ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | ಅಪಾಯಕಾರಿ ತಿರುವುಗಳಿರುವ ರಾಷ್ಟ್ರೀಯ ಹೆದ್ದಾರಿ; ಸಾವಿಗೆ ರಹದಾರಿ

ಅಪಘಾತಗಳಿಗೆ ಆಹ್ವಾನ ನೀಡುತ್ತಿರುವ ಬ್ಲಾಕ್‌ ಸ್ಪಾಟ್‌
Last Updated 5 ಮೇ 2022, 19:30 IST
ಅಕ್ಷರ ಗಾತ್ರ

ಪಡುಬಿದ್ರಿ (ಉಡುಪಿ): ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ಹಾಗೂ 169 ಎ ವ್ಯಾಪ್ತಿಯಲ್ಲಿ ಅಪಾಯಕಾರಿ ತಿರುವುಗಳು ವಾಹನ ಸವಾರರ ಪಾಲಿಗೆ ಕಂಟಕವಾಗಿ ಕಾಡುತ್ತಿವೆ. ಎರಡೂ ಹೆದ್ದಾರಿ ವ್ಯಾಪ್ತಿಯಲ್ಲಿ ಅಪಘಾತಗಳು ಸಂಭವಿಸಬಹುದಾದ 33 ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಲಾಗಿದೆ.

ಪ್ರತಿಬಾರಿಯ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಬ್ಲಾಕ್‌ಸ್ಪಾಟ್‌ಗಳ ತೆರವಿಗೆ ಹಾಗೂ ಅಪಘಾತಗಳು ನಡೆಯದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಚರ್ಚೆ ನಡೆದರೂ ಇದುವರೆಗೂ ಜಿಲ್ಲೆ ಬ್ಲಾಕ್‌ಸ್ಪಾಟ್‌ ಮುಕ್ತವಾಗಿಲ್ಲ.

ಅಪಾಯಕಾರಿ ತಿರುವುಗಳು:ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ಮಾಡುವಾಗ ಅಪಾಯಕಾರಿ ತಿರುವುಗಳು ಇರದಂತೆ ನೇರ ಹೆದ್ದಾರಿ ನಿರ್ಮಾಣ ಮಾಡುವ ಭರವಸೆ ನೀಡಲಾಗಿತ್ತು. ಆದರೆ, ಹೆದ್ದಾರಿಯನ್ನು ನೇರಗೊಳಿಸುವ ಬದಲು ಎರ್ಮಾಳು ಕಲ್ಸಂಕ, ಪಡುಬಿದ್ರಿ ಪೇಟೆ, ಹೆಜಮಾಡಿ, ಉಚ್ಚಿಲ, ಮೂಳೂರು, ಕಾಪುವಿನಲ್ಲಿ ತಿರುವುಗಳನ್ನು ನಿರ್ಮಿಸಲಾಗಿದ್ದು, ಅಪಘಾತಕ್ಕೆ ಆಹ್ವಾನ ನೀಡಿದಂತಾಗಿದೆ.

ಹೆದ್ದಾರಿ ವ್ಯಾಪ್ತಿಯಲ್ಲಿ ಭೂಮಿಯನ್ನು ಹೊಂದಿರುವ ಕೆಲವು ಪ್ರಭಾವಿಗಳು ಅಧಿಕಾರಿಗಳ ಹಾಗೂ ರಾಜಕಾರಣಿಗಳ ಮೇಲೆ ಪ್ರಭಾವ ಬಳಸಿದ ಪರಿಣಾಮ ಹಲವು ಕಡೆಗಳಲ್ಲಿ ನೇರ ಹೆದ್ದಾರಿ ಬದಲಾಗಿ ಅಪಾಯಕಾರಿ ತಿರುವುಗಳನ್ನು ನಿರ್ಮಾಣಮಾಡಲಾಗಿದೆ ಎಂದು ಆರೋಪಿಸುತ್ತಾರೆ ಹೋರಾಟಗಾರ ಶೇಖರ್ ಹೆಜಮಾಡಿ.

ಅಪಾಯಕಾರಿ ತಿರುವುಗಳ ಕಾರಣ ಉಚ್ಚಿಲ ಜಂಕ್ಷನ್ ಅಪಘಾತಗಳ ಕೇಂದ್ರವಾಗಿ ಗುರುತಿಸಲ್ಪಟ್ಟಿದೆ. ಚತುಷ್ಪಥ ಹೆದ್ದಾರಿ ಕಾಮಗಾರಿ ವೇಳೆ ತೆರೆಯಲಾಗಿದ್ದ ಮೂಳೂರು ಮತ್ತು ಎರ್ಮಾಳ್ ಜಂಕ್ಷನ್‌ (ಡೈವರ್ಷನ್) ಹಾಗೂ ಉಚ್ಚಿಲ-ಪಣಿಯೂರು ರಸ್ತೆ ಜೊತೆ ಸೇರುವ ಜಂಕ್ಷನ್‌ನಲ್ಲಿ ನಿರ್ಮಿಸಿರುವ ಡೈವರ್ಷನ್‌ ವಾಹನ ಸವಾರರಿಗೆ ಅಪಾಯಕಾರಿಯಾಗಿ ಕಾಡುತ್ತಿದೆ. ಈ ಭಾಗದಲ್ಲಿ ನಾಲ್ಕೂ ದಿಕ್ಕುಗಳಿಂದ ವಾಹನಗಳು ಏಕಕಾಲಕ್ಕೆ ಬಂದು ಹೆದ್ದಾರಿ ಪ್ರವೇಶಿಸುತ್ತಿರುವುದರಿಂದ ನಿರಂತರ ಅಪಘಾತಗಳು ಸಂಭವಿಸುತ್ತಿವೆ.

ಸಾವಿನ ಜಂಕ್ಷನ್‌:ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಜಂಕ್ಷನ್‌ ಆಸುಪಾಸಿನಲ್ಲಿ 2019ರಿಂದ 2021ರವರೆಗೆ 20 ಅಪಘಾತಗಳು ಸಂಭವಿಸಿದ್ದು 8 ಮಂದಿ ಮೃತಪಟ್ಟಿದ್ದಾರೆ. 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 32 ವಾಹನಗಳು ಜಖಂಗೊಂಡಿವೆ. ಲಾಕ್‌ಡೌನ್ ಅವಧಿಯಲ್ಲೂ ಅಪಘಾತಗಳು ಸಂಭವಿಸಿರುವುದು ವಿಶೇಷ.

2022ರಲ್ಲಿ 5 ಅಪಘಾತಗಳು ಸಂಭವಿಸಿದ್ದು ಒಬ್ಬರು ಮೃತಪಟ್ಟು ಐವರು ಗಾಯಗೊಂಡಿದ್ದಾರೆ. ಈ ಅಂಕಿ ಅಂಶಗಳು ಉಚ್ಚಿಲ ಜಂಕ್ಷನ್‌ ವ್ಯಾಪ್ತಿಯದ್ದು ಮಾತ್ರ. ಠಾಣೆಯಲ್ಲಿ ದೂರು ದಾಖಲಾಗದ ಅಪಘಾತಗಳ ಸಂಖ್ಯೆ, ರಾಜಿಯಲ್ಲಿ ಇತ್ಯರ್ಥಗೊಂಡ ಪ್ರಕರಣಗಳು ಬಹಳಷ್ಟು ಎನ್ನುತ್ತಾರೆ ಸವಾರರು.

ಉಚ್ಚಿಲ ಜಂಕ್ಷನ್ ಕಾಪು ತಾಲ್ಲೂಕಿನ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದು, ಹಲವು ಊರುಗಳಿಗೆ ಸಂಪರ್ಕ ಬೆಸೆಯುವ ಸೇತುವಾಗಿದೆ. ಎಲ್ಲೂರು, ಪಣಿಯೂರಿನಿಂದ ಉಡುಪಿ ಹಾಗೂ ಮಂಗಳೂರಿಗೆ ತೆರಳುವ ವಾಹನಗಳು ಮತ್ತು ಎರ್ಮಾಳು, ಮೂಳೂರು, ಉಚ್ಚಿಲದಿಂದ ತೆರಳುವ ವಾಹನಗಳು ಹಾಗೂ ಉಚ್ಚಿಲ ಕರಾವಳಿ ಭಾಗದಿಂದ ಉಡುಪಿ ಮತ್ತು ಮಂಗಳೂರಿಗೆ ತೆರಳುವ ವಾಹನಗಳು ಉಚ್ಚಿಲ ಜಂಕ್ಷನ್ ಮೇಲೆ ಸಾಗುವುದರಿಂದ ದಟ್ಟಣೆ ಹೆಚ್ಚಾಗಿ ಅಪಘಾತಗಳು ಹೆಚ್ಚಾಗಿವೆ.

ಉಚ್ಚಿಲ ಜಂಕ್ಷನ್ ತೆರೆಯುವ ಮುನ್ನ ಉಡುಪಿಗೆ, ಮಂಗಳೂರಿಗೆ ತೆರಳುವವರು ಮೂಳೂರು ಅಥವಾ ಎರ್ಮಾಳು ಜಂಕ್ಷನ್‌ ಮೇಲೆ ಅವಲಂಬಿತರಾಗಿದ್ದರು.

