ಶುಕ್ರವಾರ, ಆಗಸ್ಟ್ 19, 2022
22 °C
ಅಂಬಾತನಯ ಮುದ್ರಾಡಿ ಅವರಿಗೆ ಯಕ್ಷಗಾನ ಅಕಾಡೆಮಿಯ ಪಾರ್ಥಿಸುಬ್ಬ ಪ್ರಶಸ್ತಿ

ಯಕ್ಷಗಾನದ ಮೂಲ ಸ್ವರೂಪ, ಸೌಂದರ್ಯ ಕೆಡದಿರಲಿ: ಅಂಬಾತನಯ ಮುದ್ರಾಡಿ

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಹಿರಿಯ ಯಕ್ಷಗಾನ ಕವಿ, ಪ್ರಸಿದ್ಧ ಅರ್ಥದಾರಿ ಹೆಬ್ರಿ ತಾಲ್ಲೂಕಿನ ಮುದ್ರಾಡಿಯ ಅಂಬಾತನಯ ಮುದ್ರಾಡಿ (ಕೇಶವ ಶೆಟ್ಟಿಗಾರ್) ಅವರಿಗೆ 2019ನೇ ಸಾಲಿನ ಪ್ರತಿಷ್ಠಿತ ಪಾರ್ಥಿಸುಬ್ಬ ಪ್ರಶಸ್ತಿ ಬಂದಿದೆ.

ಯಕ್ಷಗಾನ ತಾಳಮದ್ದಳೆಯ ಅರ್ಥದಾರಿಯಾಗಿ ದಶಕಗಳ ಕಾಲ ಯಕ್ಷಸೇವೆ ಸಲ್ಲಿಸಿರುವ ಅಂಬಾತನಯ ಮುದ್ರಾಡಿ ಅವರು ಪ್ರಸಿದ್ಧ ಸಾಹಿತಿ, ಬರಹಗಾರರೂ ಹೌದು. ಯಕ್ಷಗಾನ ಕುರಿತ ಕೃತಿಗಳು, ನಾಟಕಗಳು, ಶಿಶುಗೀತೆಗಳು, ಕವನ ಸಂಕಲನಗಳು ಪ್ರಕಟವಾಗಿವೆ. ಹಲವು ಅಪ್ರಕಟಿತ ಬರಹಗಳು ಇವೆ. 6 ದಶಕಗಳಿಗೂ ಹೆಚ್ಚಿನ ಅವಧಿಯ ಕಲಾಸೇವೆಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಬಂದಿದ್ದು, ಈ ಸಂದರ್ಭ ‘ಪ್ರಜಾವಾಣಿ’ ಜತೆ ಅವರು ಮಾತನಾಡಿದರು.

*ಪ್ರಶಸ್ತಿ ಬಂದಿರುವುದು ಹೇಗನಿಸುತ್ತಿದೆ ?

-ಯಕ್ಷಗಾನ ತಾಳಮದ್ದಳೆ ಕಲೆಗೆ ಸಲ್ಲಿಸಿರುವ ಸೇವೆ ಪರಿಗಣಿಸಿ ಪಾರ್ಥಿಸುಬ್ಬ ಪ್ರಶಸ್ತಿ ನೀಡುತ್ತಿರುವುದು ಖುಷಿಯಾಗಿದೆ. ಈ ಹಿಂದೆಯೂ ಹಲವು ಪ್ರಶಸ್ತಿಗಳು ಬಂದಿವೆ. ಅವುಗಳಲ್ಲಿ ಇದೂ ಒಂದು.

*ಈಚೆಗೆ ಯಕ್ಷಗಾನ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ?

-ಯಕ್ಷಗಾನದ ಮೂಲ ಉದ್ದೇಶ ಪೌರಾಣಿಕ, ಧಾರ್ಮಿಕ ಸಂಸ್ಕೃತಿ ಪ್ರಸಾರವೇ ಹೊರತು; ಮನೋರಂಜನೆ ಪ್ರಧಾನವಲ್ಲ. ಯಕ್ಷಗಾನದ ಮೂಲಸಂಸ್ಕೃತಿಗೆ ಪೆಟ್ಟುಬೀಳಬಾರದು. ಸ್ವಾತಂತ್ರ್ಯ ಚಳವಳಿಯ ಸಂದರ್ಭ ಯಕ್ಷಗಾನ ಬಳಸಿಕೊಂಡಿದ್ದರ ಉದ್ದೇಶ ಸ್ವಾತಂತ್ರ್ಯ ಪಡೆಯುವುದಾಗಿತ್ತು. ಈಗ ಮನೋರಂಜನೆ ಪ್ರಮುಖ ಉದ್ದೇಶವಾಗಿರುವುದು ಸರಿಯಲ್ಲ.

*ಯಕ್ಷಗಾನದಲ್ಲಿ ಪ್ರಯೋಗಗಳು ಹೆಚ್ಚಾಗಿರುವ ಬಗ್ಗೆ ಏನು ಹೇಳುತ್ತೀರಿ ?

-ಪ್ರಚಾರಕ್ಕಾಗಿ, ಜನರಂಜನೆಗಾಗಿ ಯಕ್ಷಗಾನದ ಮೂಲಸ್ವರೂಪ ಬದಲಿಸುವುದು ತಪ್ಪು. ಹಾಗೆ ನೋಡಿದರೆ, ಯಕ್ಷಗಾನ ಮೂಲಉದ್ದೇಶಗಳಿಂದ ದಾರಿ ತಪ್ಪಿ ಬಹಳ ವರ್ಷಗಳಾಗಿವೆ. ಬೆರಳೆಣಿಕೆ ಕಲಾವಿದರು ಮಾತ್ರ ಮೂಲಸ್ವರೂಪ, ಸೌಂದರ್ಯ ಕೆಡದಂತೆ ಪ್ರಯೋಗಗಳಲ್ಲಿ ತೊಡಗಿದ್ದಾರೆ. ಇಂಥವರ ಸಂಖ್ಯೆ ಹೆಚ್ಚಾಗಬೇಕು.

*ಯಕ್ಷಗಾನದ ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ ಏನು ಮಾಡಬೇಕು ?

-ಕಲಾವಿದರಲ್ಲಿ ಅಧ್ಯಯನಶೀಲತೆ ಹೆಚ್ಚಬೇಕು. ಪುರಾಣದ ಓದಿನೊಂದಿಗೆ ಸಂಸ್ಕೃತಿಯ ಕುರಿತು ಕಾಳಜಿ ತೋರುವ ಪ್ರಯತ್ನ ನಡೆಯಬೇಕು. ಪ್ರಯೋಗಗಳು ತಪ್ಪಲ್ಲ ಆದರೆ, ಯಕ್ಷಗಾನೀಯ ಚೌಕಟ್ಟಿನೊಳಗಿರಬೇಕು. 

*ಯುವ ಯಕ್ಷಗಾನ ಕಲಾವಿದರಿಗೆ ನೀಡುವ ಸಲಹೆಗಳು ಏನು ?

-ಯುವ ಕಲಾವಿದರು ಕೇಳಿಸಿಕೊಳ್ಳುವುದನ್ನು ಕಲಿಯಬೇಕು. ರಾಮಾಯಣ, ಮಹಾಭಾರತಗಳ ಅಧ್ಯಯನ ಮಾಡಬೇಕು. ಕನಿಷ್ಠ ಒಂದು ಪ್ರಸಂಗವನ್ನು ಅಮೂಲಾಗ್ರವಾಗಿ ಅಭ್ಯಾಸ ಮಾಡಬೇಕು. ಎಲ್ಲ ಕಲೆಗಳು ಪಾಂಡಿತ್ಯದ ಸೃಷ್ಟಿಯಲ್ಲ; ಪ್ರತಿಭೆಯ ಸೃಷ್ಟಿ ಎಂಬುದನ್ನು ಮರೆಯಬಾರದು.

*ಯಕ್ಷಗಾನದಲ್ಲಿನ ಬದಲಾವಣೆಯ ಬಗ್ಗೆ ನಿಮ್ಮ ಅಭಿಪ್ರಾಯ ?

-ಯಕ್ಷಗಾನದಲ್ಲಿ ಕುಣಿತ, ಮಾತಿನ ಆರ್ಭಟ ಹೆಚ್ಚಾಗಿದ್ದು, ಸಮಷ್ಠಿಯ ಸೌಂದರ್ಯ ಕಡಿಮೆಯಾಗಿದೆ. ಸಿನಿಮಾ ಹಾಡುಗಳಲ್ಲಿ ನಾಲ್ಕೈದು ಹೆಜ್ಜೆ ಕುಣಿದರೆ ಆ ಕ್ಷಣಕ್ಕೆ ಸಂತೋಷವಾಗಬಹುದು. ಆದರೆ, ಹಳ್ಳಿಗಳಲ್ಲಿ ಸುಧೀರ್ಘ ಅವಧಿ ಕುಳಿತು ವೀಕ್ಷಿಸಿದಾಗ ಮಾತ್ರ ಯಕ್ಷಗಾನದ ರುಚಿ ಸವಿಯಲು ಸಾಧ್ಯ.

*ಯಕ್ಷಗಾನ ತಾಳಮದ್ದಳೆಯ ಬಗ್ಗೆ ಆಸಕ್ತಿ ಚಿಗುರಿದ್ದು ಹೇಗೆ ?

-ನಾನು ಯಕ್ಷಗಾನ ವೇಷಧಾರಿಯಲ್ಲ; ಚಿಕ್ಕವನಿರುವಾಗ ತಂದೆ ಬೂಬ ಶೆಟ್ಟಿಗಾರ್ ಅವರ ಜತೆ ತಾಳಮದ್ದಳೆಗೆ ಹೋಗುತ್ತಿದ್ದೆ. ಅವರು ಹೇಳುತ್ತಿದ್ದ ಕಥೆಗಳನ್ನು ಆಸಕ್ತಿಯಿಂದ ಆಲಿಸುತ್ತಿದ್ದೆ. ನಂತರ ತಾಳಮದ್ದಳೆಯಲ್ಲಿ ಆಸಕ್ತಿ ಬಂದು ಅಮೃತೇಶ್ವರಿ ಇಡುಗುಂಜಿ ಮೇಳದಲ್ಲಿ ಮೂರುವರೆ ವರ್ಷ ಮಾತುಗಾರನಾಗಿದ್ದೆ. ಬಳಿಕ ಹಲವು ಕಡೆಗಳಲ್ಲಿ ಸೇವೆ ಸಲ್ಲಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು