ಉಡುಪಿ: ಆಯುರ್ವೇದ ಕ್ಷೇತ್ರವು ಕಾಲಕ್ಕೆ ತಕ್ಕಂತೆ ಬದಲಾವಣೆಗಳಿಗೆ ಒಡ್ಡಿಕೊಳ್ಳಬೇಕು. ಇಲ್ಲದಿದ್ದರೆ ಸವಕಲು ನಾಣ್ಯದಂತಾಗಬಹುದು ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಮೋಹನ್ ಆಳ್ವ ಹೇಳಿದರು.
ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಶುಕ್ರವಾರ ನಡೆದ ಮಣಿಪಾಲದ ಮುನಿಯಾಲ್ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ ಸೈನ್ಸಸ್ ಕಾಲೇಜಿನ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.
ನಮ್ಮ ದೇಶದ ಆಯುರ್ವೇದವು ಮೊದಲ ವಿಜ್ಞಾನವಾಗಿದೆ. ಅನಂತರ ಎಲ್ಲಾ ವಿಜ್ಞಾನಗಳು ಹುಟ್ಟಿಕೊಂಡಿವೆ. ಆದರೆ ಆಯುರ್ವೇದದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯದ ಕಾರಣ ಈ ಚಿಕಿತ್ಸಾ ವಿಧಾನವು ಮುಖ್ಯವಾಹಿನಿಗೆ ಬಂದಿಲ್ಲ ಎಂದರು.
ಅನನ್ಯವಾದ ಆಯುರ್ವೇದ ಚಿಕಿತ್ಸಾ ವಿಧಾನದ ಮಹತ್ವವನ್ನು ಅರಿಯದೆ, ನಿರ್ಲಕ್ಷಿಸಲಾಗಿದೆ. ಈ ಪದ್ಧತಿಯ ಜೊತೆಗೆ ಗುರುತಿಸಿಕೊಂಡಿದ್ದ ಯೋಗ ಮತ್ತು ಧ್ಯಾನವು ಇಂದು ಪ್ರತ್ಯೇಕವಾಗಿ ವಿಶ್ವಮಟ್ಟದಲ್ಲಿ ಬೆಳೆದಿದೆ ಮತ್ತು ನಮ್ಮ ಕೈತಪ್ಪಿ ಹೋಗಿದೆ. ಯೋಗ, ಧ್ಯಾನ ಸೇರಿದಂತೆ ಎಲ್ಲವನ್ನೂ ಒಳಗೊಂಡ ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಹೊಸ ಆವಿಷ್ಕಾರಗಳು ನಡೆದಾಗ ಮಾತ್ರ ಈ ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಆಯುರ್ವೇದದ ಹೆಸರಿನಲ್ಲಿ ಹೆಲ್ತ್ ರೆಸಾರ್ಟ್‌ಗಳು ಆರಂಭವಾಗಿ ಚಿಕಿತ್ಸಾ ವಿಧಾನವು ವಾಣಿಜ್ಯ ಉದ್ದೇಶದಿಂದ ಬಳಕೆಯಾಗುತ್ತಿದೆ. ಇದು ಆಯುರ್ವೇದ ಆಸ್ಪತ್ರೆಗಳ ಮೂಲಕ ನಡೆಯಬೇಕಿತ್ತು ಎಂದರು.
ಕಾರ್ಯಕ್ರಮದಲ್ಲಿ ಮೋಹನ್ ಆಳ್ವ ಅವರು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು.
ಕಾಲೇಜು ಪ್ರಾಂಶುಪಾಲ ಡಾ. ಸತ್ಯನಾರಾಯಣ ಭಟ್ ಮಾತನಾಡಿ, ಮುನಿಯಾಲು ಆಯುರ್ವೇದ ಕಾಲೇಜಿನಲ್ಲಿ ಪುರಾತನ ಚಿಕಿತ್ಸಾ ಪದ್ಧತಿಯ ಕುರಿತು ಅಧ್ಯಯನ ಮಾಡಲಾಗುತ್ತಿದೆ. ಕ್ಯಾನ್ಸರ್ ಸೇರಿದಂತೆ ವಿವಿಧ ರೋಗಗಳಿಗೆ ಸಂಬಂಧಿಸಿದ ಔಷಧಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಶ್ರದ್ಧಾ ಶೆಟ್ಟಿ, ಪ್ರೀತಿ ಪಾಟೀಲ್ ಮಾತನಾಡಿದರು. ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಎಂ. ವಿಜಯಭಾನು ಶೆಟ್ಟಿ, ಡಾ. ಗುರುರಾಜ್ ಉಪಸ್ಥಿತರಿದ್ದರು. ಡಾ. ರವಿಶಂಕರ್ ಸ್ವಾಗತಿಸಿದರು.
Quote - ಮೂಢನಂಬಿಕೆಗಳು ಅಳಿಯಬೇಕು ನಂಬಿಕೆಗಳನ್ನು ಬಳಸಿ ಆಯುರ್ವೇದ ಕ್ಷೇತ್ರವು ಇನ್ನಷ್ಟು ಅಭಿವೃದ್ಧಿ ಸಾಧಿಸಬೇಕು. ಹಾಗಿದ್ದರೆ ಮಾತ್ರ ಇತರ ವಿಜ್ಞಾನಗಳ ಜೊತೆಗೆ ಪೈಪೋಟಿ ನೀಡಬಹುದು ಡಾ. ಮೋಹನ ಆಳ್ವ ಆಳ್ವಾಸ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.