ಸರ್ವೀಸ್ ರಸ್ತೆ ವಿಳಂಬ:ಅವೈಜ್ಞಾನಿಕ ಚತುಷ್ಪಥ ಕಾಮಗಾರಿ ಹಾಗೂ ಅಗತ್ಯವಿರುವ ಕಡೆಗಳಲ್ಲಿ ಸರ್ವೀಸ್‌ ರಸ್ತೆ ನಿರ್ಮಾಣ ಮಾಡದ ಪರಿಣಾಮ ಉಚ್ಚಿಲದಲ್ಲಿ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿವೆ. ಸ್ಥಳೀಯಾಡಳಿತ, ರಿಕ್ಷಾ ಚಾಲಕರು ಹಾಗೂ ವಾಹನ ಸವಾರರ ನಿರಂತರ ಒತ್ತಡ, ಪ್ರತಿಭಟನೆಯ ಫಲವಾಗಿ ಉಚ್ಚಿಲದಲ್ಲಿ ಸರ್ವೀಸ್ ರಸ್ತೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ.

ನಾಲ್ಕೈದು ತಿಂಗಳುಗಳಿಂದ ಸರ್ವೀಸ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದರೂ ಪೂರ್ಣಗೊಂಡಿಲ್ಲ. ಕಾಮಗಾರಿ ಮುಗಿದು ಸರ್ವೀಸ್ ರಸ್ತೆಯಲ್ಲಿ ವಾಹನಗಳ ಸಂಚಾರ ಆರಂಭವಾದರೆ ಉಚ್ಚಿಲ ಜಂಕ್ಷನ್‌ನಲ್ಲಿ ಅಪಘಾತಗಳ ಸಂಖ್ಯೆ ಇಳಿಮುಖವಾಗಬಹುದು ಎಂಬ ನಿರೀಕ್ಷೆ ಇದೆ.

ಉರಿಯದ ದೀಪ:ರಾಷ್ಟ್ರೀಯ ಹೆದ್ದಾರಿ 66ರ ಡಿವೈಡರ್‌ಗಳಲ್ಲಿ, ಪಡುಬಿದ್ರಿ ಸೇರಿದಂತೆ ಹಲವು ಕಡೆಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಿದ್ದರೂ ಉರಿಯುತಿಲ್ಲ. ವಿದ್ಯುತ್ ದೀಪಗಳ ದುರಸ್ತಿಗೆ ಪಡುಬಿದ್ರಿ ಪಂಚಾಯಿತಿ ನವಯುಗ ಕಂಪೆನಿಗೆ ಪತ್ರಬರೆದಿದ್ದರೂ ಸ್ಪಂದನೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಇಲ್ಲಿನ ನಾಗರಿಕರು.

ನಿಯಮ ಮೀರಿ ಟೋಲ್‌:ರಾಷ್ಟ್ರೀಯ ಹೆದ್ದಾರಿಯಲ್ಲಿ 60 ಕಿ.ಮೀ.ಗೆ ಒಂದು ಟೋಲ್ ಕೇಂದ್ರ ಮಾತ್ರ ಇರಬೇಕು ಎಂದು ಕೇಂದ್ರ ಸರ್ಕಾರ ಈಚೆಗೆ ನಿಯಮ ಜಾರಿ ಮಾಡಿದ್ದರೂ ಪಾಲನೆಯಾಗಿಲ್ಲ. ತಲಪಾಡಿಯಿಂದ ಸಾಸ್ತಾನದವರೆಗಿನ 120 ಕಿ.ಮೀ.ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಲ್ಕು ಟೋಲ್‌ಗಳು ಕಾರ್ಯಾಚರಿಸುತ್ತಿವೆ.

ಸುರತ್ಕಲ್ ಟೋಲ್ ಹೆಜಮಾಡಿ ಟೋಲ್‌ನೊಂದಿಗೆ ವಿಲೀನ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದರೂ ಆಗಿಲ್ಲ. ಅವೈಜ್ಞಾನಿಕ ಟೋಲ್‌ಗಳನ್ನು ಮುಚ್ಚುವಂತೆ ಹಲವು ಹೋರಾಟಗಳು ನಡೆದಿದ್ದರೂ ಪ್ರಯೋಜನವಾಗಿಲ್ಲ.

ಸರ್ವೀಸ್ ರಸ್ತೆ ನಿರ್ಮಾಣ, ಆಯಾಕಟ್ಟಿನ ಜಾಗದಲ್ಲಿ ಪ್ರಯಾಣಕರಿಗೆ ಸುಸಜ್ಜಿತ ಬಸ್‌ ನಿಲ್ದಾಣ, ಶೌಚಾಲಯ, ಟೋಲ್‌ಗೇಟ್‌ನಲ್ಲಿ ಮೂಲಸೌಕರ್ಯ, ಹಳೆ ಎಂಬಿಸಿ ರಸ್ತೆಯ ಟೋಲ್ ತೆರವು, ಹೆಜಮಾಡಿಯಲ್ಲಿ ಸ್ಕೈವಾಕ್ ನಿರ್ಮಾಣವಾಗಬೇಕು ಎಂಬ ಬೇಡಿಕೆಗಳು ಈಡೇರಬೇಕು ಎನ್ನುತ್ತಾರೆ ಹೋರಾಟಗಾರರು.

ಪಂಚಾಯತಿ ನಿರ್ಣಯಕ್ಕೆ ಬೆಲೆಯೇ ಇಲ್ಲ
ಹೆಜಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನವಯುಗ ಕಂಪೆನಿ ಟೋಲ್ ನಿರ್ಮಿಸಿದ್ದು, ಟೋಲ್‌ನಲ್ಲಿ ಮೂಲಸೌಕರ್ಯಗಳು ಇಲ್ಲ. ಒಳ ಚರಂಡಿ ವ್ಯವಸ್ಥೆ ಸಮರ್ಪಕವಾಗಿ ಮಾಡದೆ ಮುಂದಿನ ಮಳೆಗಾಲದಲ್ಲಿ ಕೃತಕ ನೆರೆ ಉಂಟಾಗುವ ಭೀತಿ ಎದುರಾಗಿದೆ. ಟೋಲ್ ಬಳಿ ಬೃಹತ್ ಟ್ರಕ್, ಲಾರಿಗಳು ನಿಲ್ಲಿಸುವುದರಿಂದ ಇತರ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಸಮಸ್ಯೆಗಳನ್ನು ಪರಿಹರಿಸುವಂತೆ ಗ್ರಾಮ ಪಂಚಾಯಿತಿಯಲ್ಲಿ ನಿರ್ಣಯ ಕೈಗೊಂಡು ಹೆದ್ದಾರಿ ಪ್ರಾಧಿಕಾರ ಹಾಗೂ ನವಯುಗ ಕಂಪೆನಿ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಆದರೆ, ಪಂಚಾಯಿತಿ ನಿರ್ಣಯಕ್ಕೆ ಬೆಲೆಯೇ ಇಲ್ಲದಂತಾಗಿದೆ ಎನ್ನುತ್ತಾರೆ ಹೆಜಮಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಾಣೇಶ್ ಹೆಜಮಾಡಿ.

‘ಮಳೆಗಾಲಕ್ಕೂ ಮುನ್ನ ಸಮಸ್ಯೆ ಬಗೆಹರಿಸಿ’
ಹೆದ್ದಾರಿ ಕಾಮಗಾರಿಗೆ ಭೂಮಿ ಹಸ್ತಾಂತರವಾಗಿದ್ದರೂ ಕೆಲವು ಕಡೆ ಪ್ರಭಾವಿಗಳ ಒತ್ತಡದಿಂದ ರಸ್ತೆ ವಿಸ್ತರಣೆಯಾಗಿಲ್ಲ. ಕಣ್ಣಂಗಾರ್‌ನಲ್ಲಿ ಸರ್ವಿಸ್‌ ರಸ್ತೆ ನಿರ್ಮಿಸಲು ಅಧಿಕಾರಿಗಳು ಒಪ್ಪಿಗೆ ನೀಡಿದರೂ ಕಾಮಗಾರಿ ಆರಂಭವಾಗಿಲ್ಲ. ಜತೆಗೆ, ಪಡಬಿದ್ರಿ ಪೇಟೆಯಲ್ಲಿ ಒಳಚರಂಡಿ ಕಾಮಗಾರಿ ಯೋಜನಾ ಬದ್ಧವಾಗಿ ನಡೆಯದ ಪರಿಣಾಮ ಮಳೆಗಾಲದಲ್ಲಿ ಸಮಸ್ಯೆ ಉಂಟಾಗಲಿದ್ದು, ಕೂಡಲೇ ಸಮಸ್ಯೆ ಬಗೆಹರಿಸಬೇಕು ಎನ್ನುತ್ತಾರೆ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಶೇಖರ್ ಹೆಜಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT