ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವಿನ ಸೊಬಗಿನೊಂದಿಗೆ ಕಂಗೊಳಿಸುತ್ತಿರುವ ಅಪರೂಪದ ಕಾಡುಶ್ರೀತಾಳೆ

ಭಾರತದಲ್ಲಿ ಅಳಿವಿನಂಚಿನಲ್ಲಿರುವ ಕಾಡುಶ್ರೀತಾಳೆಯ ಸಂರಕ್ಷಣೆ ಅಗತ್ಯ
Last Updated 9 ಡಿಸೆಂಬರ್ 2019, 9:53 IST
ಅಕ್ಷರ ಗಾತ್ರ

ಉಡುಪಿ: ತನ್ನ ಜೀವಿತಾವಧಿಯ 50ರಿಂದ 60 ವರ್ಷಕ್ಕೆ ಹೂಬಿಟ್ಟು ಕ್ರಮೇಣ ಸಾಯುವ ಅಪರೂಪದ ಅಳಿವಿನಂಚಿನಲ್ಲಿರುವ ವೃಕ್ಷ ಸಂಕುಲಕ್ಕೆ ಸೇರಿದ ‘ಕಾಡುಶ್ರೀತಾಳೆ’ (ಗಂಡುತಾಳೆ ಮರ) ಮರವೊಂದು ಆತ್ರಾಡಿಯ ಪರೀಕ ಎಂಬಲ್ಲಿ ಹೂ ಬಿಟ್ಟು ಕಂಗೊಳಿಸುತ್ತಿದೆ. ತನ್ನ ಹೂವಿನ ಸೊಬಗಿನಿಂದಾಗಿ ಜನರನ್ನು ಆಕರ್ಷಿಸುತ್ತಿದೆ.

ಪ್ರಾಚ್ಯ ವೃಕ್ಷಗಳಲ್ಲಿ ಒಂದಾಗಿರುವ ಶ್ರೀತಾಳೆ, ವಿಶೇಷವಾಗಿ ನಮ್ಮ ಪೂರ್ವಜರಿಗೆ ನಾನಾ ರೀತಿಯಲ್ಲಿ ಆಶ್ರಯ ನೀಡಿದೆ. ಪರ್ಣಕುಟೀರವಾಗಿ, ಮಳೆಗಾಳಿಗೆ ತತ್ರವಾಗಿ, ಕೃಷಿ ಕೆಲಸ ನಡೆಸಲು ಗೊರಂಬಾಗಿ ರಕ್ಷಣೆ ನೀಡಿದೆ. ಅಲ್ಲದೆ, ಇದರ ಗರಿಗಳನ್ನು ಗ್ರಂಥ, ಸಾಹಿತ್ಯಗಳನ್ನು ಬರೆಯಲು ಉಪಯೋಗಿಸಲಾಗುತ್ತಿತ್ತು. ಆದರೆ ಇಂದು ಹಸಿರು, ಹಸಿವು ಮತ್ತು ಅಕ್ಷರ ಪ್ರಪಂಚದ ಪ್ರತೀಕವಾದ ಈ ವೃಕ್ಷ ವಿಶ್ವದ ಹಸಿರು ಪಟ್ಟಿಯಿಂದ ಜಾರಿ ಕೆಂಪು ಪಟ್ಟಿಗೆ ಸೇರಿಕೊಂಡಿದೆ.

ಈ ವೃಕ್ಷಕ್ಕೆ ಸಂಸ್ಕೃತದಲ್ಲಿ ಅವಿನಾಶಿ, ತುಳುವಿನಲ್ಲಿ ಪಣೋಲಿದ ಮರ, ಇಂಡೋನೇಶಿಯಾದಲ್ಲಿ ಲೊಂಟಾರ, ಕೇರಳದಲ್ಲಿ ಕೊಡಪಣ-ಮರ ಹಾಗೂ ಸಾಮಾನ್ಯರು ಇದನ್ನು ಸೀತಾಳೆ ಮರ ಎಂದು ಕರೆಯುತ್ತಾರೆ. ಇದರ ಸಸ್ಯನಾಮ ಕೊರಿಫಾ ಅಂಬ್ರಕುಲಿಫೆರಾ. ಇದರ ಇನ್ನೊಂದು ವಿಶೇಷ ಏನೆಂದರೆ, ಈ ಮರವು 50ರಿಂದ 60ವರ್ಷಕ್ಕೆ ಹೂವು ಬಿಡುತ್ತದೆ. ಅರಳಿದ ಹೂವು ಎಂಟು ತಿಂಗಳ ಕಾಲ ಮರದಲ್ಲಿರುತ್ತದೆ. ನಂತರ ಕಾಯಿ ಬಿಡುತ್ತದೆ. ಬಳಿಕ ಕ್ರಮೇಣವಾಗಿ ಈ ಮರ ಸಾಯುತ್ತದೆ. ಒಂದು ಮರದಲ್ಲಿ ಸುಮಾರು ಎರಡು ಟನ್‌ ಬೀಜಗಳು ಸಿಗುತ್ತವೆ.

ಪ್ರಸ್ತುತ ಪರೀಕದಲ್ಲಿ ಹೂ ಬಿಟ್ಟಿರುವ ಕಾಡುಶ್ರೀತಾಳೆಯ ಸಂರಕ್ಷಣೆ ಮಾಡಿ, ಅದರ ಬೀಜಸಂಗ್ರಹಿಸಿ ತಳಿಯ ಪುನರುತ್ಪತ್ತಿ ಮಾಡುವ ಕಾರ್ಯ ಆಗಬೇಕಿದೆ. ಈ ಹಿಂದೆ 2007ರಲ್ಲಿ ಪೊಳಲಿಯ ಕಾಡಿನಲ್ಲಿ ಸಾಲು ಸಾಲು ಮರಗಳು ಹೂ ಬಿಟ್ಟಿರುವುದನ್ನು ದಾಖಲು ಮಾಡಲಾಗಿತ್ತು. ಆ ಬಳಿಕ ಪಡುಪಣಂಬೂರಿನ ಈ ಮರ ಹೂಬಿಟ್ಟಿದ್ದು, ಅದರ ಬೀಜಗಳನ್ನು ಸಂಗ್ರಹಿಸಲಾಗಿತ್ತು. ಹಾಗೆಯೇ ಈಗಾಗಲೇ 2.50 ಲಕ್ಷ ಬೀಜಗಳನ್ನು ವಿವಿಧ ಕಡೆಗಳಲ್ಲಿ ಬಿತ್ತನೆ ಮಾಡಲಾಗಿದೆ ಎನ್ನುತ್ತಾರೆ ಉಡುಪಿ ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರದ ನಿರ್ದೇಶಕ ಪ್ರೊ. ಎಸ್‌.ಎ. ಕೃಷ್ಣಯ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT