತೆ ನಿರ್ಮಾಣವಾದರೆ ಕೊಡಚಾದ್ರಿಯಲ್ಲಿ ಈಗಾಗಲೇ ಇರುವ ರಾಜ್ಯ ಹೆದ್ದಾರಿ, ರೆಸ್ಟೋರೆಂಟ್‌ಗಳು, ವಸತಿಗೃಹಗಳನ್ನು ಸಂಪರ್ಕಿಸಲು ಪ್ರವಾಸಿಗರಿಗೆ, ಚಾರಣಿಗರು ಹಾಗೂ ಭಕ್ತರಿಗೆ ಅನುಕೂಲವಾಗಲಿದೆ. ಅಲ್ಲದೆ, ಕೊಡಚಾದ್ರಿ ಪ್ರದೇಶ ಉತ್ತಮ ಪ್ರವಾಸೋದ್ಯಮ ಸ್ಥಳವಾಗಿ ರೂಪುಗೊಳ್ಳಲು ಸಹಕಾರಿಯಾಗಲಿದೆ ಎಂದು ಪ್ರಸ್ತಾವದಲ್ಲಿ ಕಾರಣಗಳನ್ನು ನೀಡಲಾಗಿತ್ತು.

ನಗರವಾಸಿಗಳಿಗೆ ಪ್ರಶಾಂತ ಸ್ಥಳವಾಗಿಯೂ ಕೊಡಚಾದ್ರಿ ಅಭಿವೃದ್ಧಿಯಾಗಲಿದೆ ಎಂಬ ಕಾರಣವನ್ನೂ ನೀಡಿ ಯೋಜನೆಯನ್ನು ಅರಣ್ಯ ಪ್ರದೇಶದಲ್ಲಿ ಕಾರ್ಯಗತಗೊಳಿಸುವುದು ಅಗತ್ಯ ಎಂಬ ವಾದ ಮುಂದಿರಿಸಿತ್ತು. ಈ ಸಂಬಂಧ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿಯು 2013ರಲ್ಲಿ ತಜ್ಞರ ಉಪ ಸಮಿತಿ ರಚಿಸಿ ಯೋಜನೆ ಕಾರ್ಯಗತಗೊಳಿಸುವ ಸಂಬಂಧ ಪರಿಶೀಲಿಸುವಂತೆ ಸೂಚನೆ ನೀಡಿತ್ತು.

ಅದರಂತೆ, ಅಭಯಾರಣ್ಯ, ರಾಷ್ಟ್ರೀಯ ಉದ್ಯಾನ, ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಈಗಿರುವ ರಸ್ತೆಗಳನ್ನು ಉನ್ನತೀಕರಿಸಬಾರದು ಎಂದು ಉಪ ಸಮಿತಿಯು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಗೆ ಶಿಫಾರಸು ಸಲ್ಲಿಸಿತ್ತು. ಅಂತಿಮವಾಗಿ ಶಿಫಾರಸು ಒಪ್ಪಿಕೊಂಡಿರುವ ಸ್ಥಾಯಿ ಸಮಿತಿಯು ಕೊಡಚಾದ್ರಿಯ ಮಣ್ಣಿನ ರಸ್ತೆಯನ್ನು ಸಿಮೆಂಟ್ ಕಾಂಕ್ರೀಟ್ ರಸ್ತೆಯನ್ನಾಗಿ ಪರಿವರ್ತಿಸುವ ಪ್ರಸ್ತಾವವನ್ನು ನಿರಾಕರಿಸಿದೆ.

ಒಂದುವೇಳೆ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದರೆ ದೇಶದ ಇತರೆ ಸಂರಕ್ಷಿತ ಪ್ರದೇಶಗಳಲ್ಲೂ ಪ್ರವಾಸಿಗರ ಅನುಕೂಲಕ್ಕಾಗಿ ರಸ್ತೆ ಅಭಿವೃದ್ಧಿ ಪ್ರಸ್ತಾವಗಳಿಗೆ ಒಪ್ಪಿಗೆ ನೀಡಬೇಕಾಗುತ್ತದೆ ಎಂದು ಬಲವಾದ ಕಾರಣವನ್ನೂ ನೀಡಿದೆ.

ನೈಸರ್ಗಿಕ ಆವಾಸಸ್ಥಾನಗಳನ್ನು ಹಾಳುಗೆಡುವ ಯೋಜನೆಗಳ ಕುರಿತು ವನ್ಯಜೀವಿ ಕಾರ್ಯಕರ್ತರು ಹೋರಾಟ ನಡೆಸಿ ಕೊಡಚಾದ್ರಿ ಬೆಟ್ಟಕ್ಕೆ ಸಿಮೆಂಟ್‌ ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ರಾಷ್ಟೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಗೆ ಒತ್ತಾಯಿಸಿದ್ದರು.

ಮಂಡಳಿಯ ನಿರ್ಧಾರ ಸ್ವಾಗತಾರ್ಹ
ಕೊಡಚಾದ್ರಿಯಂತಹ ನೈಸರ್ಗಿಕ ತಾಣಗಳನ್ನು ನೈಸರ್ಗಿಕವಾಗಿಯೇ ವೀಕ್ಷಿಸಬೇಕೇ ಹೊರತು, ಕಾಂಕ್ರೀಟಿಕರಣ ಸಲ್ಲದು. ದೇಶದ ಹಲವು ಕಡೆಗಳಲ್ಲಿ ಹಾಗೂ ರಾಜ್ಯದಲ್ಲೂ ಅಭಯಾರಣ್ಯ, ರಾಷ್ಟ್ರೀಯ ಉದ್ಯಾನ, ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಗ್ರಾಮಸ್ಥರಿಗೆ ರಸ್ತೆಗಳ ಅತ್ಯವಶ್ಯಕತೆಯಿದ್ದರೂ ವನ್ಯಜೀವಿ ಸಂರಕ್ಷಣೆ ಕಾರಣ ಕೊಟ್ಟು ರಸ್ತೆ ಉನ್ನತೀಕರಣಕ್ಕೆ ಅವಕಾಶ ನೀಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ರಸ್ತೆ ಅಭಿವೃದ್ಧಿಗೆ ಅವಕಾಶ ಮಾಡಿಕೊಡಲು ರಾಜ್ಯ ಸರ್ಕಾರ ಮಾಡಿದ್ದ ಶಿಫಾರಸ್ಸು ಸರಿಯಾಗಿರಲಿಲ್ಲ. ಸರ್ಕಾರದ ಪ್ರಸ್ತಾವಕ್ಕೆ ಒಪ್ಪಿಗೆ ಸಿಕ್ಕಿದ್ದರೆ ಪಶ್ಚಿಮ ಘಟ್ಟಗಳ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗಿರುವ ಕೊಡಚಾದ್ರಿಯಂತಹ ಪ್ರದೇಶದಲ್ಲಿ ಭೂಕುಸಿತಕ್ಕೆ ಕಾರಣವಾಗುವ ಸಾಧ್ಯತೆಗಳು ಹೆಚ್ಚಾಗುತ್ತಿತ್ತು. ಅಳಿವಿನಂಚಿನಲ್ಲಿರುವ ಹಾಗೂ ಬೆರಣಿಕೆಯಷ್ಟಿರುವ ಸಿಂಗಳೀಕದಂತಹ ವನ್ಯಜೀವಿಗಳ ಆವಾಸಸ್ಥಾನಗಳನ್ನು ಸಂರಕ್ಷಿಸಲು ಸಿಮೆಂಟ್ ರಸ್ತೆ ಪ್ರಸ್ತಾವವನ್ನು ತಿರಸ್ಕರಿಸಿರುವುದು ಸರಿಯಾದ ಕ್ರಮ.
–ಗಿರಿಧರ ಕುಲಕರ್ಣಿ, ವನ್ಯಜೀವಿ ಸಂರಕ್ಷಣಾವಾದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT