ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನಂಜೆ ಹಾವಭಾವ ಅನುಕರಿಸಿದ್ದ ನಟ ವಿಷ್ಣುವರ್ಧನ್‌

ಆಪ್ತಮಿತ್ರ ಸಿನಿಮಾದ ನಟನೆಯ ಮೇಲೆ ಪ್ರಭಾವ ಬೀರಿದ್ದ ಗೋವಿಂದಾಚಾರ್ಯರು: ಶಿಷ್ಯ ವಿಜಯಸಿಂಹಾಚಾರ್‌
Last Updated 14 ಡಿಸೆಂಬರ್ 2020, 16:14 IST
ಅಕ್ಷರ ಗಾತ್ರ

ಉಡುಪಿ: ‘ನಟ ವಿಷ್ಣುವರ್ಧನ್‌ ಮೇಲೆ ಬನ್ನಂಜೆ ಗೋವಿಂದಾಚಾರ್ಯರ ಪ್ರಭಾವವಿತ್ತು. ‘ಆಪ್ತಮಿತ್ರ’ ಸಿನಿಮಾದಲ್ಲಿ ಬನ್ನಂಜೆ ಅವರ ಹಾವ–ಭಾವಗಳನ್ನು ವಿಷ್ಣು ಅನುಕರಣೆ ಮಾಡಿದ್ದರು’ ಎಂದು ಬನ್ನಂಜೆ ಶಿಷ್ಯ ವಿಜಯಸಿಂಹಾಚಾರ್‌ ಹೇಳಿದರು.

ರಾಜಾಂಗಣದಲ್ಲಿ ಸೋಮವಾರ ಬನ್ನಂಜೆ ಗೋವಿಂದಾಚಾರ್ಯರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕೆಲ ವರ್ಷಗಳ ಹಿಂದೆ ವಿಷ್ಣುವರ್ಧನ್‌ ಎರಡು ದಿನ ಬನ್ನಂಜೆ ಗೋವಿಂದಾಚಾರ್ಯರ ನಿವಾಸದಲ್ಲಿ ಉಳಿದಿದ್ದರು. ನಂತರ ಅವರ ಅಭಿನಯದ ಆಪ್ತಮಿತ್ರ ಸಿನಿಮಾ ತೆರೆಗೆ ಬಂತು. ಸಿನಿಮಾದ ಹೆಚ್ಚಿನ ದೃಶ್ಯಗಳಲ್ಲಿ ವಿಷ್ಣು, ಬನ್ನಂಜೆ ಅವರನ್ನು ಅನುಕರಿಸಿದ್ದು ಎದ್ದು ಕಾಣುತ್ತಿತ್ತು. ಹಿರೋವಿನಿಂದ ಅನುಕರಿಸಲ್ಪಟ್ಟ ಹೀರೋ ಗುರು ಬನ್ನಂಜೆ ಗೋವಿಂದಾಚಾರ್ಯರು’ ಎಂದು ಸ್ಮರಿಸಿದರು.

ಸಿನಿಮಾದಲ್ಲಿ ನಾಯಕನನ್ನು ಅಭಿಮಾನಿಗಳು ಅನುಕರಿಸುವಂತೆಯೇ ಬನ್ನಂಜೆ ಗೋವಿಂದಾಚಾರ್ಯರ ಉಪನ್ಯಾಸವನ್ನೂ ಬಹಳ ಮಂದಿ ಅನುಕರಿಸುತ್ತಿದ್ದರು. ಬಹುಶಃ ಉಪನ್ಯಾಸಕಾರರೊಬ್ಬರನ್ನು ನಾಯಕನ ರೀತಿ ನೋಡಿದ್ದು ಬನ್ನಂಜೆ ಅವರನ್ನು ಮಾತ್ರ ಎಂದರು.

ಅಧ್ಯಯನದಿಂದ ವಿರಮಿಸದ ಅಪರೂಪದ ವ್ಯಕ್ತಿತ್ವ ಗುರುಗಳದ್ದಾಗಿತ್ತು. ಜ್ಞಾನಾರ್ಜನೆಗೆ ಮೀಸಲಾದ ಅಧ್ಯಯನ ಜೀವನ ಅವರದ್ದಾಗಿತ್ತು. ಬನ್ನಂಜೆ ಅವರ ಜೀವನವನ್ನು ವೇದವ್ಯಾಸರು, ಮಧ್ವರು ಸಂಪೂರ್ಣವಾಗಿ ಆವರಿಸಿದ್ದರು. ಮಹಾಭಾರತದ ಪಾತ್ರಗಳು ಅವರ ಸ್ಮೃತಿಪಠದಲ್ಲಿ ಅಚ್ಚಳಿಯದೆ ಉಳಿದಿದ್ದವರು. ಅವರ ಸಾರಸ್ವತ ಲೋಕದ ಸಾಹಸ ಬಹಳ ದೊಡ್ಡದು ಎಂದು ನುಡಿ ನಮನ ಸಲ್ಲಿಸಿದರು.‌

ಏಕಾಂತವನ್ನು ಬಹಳ ಇಷ್ಟಪಡುತ್ತಿದ್ದ ಬನ್ನಂಜೆಯವರು ಲೋಕಾಂತದಿಂದ ಹಲವು ಬಾರಿ ಕಿರಿಕಿರಿ ಎದುರಿಸಿದ್ದರು. ಅತ್ಯಂತ ಮೌನಿಯಾಗಿದ್ದ ಗುರುಗಳು ಏಕಾಏಕಿಯಾಗಿ ಮಗುವಿನಂತಹ ಸ್ವಭಾವದವರಾದರು. ಇದ್ದಕ್ಕಿದ್ದಂತೆ ಬದಲಾದ ಅವರ ಸ್ವಭಾವ ಇಂದಿಗೂ ಅಚ್ಚರಿ ಹಾಗೂ ಕುತೂಹಲ. ಒಟ್ಟಾರೆ ಅವರ ಜ್ಞಾನ ಸಂಪತ್ತಿನ ದಾರಿಯಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದು ವಿಜಯಸಿಂಹಾಚಾರ್ ಅಭಿಪ್ರಾಯಪಟ್ಟರು.

ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ‘ತಮ್ಮೊಳಗಿದ್ದ ಅಪಾರ ಜ್ಞಾನ ಸಂಪತ್ತು, ವಿಚಾರಧಾರೆಗಳನ್ನು ಸಮಾಜಕ್ಕೆ ಕೊಟ್ಟು ಬನ್ನಂಜೆ ಗೋವಿಂದಾಚಾರ್ಯರು ಕಣ್ಮರೆಯಾಗಿದ್ದಾರೆ. ಅವರು ಇನ್ನಿಲ್ಲವಾದರೂ ಬರಹಗಳ ಮೂಲಕ ಸದಾ ನಮ್ಮೊಂದಿಗಿದ್ದಾರೆ. ಬನ್ನಂಜೆ ಗೋವಿಂದಾಚಾರ್ಯರು ಮತ್ತೊಮ್ಮೆ ಹುಟ್ಟಿಬರಲಿ’ ಎಂದು ಆಶಿಸಿದರು.

ಬನ್ನಂಜೆ ಗೋವಿಂದಾಚಾರ್ಯರ ಉಪನ್ಯಾಸಕ್ಕೆ ಸಾಟಿಯೇ ಇಲ್ಲ. ಬಹುಶಃ ಮತ್ತೊಬ್ಬರು ಬನ್ನಂಜೆಯನ್ನು ಮುಂದೆ ನೋಡಲು ಸಾಧ್ಯವಿಲ್ಲ. ಸಣ್ಣಪುಟ್ಟ ದೋಷಗಳನ್ನು ಹೊರತುಪಡಿಸಿಯೂ ಅವರಲ್ಲಿದ್ದ ಗುಣಗಳು ಅನುಕರಣೀಯ ಎಂದರು.

ಕಾರ್ಯಕ್ರಮದಲ್ಲಿ ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT