ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದಲ್ಲಿ ಕೊರೊನಾ ಹೆಚ್ಚಳ: ಕರಾವಳಿಯಲ್ಲಿ ಆತಂಕ

ಗಡಿಯಲ್ಲಿ ಬಿಗಿ ತಪಾಸಣೆ ಅತ್ಯಗತ್ಯ; ಎಚ್ಚರ ತಪ್ಪಿದರೆ ಮೂರನೇ ಅಲೆಯ ಹೊಡೆತ
Last Updated 29 ಜುಲೈ 2021, 14:38 IST
ಅಕ್ಷರ ಗಾತ್ರ

ಉಡುಪಿ: ನೆರೆಯ ಕೇರಳ ರಾಜ್ಯದಲ್ಲಿ ಕೋವಿಡ್‌–19 ಪ್ರಕರಣಗಳು ಗಣನೀಯವಾಗಿ ಹೆಚ್ಚಾಗುತ್ತಿರುವುದರಿಂದ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಆತಂಕ ಸೃಷ್ಟಿಯಾಗಿದೆ. ಕೇರಳದಲ್ಲಿ ಪ್ರತಿದಿನ 20,000ದಷ್ಟು ಹೊಸ ಪ್ರಕರಣಗಳು ಪತ್ತೆಯಾಗುತ್ತಿದ್ದು, ಕೋವಿಡ್‌ ಮೂರನೇ ಅಲೆಯ ಭೀತಿ ಎದುರಾಗಿದೆ.

ಆತಂಕ ಏಕೆ?:

ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಕೇರಳ ರಾಜ್ಯದೊಂದಿಗೆ ವ್ಯಾಪಾರ ವಹಿವಾಟು ಹೊಂದಿವೆ. ಪ್ರತಿದಿನ ಸಾವಿರಾರು ಮಂದಿ ಉಭಯ ರಾಜ್ಯಗಳ ಗಡಿಗಳನ್ನು ದಾಟಿ ವ್ಯವಹಾರ ನಡೆಸುತ್ತಾರೆ. ಕಾಸರಗೋಡಿನಿಂದ ಹೆಚ್ಚಿನ ರೋಗಿಗಳು ಮಂಗಳೂರಿನ ಆಸ್ಪತ್ರೆಗಳಿಗೆ ಚಿಕಿತ್ಸೆ ಪಡೆಯಲು ಬರುತ್ತಾರೆ. ಇದರಿಂದ ಸೋಂಕು ವ್ಯಾಪಿಸುವ ಆತಂಕ ಎದುರಾಗಿದೆ.

ಕೇರಳದಿಂದಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಬರುವವರ ಮೇಲೆ ನಿಗಾ ಇರಿಸದಿದ್ದರೆ ಉಭಯ ಜಿಲ್ಲೆಗಳಲ್ಲಿ ಸೋಂಕು ಮತ್ತಷ್ಟು ಹೆಚ್ಚಾಗಲಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ ತಜ್ಞ ವೈದ್ಯರು.

ಆರೋಗ್ಯ ಇಲಾಖೆ ಕ್ರಮ ಏನು?:

ಮುಂಬೈ ಹಾಗೂ ಕೇರಳದಿಂದ ಬರುವವರು ಗಡಿಯಲ್ಲಿ ಆರ್‌ಟಿಪಿಸಿಆರ್ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು ಎನ್ನುತ್ತಿದೆ ಆರೋಗ್ಯ ಇಲಾಖೆ. ಆದರೆ, ಗಡಿಗಳಲ್ಲಿ ಕಟ್ಟುನಿಟ್ಟಿನ ತಪಾಸಣಾ ನಿಯಮಗಳು ಪಾಲನೆಯಾಗುತ್ತಿಲ್ಲ. ರೈಲಿನಲ್ಲಿ ಬರುವವರ ತಪಾಸಣೆಯೂ ನಡೆಯುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಕರಾವಳಿಯಲ್ಲಿ ಇಳಿಯದ ಸೋಂಕು:

ಮತ್ತೊಂದೆಡೆ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸೋಂಕು ಇಳಿಮುಖವಾದರೂ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಡಿಮೆಯಾಗುತ್ತಿಲ್ಲ. ಬೆಂಗಳೂರು ನಗರ, ಮೈಸೂರು ಜಿಲ್ಲೆಗಳನ್ನು ಹೊರತುಪಡಿಸಿದರೆ ಪ್ರತಿನಿತ್ಯ ಅತಿ ಹೆಚ್ಚು ಕೋವಿಡ್‌ ಪ್ರಕರಣಗಳು ಪತ್ತೆಯಾಗುತ್ತಿರುವುದು ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ. ಇದರಿಂದ ಆತಂಕ ಮತ್ತಷ್ಟು ಹೆಚ್ಚಾಗಿದೆ.

ಪರೀಕ್ಷಾ ಪ್ರಮಾಣ ಹೆಚ್ಚಳ:

ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ಶೀಘ್ರ ಪತ್ತೆ ಹಚ್ಚುವಿಕೆ, ಪರೀಕ್ಷಾ ಪ್ರಮಾಣ ಹೆಚ್ಚಳ ಹಾಗೂ ಚಿಕಿತ್ಸೆಗೆ ಒತ್ತು ನೀಡಲಾಗುತ್ತಿದೆ. ಪ್ರತಿನಿತ್ಯ ಸರಾಸರಿ 3,000 ದಿಂದ 4,000 ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದ್ದು, ಸೋಂಕು ಪತ್ತೆ ಪ್ರಮಾಣ ಹೆಚ್ಚಾಗಿದೆ ಎನ್ನುತ್ತಾರೆ ಡಿಎಚ್‌ಒ ಡಾ.ನಾಗಭೂಷಣ ಉಡುಪ.

ಕೇರಳದಲ್ಲಿ ಸೋಂಕು ಹೆಚ್ಚಾಗುತ್ತಿರುವುದು ಗಮನಕ್ಕೆ ಬಂದಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಗಡಿಯಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ ಎನ್ನುತ್ತಾರೆ ಅವರು.

ಮಕ್ಕಳ ರಕ್ಷಣೆಗೆ ಒತ್ತು: ಡಿಎಚ್‌ಒ

ಕೋವಿಡ್‌ ಮೂರನೇ ಅಲೆ ಮಕ್ಕಳಿಗೆ ಆತಂಕ ತಂದೊಡ್ಡಲಿದೆ ಎಂಬ ವರದಿ ಹಿನ್ನೆಲೆಯಲ್ಲಿ ವಾತ್ಸಲ್ಯ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ 15 ವರ್ಷದೊಳಗಿನ 2.40 ಲಕ್ಷ ಮಕ್ಕಳ ಆರೋಗ್ಯ ತಪಾಸಣೆ ನಡೆಯುತ್ತಿದ್ದು, ಆ.15ರೊಳಗೆ ಪೂರ್ಣಗೊಳ್ಳಲಿದೆ. ತಪಾಸಣೆ ವೇಳೆ ಪತ್ತೆಯಾದ ಗಂಭೀರ ಅಪೌಷ್ಟಿಕತೆ ಇರುವ ಮಕ್ಕಳಿಗೆ ಸಮಾಜ ಕಲ್ಯಾಣ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗಳ ಸಹಭಾಗಿತ್ವದಲ್ಲಿ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ. ಜತೆಗೆ, ತಲೆಸ್ಸೆಮಿಯಾ, ಲುಕೆಮಿಯಾ, ರಕ್ತದ ಕ್ಯಾನ್ಸರ್‌, ಮಧುಮೇಹ, ಎಂಡೋ ಸಲ್ಫಾನ್ ಪೀಡಿತ ಮಕ್ಕಳನ್ನು ಗುರುತಿಸಿ ಆಯುಷ್ಮಾನ್ ಭಾರತ ಯೋಜನೆಯಡಿ ಚಿಕಿತ್ಸೆ ನೀಡುವುದರ ಜತೆಗೆ ಹಾಗೂ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಕೋ ಮಾರ್ಬಿಲಿಟಿ ಇರುವ ಮಕ್ಕಳ ಪೋಷಕರಿಗೆ ಕೋವಿಡ್ ಲಸಿಕೆ ಹಾಕಲಾಗುತ್ತಿದೆ.

ಡಾ.ನಾಗಭೂಷಣ ಉಡುಪ, ಡಿಎಚ್ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT