ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಸಿ, ಎಸ್‌ಟಿಗೆ ಮೀಸಲಿಟ್ಟ ಹಣ ಗ್ಯಾರಂಟಿಗಳಿಗೆ ಬಳಕೆ: ಶಾಸಕಿ ಭಾಗೀರಥಿ ಆರೋಪ

Published 28 ಏಪ್ರಿಲ್ 2024, 16:22 IST
Last Updated 28 ಏಪ್ರಿಲ್ 2024, 16:22 IST
ಅಕ್ಷರ ಗಾತ್ರ

ಬೈಂದೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮನೆ, ಸಮುದಾಯ ಭವನ, ರಸ್ತೆ, ಚರಂಡಿ ನಿರ್ಮಿಸಲು ಮೀಸಲಿಟ್ಟಿರುವ ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗೆ ಬಳಸಿ ಡೋಂಗಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಆರೋಪಿಸಿದರು.

ಕಿರಿಮಂಜೇಶ್ವರದಲ್ಲಿ ಭಾನುವಾರ ನಡೆದ ಬೈಂದೂರು ಮಂಡಲ ಬಿಜೆಪಿ ಎಸ್‌ಸಿ ಮೋರ್ಚಾದ ಸಮಾವೇಶದಲ್ಲಿ ಮಾತನಾಡಿದ ಅವರು, ಎಸ್‌ಸಿ, ಎಸ್.ಟಿ ಸಮುದಾಯಕ್ಕೆ ಮೀಸಲಿಟ್ಟಿರುವ ₹11 ಸಾವಿರ ಕೋಟಿ ಹಣವನ್ನು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಲಾಗುತ್ತಿದೆ.

ಸರ್ಕಾರದ ಉಚಿತ ಗ್ಯಾರಂಟಿ ಪಡೆಯಲು ಅಂಜಿಕೆ ಬೇಡ. ಆದರೆ, ಚುನಾವಣೆಯಲ್ಲಿ ಮತದಾನ ಮಾಡುವಾಗ ಮಾತ್ರ ದೇಶದ ಅಭಿವೃದ್ಧಿ, ಸಮರ್ಥ ನಾಯಕತ್ವಕ್ಕೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ದುಡ್ಡನ್ನು ಬಳಸುವ ಬದಲು ಕುರುಬರ ಅಭಿವೃದ್ಧಿ, ಒಕ್ಕಲಿಗರ ಅಭಿವೃದ್ಧಿಗೆ ಮೀಸಲಿಟ್ಟ ಹಣ ಬಳಸಬಹುದಿತ್ತು. ಎಸ್‌ಸಿ, ಎಸ್‌ಟಿಗಳಿಗೆ ಮೀಸಲಿಟ್ಟ ಹಣ ಬಳಸಿದ್ದೇಕೆ ಎಂದು ಪ್ರಶ್ನಿಸಿದರು.

ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರಿಗೆ ಒಂದು ಲಕ್ಷಕ್ಕೂ ಅಧಿಕ ಲೀಡ್ ಕೊಡಿಸುವ ಸಂಕಲ್ಪವನ್ನು ಶಾಸಕ ಗುರುರಾಜ ಗಂಟಿಹೊಳೆ ಮಾಡಿದ್ದಾರೆ. ಬೂತ್ ಕಡೆಗೆ ಸಮೃದ್ಧ ನಡಿಗೆ ಕಾರ್ಯಕ್ರಮ ಆಯೋಜಿಸಿ ಎಲ್ಲಾ ಬೂತ್‌ಗಳಿಗೂ ಸಂಚರಿಸಿ ಕಾರ್ಯಕರ್ತರನ್ನು ಮುಖಂಡರನ್ನು ಸಂಘಟಿಸುತ್ತಿದ್ದಾರೆ.

ನಾವೆಲ್ಲರೂ ಒಟ್ಟಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮತಗಳು ಸಂಪೂರ್ಣ ಬಿಜೆಪಿ ಅಭ್ಯರ್ಥಿಗೆ ಬರುವಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದರು.

ಎಸ್‌ಸಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಸಕಲೇಶಪುರ ಶಾಸಕರೂ ಆದ ಸಿಮೆಂಟ್ ಮಂಜು ಮಾತನಾಡಿ, ಬೈಂದೂರು ಕ್ಷೇತ್ರದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಲೀಡ್‌ ಸಿಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ 10 ವರ್ಷಗಳ ಆಡಳಿತದ ಬಲ, ಸಮರ್ಥ ನಾಯಕತ್ವ, ಅಭಿವೃದ್ಧಿ ಕಾರ್ಯಗಳು ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದರು.

ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ಬಿಜೆಪಿ ಸರ್ಕಾರಾವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿತ್ತು. ಆದರೆ, ಕಾಂಗ್ರೆಸ್‌ ದಲಿತ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟಿರುವ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ವಿನಿಯೋಗಿಸಿ ಸಮುದಾಯಗಳಿಗೆ ಅನ್ಯಾಯ ಮಾಡಿದೆ.

ಬೈಂದೂರು ಕ್ಷೇತ್ರದಿಂದ ಬಿ.ವೈ.ರಾಘವೇಂದ್ರ ಅವರಿಗೆ 1 ಲಕ್ಷ ಲೀಡ್ ಸಿಗುವ ನಿಟ್ಟಿನಲ್ಲಿ ಪ್ರತಿ ಬೂತ್‌ ಸಂಚಾರ ಮಾಡಲಾಗಿದೆ. ವಿನೂತನ ಮಾದರಿಯಲ್ಲಿ ಪ್ರಚಾರ ನಡೆಯುತ್ತಿದೆ. ಬೂತ್ ಪ್ರಮುಖರ ಸಂಘಟನೆ, ಪೇಜ್ ಪ್ರಮುಖರಿಗೆ ಕಾರ್ಯಾಗಾರ ನಡೆಸಲಾಗಿದೆ. ಮೂಕಾಂಬಿಕಾ ಕಾರಿಡಾರ್ ಮೂಲಕ ಸಮೃದ್ಧ ಬೈಂದೂರು ಪರಿಕಲ್ಪನೆ ಸಾಕಾರಕ್ಕೆ ಶ್ರಮಿಸಲಾಗುವುದು ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಎಸ್‌ಸಿ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ಜಿಲ್ಲಾ ಉಪಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ಸೇರಿದಂತೆ ಜಿಲ್ಲಾ ಹಾಗೂ ಮಂಡಲ ಮಟ್ಟದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಇದ್ದರು.

₹11 ಸಾವಿರ ಕೋಟಿ ಹಣ ಗ್ಯಾರಂಟಿಗೆ ಬಳಕೆ ಸಮುದಾಯಗಳಿಗೆ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರದಿಂದ ಅನ್ಯಾಯ  ‘ಸಮೃದ್ಧ ಬೈಂದೂರು ಪರಿಕಲ್ಪನೆ ಸಾಕಾರಕ್ಕೆ ಶ್ರಮಿಸಲಾಗುವುದು’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT