ಸೋಮವಾರ, ಆಗಸ್ಟ್ 8, 2022
24 °C
ಜಿಲ್ಲೆಯಲ್ಲಿ ತಗ್ಗಿದ ಕೊರೊನಾ ಸೋಂಕು ಪ್ರಮಾಣ, ಎರಡನೇ ಅಲೆ ಇಳಿಮುಖ

ಉಡುಪಿ: ಫಲಕೊಟ್ಟ ಗ್ರಾ.ಪಂ ಲಾಕ್‌ಡೌನ್‌, ಮನೆ ಸೀಲ್‌ಡೌನ್‌

ಬಾಲಚಂದ್ರ. ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಜಿಲ್ಲೆಯಲ್ಲಿ ಲಾಕ್‌ಡೌನ್‌ ಬಳಿಕ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ದಿನವೊಂದಕ್ಕೆ ಒಂದೂವರೆ ಸಾವಿರದ ಗಡಿ ದಾಟಿದ್ದ ಸೋಂಕಿನ ಪ್ರಮಾಣ ಈಗ ಇಳಿಮುಖವಾಗಿದೆ. ಕೋವಿಡ್ ಸಾವುಗಳ ಸಂಖ್ಯೆಯೂ ಕಡಿಮೆಯಾಗಿದೆ. ಎರಡನೇ ಅಲೆ ಕ್ಷೀಣವಾಗುತ್ತಿರುವುದು ಸಾರ್ವಜನಿಕರಲ್ಲಿ ಸಮಾಧಾನ ಮೂಡಿಸಿದೆ.

ಎರಡನೇ ಅಲೆಯಲ್ಲಿ ಕೊರೊನಾ ಹಳ್ಳಿಗಳಿಗೆ ದಾಂಗುಡಿಯಿಟ್ಟ ಪರಿಣಾಮ ಸೋಂಕು ಪ್ರಸರಣ ವೇಗ ಪಡೆದುಕೊಂಡಿತ್ತು. ಗ್ರಾಮೀಣ ಭಾಗದಲ್ಲಿ ಸಮರ್ಪಕವಾದ ಹೋಂ ಐಸೊಲೇಷನ್‌ ವ್ಯವಸ್ಥೆ ಇಲ್ಲದ ಕಾರಣ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಸಾಗಿತ್ತು. ಮೇ 5ರಂದು ಗರಿಷ್ಠ 1,654 ಜನರಲ್ಲಿ ಸೋಂಕು ದೃಢಪಟ್ಟಿತ್ತು. ಪಾಸಿಟಿವಿಟಿ ದರ ಶೇ 50 ದಾಟಿತ್ತು. ಕೊರೊನಾ ಸ್ಫೋಟವಾಗಿದ್ದ ಈ ಸಂದರ್ಭದಲ್ಲಿ ಸೋಂಕು ನಿಯಂತ್ರಣಕ್ಕೆ ನೆರವಿಗೆ ಬಂದಿದ್ದು ಗ್ರಾಮ ಪಂಚಾಯಿತಿಗಳ ಲಾಕ್‌ಡೌನ್‌.

ಪಂಚಾಯತಿ ಲಾಕ್‌ಡೌನ್‌:

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ಸಂಘಟಿತವಾಗಿ 50ಕ್ಕಿಂತ ಹೆಚ್ಚು ಸೋಂಕಿತರಿದ್ದ ಗ್ರಾಮ ಪಂಚಾಯಿತಿಗಳನ್ನು ಸಂಪೂರ್ಣ ಲಾಕ್‌ಡೌನ್‌ ಮಾಡುವ ಮಹತ್ವದ ನಿರ್ಧಾರ ತೆಗೆದುಕೊಂಡಿತು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಚಿಸಲಾಗಿದ್ದ ಟಾಸ್ಕ್‌ ಫೋರ್ಸ್‌ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಗ್ರಾಮಗಳಲ್ಲಿ ಸೋಂಕು ನಿಯಂತ್ರಿಸಲಾಯಿತು ಎನ್ನುತ್ತಾರೆ ಜಿಲ್ಲಾಧಿಕಾರಿ ಜಿ.ಜಗದೀಶ್‌.

ಜಿಲ್ಲೆಯಲ್ಲಿ 40 ಗ್ರಾಮ ಪಂಚಾಯಿತಿಗಳನ್ನು ಲಾಕ್‌ಡೌನ್ ಮಾಡಿ ಸೋಂಕಿತರನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡಿದ್ದರಿಂದ ಸೋಂಕು ಹೆಚ್ಚಾಗಿ ಹರಡಲಿಲ್ಲ. ಗ್ರಾಮ ಪಂಚಾಯಿತಿಗಳ ಲಾಕ್‌ಡೌನ್‌ ರಾಜ್ಯದಲ್ಲೇ ಮೊದಲು ಉಡುಪಿಯಲ್ಲಿ ಅನುಷ್ಠಾನಕ್ಕೆ ಬಂತು. ಪರಿಣಾಮ, ಬಹಳಷ್ಟು ಗ್ರಾಮ ಪಂಚಾಯಿತಿಗಳು ಸೋಂಕು ಮುಕ್ತವಾದವು. ಇದರ ಹಿಂದೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿಯ ಶ್ರಮ ದೊಡ್ಡದು ಎಂದರು.

ಹಳ್ಳಿಗಳ ಕಡೆ ವೈದ್ಯರ ನಡೆ ಯಶಸ್ಸು:

ಸರ್ಕಾರದ ‘ಹಳ್ಳಿಗಳ ಕಡೆ ವೈದ್ಯರ ನಡೆ’ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಾಯಿತು. 70ಕ್ಕೂ ಹೆಚ್ಚು ವೈದ್ಯರು ಪ್ರತಿನಿತ್ಯ ಒಂದೊಂದು ಹಳ್ಳಿಗೆ ಭೇಟಿನೀಡಿ ಚಿಕಿತ್ಸೆ ನೀಡಿದರು. 15,000ಕ್ಕೂ ಹೆಚ್ಚು ಮಂದಿಯನ್ನು ಪರೀಕ್ಷೆಗೊಳಪಡಿಸಿ, ಸೋಂಕು ಪತ್ತೆಯಾದವರಿಗೆ ಚಿಕಿತ್ಸೆ ನೀಡಲಾಯಿತು ಎಂದರು.

ಪರೀಕ್ಷೆ ಪ್ರಮಾಣ ಹೆಚ್ಚಳ:

ಜಿಲ್ಲೆಯಲ್ಲಿ ಕೋವಿಡ್‌ ಪರೀಕ್ಷಾ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಿದ್ದರಿಂದ ಆರಂಭಿಕ ಹಂತದಲ್ಲೇ ಸೋಂಕಿತರನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡಲು ಸಾಧ್ಯವಾಯಿತು. ಹಿರಿಯರಿಗೆ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಿದ ಪರಿಣಾಮ ಮರಣ ಪ್ರಮಾಣವೂ ತಗ್ಗಿತು. ಸದ್ಯ ಜಿಲ್ಲೆಯಲ್ಲಿ ಸೋಂಕು ಕಡಿಮೆಯಾಗುತ್ತಿರುವುದು ಸಮಾಧಾನದ ವಿಚಾರ ಎಂದರು ಜಿಲ್ಲಾಧಿಕಾರಿ.

ಸೀಲ್‌ಡೌನ್‌ನಿಂದ ಸೋಂಕು ಇಳಿಕೆ

ಗ್ರಾಮಗಳಲ್ಲಿ ಹೋಂ ಐಸೊಲೇಷನ್‌ಗೆ ಸೂಕ್ತ ವ್ಯವಸ್ಥೆ ಇಲ್ಲದ್ದರಿಂದ, ಮನೆಯಲ್ಲಿ ಒಬ್ಬರಿಗೆ ಸೋಂಕು ತಗುಲಿದರೂ ಕುಟುಂಬದ ಎಲ್ಲರಿಗೂ ಹರಡುತ್ತಿತ್ತು. ‌ಜತೆಗೆ, ಸೋಂಕಿತ ವ್ಯಕ್ತಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿದ್ದರಿಂದ, ಸೋಂಕಿತರ ಮನೆಗೆ ಅಕ್ಕಪಕ್ಕದವರು ಬಂದು ಹೋಗುತ್ತಿದ್ದರಿಂದ ಸೋಂಕು ಪ್ರಸರಣ ಹೆಚ್ಚಾಗಿತ್ತು. ಇದಕ್ಕೆ ಕಡಿವಾಣ ಹಾಕಲು ಸೋಂಕಿತರು ಇರುವ ಮನೆಗಳನ್ನು ಸೀಲ್‌ಡೌನ್ ಮಾಡಲಾಯಿತು. ಮನೆಯವರ ಆರೋಗ್ಯದ ಮೇಲೆ ನಿಗಾ ಇರಿಸಲಾಯಿತು. ಪರಿಣಾಮ ಸೋಂಕು ಹರಡುವಿಕೆಗೆ ಬ್ರೇಕ್ ಬಿತ್ತು.

–ಜಿ.ಜಗದೀಶ್‌, ಜಿಲ್ಲಾಧಿಕಾರಿ

‘ಪರೀಕ್ಷೆ ಹೆಚ್ಚಳದಿಂದ ಸೋಂಕು ಕ್ಷೀಣ’

ಮೇ ತಿಂಗಳಲ್ಲಿ ಕೊರೊನಾ ಸೋಂಕು ಗರಿಷ್ಠ ಮಟ್ಟದಲ್ಲಿತ್ತು. ಸೋಂಕು ನಿಯಂತ್ರಣಕ್ಕೆ ತರಲು ಗ್ರಾಮಗಳಲ್ಲಿ ಕೋವಿಡ್ ಪರೀಕ್ಷಾ ಪ್ರಮಾಣವನ್ನು ಹೆಚ್ಚಿಸಲಾಯಿತು. ಸೋಂಕಿತರನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡಿದ್ದರಿಂದ ಸೋಂಕು ಇಳಿಮುಖವಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ 5 ಆಸುಪಾಸಿನಲ್ಲಿದೆ. ಮತ್ತಷ್ಟು ಕಡಿಮೆ ಮಾಡುವುದು ಆರೋಗ್ಯ ಇಲಾಖೆಯ ಗುರಿ.

–ಡಾ.ನಾಗಭೂಷಣ ಉಡುಪ, ಡಿಎಚ್‌ಒ

ಜೂನ್‌ 1ರಿಂದ ಸೋಂಕು ಪ್ರಮಾಣ

ಜೂನ್ 1–735

ಜೂ.2–636

ಜೂ.3–580

ಜೂ.4–561‌

ಜೂ.5–552

ಜೂ.6–494

ಜೂ.7–394‌

ಜೂ.8–204

ಜೂ.9–409

ಜೂ.10–289

ಜೂ.11–215

ಜೂ.12–258

ಜೂ.13–223

ಜೂ.14–123

ಜೂ.15–107

ಜೂ.16–159

ಜೂ.17–162

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು