ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಲ್ಲವ ಸಮಾಜ ಒಟ್ಟಾಗಬೇಕು: ರವಿಕುಮಾರ್

Published : 26 ನವೆಂಬರ್ 2023, 13:58 IST
Last Updated : 26 ನವೆಂಬರ್ 2023, 13:58 IST
ಫಾಲೋ ಮಾಡಿ
Comments

ಕುಂದಾಪುರ: 26 ಉಪ ಪಂಗಡಗಳಾಗಿ ಹರಿದು ಹಂಚಿ ಹೋಗಿರುವ ಬಿಲ್ಲವ ಸಮಾಜ ಒಟ್ಟಾಗಬೇಕು. ಹಿಂದೆ 5–6 ಸಂಸದರು, ಹಲವು ಶಾಸಕರನ್ನು ಹೊಂದಿದ್ದ ನಮ್ಮ ಸಮಾಜದಿಂದ ಒಬ್ಬರೇ ಒಬ್ಬ ಸಂಸದರೂ ಇಲ್ಲದೆ ಇರುವ ಸ್ಥಿತಿ ಬಂದಿದೆ. ರಾಜಕೀಯ ಆಲೋಚನೆಗಳು ಏನೇ ಇದ್ದರೂ ಸಮಾಜದ ಒಳಿತಿಗಾಗಿ ಒಂದೇ ವೇದಿಕೆ ಅಡಿಯಲ್ಲಿ ಸಂಘಟಿತರಾಗಬೇಕು ಎಂದು ಸಿಗಂಧೂರು ಚೌಡೇಶ್ವರಿ ಅಮ್ಮನವರ ದೇವಸ್ಥಾನ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಚ್.ಆರ್. ಕರೆ ನೀಡಿದರು.

ನಾರಾಯಣ ಗುರು ಸಭಾಭವನದಲ್ಲಿ ಭಾನುವಾರ ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘ, ನಾರಾಯಣ ಗುರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದತ್ತಿ ಸಂಸ್ಥೆ ಆಶ್ರಯದಲ್ಲಿ ನಡೆದ 31ನೇ ವರ್ಷದ ವಿದ್ಯಾರ್ಥಿವೇತನ ವಿತರಣೆ, ವಿಶೇಷ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸಾಮಾಜಿಕ ಕ್ರಾಂತಿ ತಂದ ನಾರಾಯಣ ಗುರುಗಳು ಕರಾವಳಿ ಭಾಗಕ್ಕೆ ಬಂದು ಮಾರ್ಗದರ್ಶನ ತೋರಿದ್ದ ಹಿನ್ನೆಲೆಯಲ್ಲಿ ಕೇರಳದಲ್ಲಿ ಆಗಿರುವಂತೆ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕ್ರಾಂತಿಯೊಂದಿಗೆ ಆರ್ಥಿಕ ಅಭಿವೃದ್ಧಿಯೂ ಆಗಿದೆ. ಸಮಾಜ ಸಂಘಟಿತವಾಗಿ ಬಲಾಢ್ಯವಾಗುವುದರಿಂದ ದೊಡ್ಡ ರಾಜಕೀಯ ಶಕ್ತಿಯಾಗುವುದರಲ್ಲಿ ಸಂದೇಹಗಳಿಲ್ಲ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ಮಾತನಾಡಿ, ಕಳೆದ 31 ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಬಿಲ್ಲವ ಸಮಾಜದ ಪ್ರತಿಭೆಗಳನ್ನು ಗುರುತಿಸಿ ಗೌರವ ನೀಡುವ, ಭವಿಷ್ಯಕ್ಕೆ ಅನುಕೂಲವಾಗುವಂತೆ ವಿದ್ಯಾರ್ಥಿವೇತನ ನೀಡಿ ಪ್ರೋತ್ಸಾಹಿಸುವುದನ್ನು ಆದ್ಯ ಕರ್ತವ್ಯ ಎನ್ನುವಂತೆ ನಿರ್ವಹಿಸಲಾಗುತ್ತಿದೆ ಎಂದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಾನಂದ, ಬಿಲ್ಲವ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಪಡುಕೋಣೆ ರಾಮ ಪೂಜಾರಿ ಮುಲ್ಲಿಮನೆ, ಶಿವರಾಮ ಪೂಜಾರಿ, ನಾರಾಯಣ ಗುರು ಮಹಿಳಾ ಕ್ರೆಡಿಟ್ ಕೊಆಪರೇಟಿವ್ ಸೊಸೈಟಿ ಅಧ್ಯಕ್ಷೆ ಪಿ. ಗುಣರತ್ನ ರಾಮ ಪೂಜಾರಿ, ನಾರಾಯಣಗುರು ಯುವಕ ಮಂಡಲದ ಅಧ್ಯಕ್ಷ ಯೋಗೇಶ್ ಪೂಜಾರಿ ಕೋಡಿ, ಬಿಲ್ಲವ ಮಹಿಳಾ ಘಟಕ ಅಧ್ಯಕ್ಷೆ ಸುಮನಾ ಬಿದ್ಕಲ್‌ಕಟ್ಟೆ ಇದ್ದರು.

ಬಿಲ್ಲವ ಸಮಾಜದ ಸಾಧಕರಾದ ಪ್ರಸಂಗಕರ್ತೆ ಶಾಂತಾ ವಾಸುದೇವ ಆನಗಳ್ಳಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನರೇಂದ್ರ ಕುಮಾರ್ ಕೋಟ, ಸಮಾಜ ಸೇವಕ ರಾಜು ಪೂಜಾರಿ, ಪೊಲೀಸ್ ಶಂಕರ ಪೂಜಾರಿ ಕಾಡಿನತಾರು, ದೇಹದಾರ್ಢ್ಯ ಪಟು ಸುರೇಶ್ ಬಿ.ಪಾಂಡೇಶ್ವರ, ಪಿಎಚ್‌ಡಿ ಪದವಿ ಪಡೆದ ಸೌಮ್ಯ ಕುಮಾರಿ ಉಪ್ಲಾಡಿ, ಸಚಿನ್ ಯು.ಎಸ್. ಉಪ್ಲಾಡಿ, ಜಿಲ್ಲಾ ಶಿಕ್ಷಕ ಪುರಸ್ಕೃತ ಚೆನ್ನಯ ಪೂಜಾರಿ ಬೈಂದೂರು, ನ್ಯಾಯವಾದಿ ನಯನ ಆಸೋಡು ಅವರನ್ನು ಸನ್ಮಾನಿಸಲಾಯಿತು.

ಶೈಕ್ಷಣಿಕ, ಕ್ರೀಡಾ ಕ್ಷೇತ್ರದ ಸಾಧಕಿ ದೀಕ್ಷಾ, ಚೆಸ್ ಪ್ರತಿಭೆಗಳಾದ ಛಾಯಾ ಸಿ.ಪೂಜಾರಿ, ಶ್ರಾವ್ಯ ಕಂಡ್ಲೂರು, ಕಬಡ್ಡಿ ಅಟಗಾರ್ತಿ ಅಮೂಲ್ಯ ಹಟ್ಟಿಯಂಗಡಿ, ಯೋಗಪಟು ನಿರೀಕ್ಷಾ ಬಾಬು ಪೂಜಾರಿ ಕೊಡೇರಿ, ಧನ್ಯ, ಸಿಎ ಪರೀಕ್ಷಾ ಸಾಧಕಿ ಚಂದ್ರಾ ಎಸ್.ಕೆ. ಸಿದ್ದಾಪುರ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರ್‍ಯಾಂಕ್ ಗಳಿಸಿದ ಅಮೂಲ್ಯಾ ಮಾವಿನಕೊಂಬೆ ಅವರನ್ನು ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿದ ಶಿಕ್ಷಕ ನರೇಂದ್ರ ಕುಮಾರ್ ಕೋಟ ಸನ್ಮಾನಕ್ಕೆ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಗಣೇಶ್ ಪೂಜಾರಿ ವಿಠಲವಾಡಿ ಸ್ವಾಗತಿಸಿದರು, ಸತೀಶ್ ವಡ್ಡರ್ಸೆ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT