ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಂದಾಪುರ | ಬಸ್‌ ಸಮಸ್ಯೆ: ವಿದ್ಯಾರ್ಥಿಗಳಿಂದ ಪ್ರತಿಭಟನೆ

ಸುರಿಯುವ ಮಳೆ ಲೆಕ್ಕಿಸದೆ ಮೆರವಣಿಗೆ ಸಾಗಿದ ಪ್ರತಿಭಟನಾಕಾರರು
Published 8 ಜೂನ್ 2024, 13:26 IST
Last Updated 8 ಜೂನ್ 2024, 13:26 IST
ಅಕ್ಷರ ಗಾತ್ರ

ಕುಂದಾಪುರ: ಬೈಂದೂರು, ಕುಂದಾಪುರ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಬಸ್ಸು ಪ್ರಯಾಣದ ಸಮಸ್ಯೆಯಿಂದಾಗಿ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಬಗೆಹರಿಸಲು, ಬೇಡಿಕೆ ಇರುವ ಕಡೆ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಶನಿವಾರ ಇಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವತಿಯಿಂದ ಪ್ರತಿಭಟನೆ ನಡೆಯಿತು.

ನಗರದ ಶಾಸ್ತ್ರಿ ಸರ್ಕಲ್‌ ಬಳಿಯಿಂದ ಕಾಲ್ನಡಿಗೆಯಲ್ಲಿ ಆರಂಭವಾದ ಪ್ರತಿಭಟನಾ ಮೆರವಣಿಗೆ ಸುರಿವ ಮಳೆಯನ್ನೂ ಲೆಕ್ಕಿಸದೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ, ಮಿನಿ ವಿಧಾನಸೌಧದವರೆಗೆ ಸಾಗಿತ್ತು. ಮೆರವಣಿಗೆಯಲ್ಲಿ ಪ್ರತಿಭಟನಾಕಾರರು ವಿದ್ಯಾರ್ಥಿಗಳ ಬೇಡಿಕೆ ಪರಿಗಣಿಸದೆ ಇರುವ ಕೆಎಸ್‌ಆರ್‌ಟಿಸಿ, ರಾಜ್ಯ ಸರ್ಕಾರ ನಡೆ ಖಂಡಿಸಿ ಘೋಷಣೆ ಕೂಗಿದರು.

ಮಿನಿ ವಿಧಾನಸೌಧದ ಮುಂಭಾಗದಲ್ಲಿ ಸೇರಿದ್ದ ವಿದ್ಯಾರ್ಥಿಗಳು ಕುಂದಾಪುರ, ಬೈಂದೂರು ಶಾಸಕರಿಗೆ, ತಹಶೀಲ್ದಾರ್, ಕೆಎಸ್‌ಆರ್‌ಟಿಸಿ ಡಿ‍ಪೊ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು. ಮುಂದಿನ ಎರಡು ವಾರದ ಒಳಗೆ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸದಿದ್ದಲ್ಲಿ ಹೋರಾಟ ಸಂಘಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಎಬಿವಿಪಿ ಜಿಲ್ಲಾ ಸಂಚಾಲಕ ಗಣೇಶ್, ಸಹ ಸಂಚಾಲಕ ದರ್ಶನ್ ಶೆಟ್ಟಿ ಮಾತನಾಡಿ, ಕುಂದಾಪುರ, ಬೈಂದೂರು ತಾಲ್ಲೂಕುಗಳಲ್ಲಿ ವಿದ್ಯಾರ್ಥಿಗಳು ಸಾರ್ವಜನಿಕ ಸಂಚಾರ ಸೇವೆಗೆ ಹೆಚ್ಚು ಅವಲಂಬಿತರಾಗಿದ್ದಾರೆ. ವಿದ್ಯಾರ್ಥಿಗಳ ಅವಶ್ಯಕತೆಗೆ ತಕ್ಕಷ್ಟು ಸರ್ಕಾರಿ ಬಸ್‌ ಸೌಲಭ್ಯ ಇಲ್ಲದಿರುವುದು ಸಮಸ್ಯೆಗೆ ಮೂಲ ಕಾರಣ. ಬಸ್ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳಿಗೆ ದೈನಂದಿನ ತರಗತಿಗಳಿಗೆ ಸಮಯಕ್ಕೆ ಸರಿಯಾಗಿ ಹಾಜರಾಗಲು, ಕತ್ತಲಾಗುವ ಮೊದಲೇ ಮನೆಗೆ ತಲುಪಲು ಕಷ್ಟವಾಗುತ್ತಿದೆ ಎಂದು ತಿಳಿಸಿದರು.

ತಹಶೀಲ್ದಾರ್ ಕಚೇರಿಯಲ್ಲಿ ವಿದ್ಯಾರ್ಥಿ ಸಂಘಟನೆ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ, ತಹಶೀಲ್ದಾರ್ ಎಚ್‌.ಎಸ್. ಶೋಭಾಲಕ್ಷ್ಮೀ, ಕೆಎಸ್‌ಆರ್‌ಟಿಸಿ ಡಿಪೊ ವ್ಯವಸ್ಥಾಪಕ ಎ. ಉದಯ ಶೆಟ್ಟಿ ವಿದ್ಯಾರ್ಥಿಗಳ ಅಹವಾಲು ಕೇಳಿದರು.

ಬಸ್‌ಗಳ ಓಡಾಟಕ್ಕೆ ಪರವಾನಗಿ ಇದ್ದರೂ, ಕೊಲ್ಲೂರು, ಸಿದ್ದಾಪುರ, ಗಂಗೊಳ್ಳಿ, ಹೊಸಂಗಡಿ, ನಾಡಾ, ನೂಜಾಡಿ, ಹಳ್ಳಿಹೊಳೆ, ಯರುಕೋಣೆ, ಬೊಳಂಬಳ್ಳಿ, ಗಂಟಿಹೊಳೆ, ಗುಲ್ವಾಡಿ, ಅಮಾಸೆಬೈಲು, ತೊಂಬಟ್ಟು, ಆಲೂರು, ಕರ್ಕುಂಜೆ, ಪಡುಕೋಣೆ, ಮಾರಣಕಟ್ಟೆ, ಗಿಳಿಯಾರು, ಕೆರಾಡಿ, ಬೆಳ್ಳಾಲ, ಮೋರ್ಟ್, ಹೆಸ್ಕೂತ್ತೂರು, ಆಜ್ರಿ ಮುಂತಾದ ಭಾಗಗಳಲ್ಲಿ ಬಸ್ಸು ಓಡಾಟ ನಿಲ್ಲಿಸಲಾಗಿದೆ ಎಂದು ವಿದ್ಯಾರ್ಥಿಗಳು ಅಸಮಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಕುಂದಾಪುರದ ಭಂಡಾರ್‌ಕಾರ್ಸ್ ಕಾಲೇಜು, ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕೋಟೇಶ್ವರದ ಕಾಳಾವರ ವರದರಾಜ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಿತ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಎಬಿವಿಪಿ ರಾಜ್ಯ ಕಾರ್ಯಕಾರಣಿ ಸದಸ್ಯೆ ಸಂಹಿತಾ, ಪ್ರಮುಖರಾದ ಆಕಾಶ್, ಅಜಿತ್ ಜೋಗಿ, ಶ್ರೀವತ್ಸ, ನವೀನ್, ರಮೇಶ್, ಲಕ್ಷ್ಮೀಕಾಂತ್, ಶಬರಿ, ರಾಜೇಶ್ವರಿ, ವಿನಾಯಕ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಬಿಜೆಪಿ ಮಂಗಳೂರು ಸಹಪ್ರಭಾರಿ ರಾಜೇಶ್ ಕಾವೇರಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಉಮೇಶ್ ಶೆಟ್ಟಿ ಕಲ್ಗದ್ದೆ, ಅರುಣ್ ಬಾಣಾ, ರತ್ನಾಕರ ಶೇರುಗಾರ್ ಚರ್ಚ್‌ ರಸ್ತೆ ಇದ್ದರು.

ಕುಂದಾಪುರದಲ್ಲಿ ಶನಿವಾರ ಬಸ್ಸು ಅವ್ಯವಸ್ಥೆಯಿಂದಾಗಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಗಳನ್ನು ನಿವಾರಿಸುವಂತೆ ಆಗ್ರಹಿಸಿ ಎಬಿವಿಪಿ ಸಂಘಟನೆಯ ನೇತ್ರತ್ವದಲ್ಲಿ ಪ್ರತಿಭಟನೆ ನಡೆಸಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹಾಗೂ ತಹಶೀಲ್ದಾರ್ ಹೆಚ್‌.ಎಸ್.ಶೋಭಾಲಕ್ಷ್ಮೀ ಅವರಿಗೆ ಮನವಿ ನೀಡಲಾಯಿತು.
ಕುಂದಾಪುರದಲ್ಲಿ ಶನಿವಾರ ಬಸ್ಸು ಅವ್ಯವಸ್ಥೆಯಿಂದಾಗಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಗಳನ್ನು ನಿವಾರಿಸುವಂತೆ ಆಗ್ರಹಿಸಿ ಎಬಿವಿಪಿ ಸಂಘಟನೆಯ ನೇತ್ರತ್ವದಲ್ಲಿ ಪ್ರತಿಭಟನೆ ನಡೆಸಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹಾಗೂ ತಹಶೀಲ್ದಾರ್ ಹೆಚ್‌.ಎಸ್.ಶೋಭಾಲಕ್ಷ್ಮೀ ಅವರಿಗೆ ಮನವಿ ನೀಡಲಾಯಿತು.
ಅಧಿಕಾರಿಗಳು ವಿದ್ಯಾರ್ಥಿಗಳೊಂದಿಗೆ ಸಮಾಧಾನದಿಂದ ವರ್ತನೆ ತೋರಬೇಕು. ಸಮಸ್ಯೆಗಳನ್ನು ಸಹನೆಯಿಂದ ಆಲಿಸಬೇಕು. ಮೇಲಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸಮಸ್ಯೆ ಪರಿಹಾರಕ್ಕೆ ಪ್ರಮಾಣಿಕ ಪ್ರಯತ್ನ ಮಾಡಬೇಕು. ಅಗತ್ಯವಿದ್ದಲ್ಲಿ ಇತರ ಇಲಾಖೆಯ ಅಧಿಕಾರಿಗಳೊಂದಿಗೆ ನಾನು ಮಾತನಾಡುತ್ತೇನೆ.
ಗುರುರಾಜ್ ಗಂಟಿಹೊಳೆ. ಶಾಸಕರು ಬೈಂದೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT